ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡೀಹಳ್ಳಿ ಸರ್ಕಾರಿ ಶಾಲೆಗೆ ಹೊಸ ಮೆರುಗು

ಹೊಸದುರ್ಗದ ‘ಧಾರ್ಮಿಕ ಕಲರ್ ವರ್ಲ್ಡ್’ ಕಲಾವಿದರ ಕೈಚಳಕ
Last Updated 16 ಸೆಪ್ಟೆಂಬರ್ 2020, 5:36 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಗಡೀಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಗೋಡೆಯಲ್ಲಿ ಹೊಸದುರ್ಗ ತಾಲ್ಲೂಕು ಧಾರ್ಮಿಕ ಕಲರ್ ವರ್ಲ್ಡ್ ಸಂಘದ ಕಲಾವಿದರು ತಮ್ಮ ಕಲಾಕುಂಚದಿಂದ ಮಕ್ಕಳ ಕಲಿಕಾ ಹಿತಾಸಕ್ತಿಗೆ ಅನುಗುಣವಾದ ಚಿತ್ರಗಳನ್ನು ಮೂಡಿಸಿದ್ದಾರೆ. ಇದು ಶಾಲೆಗೆ ಹೊಸ ಮೆರಗು ತಂದಿದ್ದು, ವಿದ್ಯಾರ್ಥಿ ಮತ್ತು ಪೋಷಕರನ್ನು ಆಕರ್ಷಿಸುತ್ತಿದೆ.

ಶಾಲಾ ಗೋಡೆ ಮತ್ತು ಕಾಂಪೌಂಡ್ ಮೇಲೆ ಕಲಾವಿದರು ವಿಶ್ವ ಪ್ರಸಿದ್ಧ ಜೋಗ ಜಲಪಾತ, ಮೈಸೂರು ಅರಮನೆ, ಐತಿಹಾಸಿಕ ಹಂಪಿ ಕಲ್ಲಿನ ರಥ, ಚಿತ್ರದುರ್ಗದ ಕೋಟೆ, ಗಡೀಹಳ್ಳಿಯ ಚನ್ನಕೇಶ್ವರ ದೇವಾಲಯ, ಸ್ಥಳೀಯ ಕಲ್ಲತ್ತಿಗಿರಿ ಜಲಪಾತವನ್ನು ಬಣ್ಣದಲ್ಲಿ ಮೂಡಿಸಿದ್ದಾರೆ.

12ನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಒನಕೆ ಒಬವ್ವ, ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಷ್ಟ್ರಕವಿ ಕುವೆಂಪು, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಸಿದ್ಧಗಂಗಾ ಶ್ರೀ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿಚಿತ್ರಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅಚ್ಚೊತ್ತಿವೆ.

ರಾಜಮನೆತನ- ಲಾಂಚನ, ಸಾಮಾನ್ಯ ಜ್ಞಾನದ ವಿಷಯಗಳು, ದಿಕ್ಕುಗಳು, ಯೋಗಾಸನದ ಆಸನಗಳು, ಸುಭಾಷಿತ, ಗಾದೆಗಳನ್ನು ಬರೆಯಲಾಗಿದೆ. ಸ್ಥಳೀಯ ಮತ್ತು ಪಾರಂಪರಿಕ ಸಂಪ್ರದಾಯಗಳನ್ನು ಸಾರುವ ಊರುಮಾರಮ್ಮ, ದಕ್ಷಿಣ ಕನ್ನಡದ ಭೂತಾರಾಧನೆ, ಯಕ್ಷಗಾನ, ವಾದ್ಯಗಳು, ದಸರಾ ಉತ್ಸವ, ಎತ್ತಿನ ಬಂಡಿ, ರಥೋತ್ಸವಗಳು ಇನ್ನು ಶಾಲಾ ಕಾಂಪೌಂಡ್ ಮುಂಭಾಗ ಕಲಾವಿದರ ಕೈಚಳಕದಲ್ಲಿ ರೂಪಗೊಂಡಿವೆ.

‘ಶಾಲಾ ಶಿಕ್ಷಕರು ಹಾಗೂ ಕಲರ್ ವರ್ಲ್ಡ್ ಸದಸ್ಯರು ಶಾಲೆಯನ್ನು ಆಕರ್ಷಿತಗೊಳಿಸುವ ಬಗ್ಗೆ ತಿಳಿಸಿದರು. ಅದಕ್ಕೆ ಅಗತ್ಯವಾದ ಬಣ್ಣ, ಕಲಾವಿದರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಸಹಕರಿಸಿದೆವು. ಈಗ ಶಾಲೆ ಐತಿಹಾಸಿಕ ಮತ್ತು ಶೈಕ್ಷಣಿಕ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದು ಸಂತಸ ತಂದಿದೆ’ ಎಂದು ಹಿರಿಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

‘ನಮ್ಮ ಶಾಲೆ, ನಮ್ಮೂರ ಶಾಲೆ ಮಾದರಿ ಆಗಿರಬೇಕು ಎಂಬ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ‘ಕಲರ್ ವರ್ಲ್ಡ್’ ತಂಡಕ್ಕೆ ಸಹಕರಿಸಿದ್ದಾರೆ. ಕಲಾ ತಂಡ ಶೈಕ್ಷಣಿಕ ಹಿತಾಸಕ್ತಿಯುಳ್ಳ ಚಿತ್ರಗಳನ್ನು ಮೂಡಿಸಿದೆ. ಇದು ಮಕ್ಕಳನ್ನು ಸೆಳೆಯುತ್ತಿದ್ದು, ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸಿದೆ’ ಎಂದು ಮುಖ್ಯ ಶಕ್ಷಕ ಜಿ.ಬಿ. ಆನಂದಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT