ಶುಕ್ರವಾರ, ಆಗಸ್ಟ್ 12, 2022
20 °C

‘ಸೌಹಾರ್ದ ಪ್ರತಿಯೊಬ್ಬರಲ್ಲೂ ಇರಬೇಕಾದ ಶ್ರೇಷ್ಠ ಸಂಗತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಮತ್ತೊಬ್ಬರ ಸ್ಥಾನದಲ್ಲಿ ನಿಂತು ಅವರಿಗಾಗುವ ಅನುಭವವನ್ನು ಸಂವೇದಿಸುವ ಹೃದಯವಂತಿಕೆಯನ್ನು ಬೆಳೆಸಿಕೊಂಡರೆ ಜಗತ್ತಿನಲ್ಲಿ ಸೌಹಾರ್ದ ನಿಜವಾದ ಅರ್ಥದಲ್ಲಿ ಅನುಷ್ಠಾನವಾಗುತ್ತದೆ. ಶಾಂತಿ– ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ’ ಎಂದು ಬಸವಮಂದಿರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಎಂಎಲ್‌ವಿ ರೋಟರಿ ಸಭಾಂಗಣ ಭಾನುವಾರ ಏರ್ಪಡಿಸಿದ್ದ ಈದ್‌ ಸೌಹಾರ್ದ ಕೂಟದಲ್ಲಿ ಮಾತನಾಡಿದರು. ‘ಸೌಹಾರ್ದವು ಧರ್ಮಗಳ ನಡುವೆ ಇರಬೇಕಾದ ಸಂಗತಿ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬ ಮನುಷ್ಯರಲ್ಲೂ ಇರಬೇಕಾದ ಶ್ರೇಷ್ಠ ಸಂಗತಿ ಎಂಬುದನ್ನು ಗಮನಿಸಬೇಕು. ಮತ್ತೊಬ್ಬರ ನೋವು–ನಲಿವುಗಳನ್ನು ಅವರ ಸ್ಥಾನದಲ್ಲಿ ನಿಂತು ಅರ್ಥೈಸಿಕೊಳ್ಳಬೇಕು. ಒಳಿತು ನಮ್ಮಿಂದಲೇ ಪ್ರಾರಂಭವಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಬಾಂಧವ್ಯಗಳನ್ನು ಹೃದಯದಿಂದ ಕಾಪಾಡಿಕೊಳ್ಳಬೇಕು. ನಮ್ಮಿಂದಲೇ ಸೌಹಾರ್ದ ಆರಂಭಿಸಬೇಕು. ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಲು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ಬಿಷಪ್‌ ಡಾ.ಟಿ.ಅಂತೋನಿ ಸ್ವಾಮಿ ಮಾತನಾಡಿ, ಎಲ್ಲ ಧರ್ಮಗಳು ಸಮಾನ ಎಂಬ ಭಾವ ಮೈಗೂಡಿಸಿಕೊಳ್ಳಬೇಕು. ಎಲ್ಲ ಧರ್ಮಗಳ ಸಾರ ಒಳಿತು. ಆ ಒಳಿತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಗತ್ತಿಗೆ ಶಾಂತಿ ಅಗತ್ಯವಾಗಿ ಬೇಕಾಗಿದೆ. ಎಲ್ಲರೂ ಸಹೋದರತ್ವದಿಂದ ಬಾಳುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಶಾಂತಿ ಪ್ರಕಾಶನದ ವ್ಯವಸ್ಥಾ‍ಪಕ ಕಾರ್ಯದರ್ಶಿ ಮೊಹಮ್ಮದ್ ಕುಂಞ ಮಾತನಾಡಿ, ಮನುಷ್ಯನ ಶ್ರೀಮಂತಿಕೆ ಎಂದರೆ ಮನಸ್ಸಿನ ಶ್ರೀಮಂತಿಕೆ. ಮನಸ್ಸು ಚೆನ್ನಾಗಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದರು.

ರಿಜ್ವಾನ್‌ ಖಾಲಿದ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು