ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಿಗಳ ನೆರವು; ದಾಖಲಾತಿ ಹೆಚ್ಚಳ

ತೋಮರಶೆಟ್ಟಿ ಸರ್ಕಾರಿ ಶಾಲೆ: 6 ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲೀಗ 243 ವಿದ್ಯಾರ್ಥಿಗಳು
Last Updated 1 ಜುಲೈ 2022, 2:29 IST
ಅಕ್ಷರ ಗಾತ್ರ

ಕೊಪ್ಪ: ಮಕ್ಕಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ತೋಮರಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ 243 ಮಕ್ಕಳು ಕಲಿಯುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೌರಶಕ್ತಿ ದೀಪ, ಸ್ಮಾರ್ಟ್ ಟಿವಿ, ಆಕರ್ಷಕ ಗೋಡೆ ಬರಹ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ದಾನಿಗಳು, ಶಿಕ್ಷಕರು ಶ್ರಮಿಸಿದ್ದಾರೆ.

ಪಟ್ಟಣದ ಸುಭಾಷ್ ರಸ್ತೆಯ ದಿವಂಗತ ಎರ್ಮಾಳು ವಾಸುಶೆಟ್ಟಿ 1961ರಲ್ಲಿ ಒಂದೂವರೆ ಎಕರೆ ಜಾಗವನ್ನು ದಾನವಾಗಿ ನೀಡಿ ತಮ್ಮ ತಂದೆ ತೋಮರಶೆಟ್ಟಿ ಸ್ಮರಣಾರ್ಥ ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದರು. ಕಾಲ ಕಳೆದಂತೆ ಖಾಸಗಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸುವತ್ತ ಮುಖ ಮಾಡಿದ್ದರು. 2017-18ರಲ್ಲಿ ಕೇವಲ 6 ಮಕ್ಕಳ ಸಂಖ್ಯೆಗೆ ಇಳಿದಿತ್ತು.

ಆಗ ಸ್ಥಳೀಯ ಸ್ಪಂದನ ಸೇವಾ ಸಂಸ್ಥೆ, ಶಾಲಾ ಪುನಶ್ಚೇತನ ಸಮಿತಿಯು ದಾನಿಗಳ ಸಹಕಾರ ಪಡೆದು ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿದ್ದರ ಫಲವಾಗಿ ಪ್ರಸ್ತುತ ಎಲ್‌ಕೆಜಿ, ಯು.ಕೆ.ಜಿ ತರಗತಿಗಳಲ್ಲಿ 69 ಮಕ್ಕಳು, ಪ್ರಾಥಮಿಕ ಶಾಲೆಯಲ್ಲಿ 174 ಸೇರಿದಂತೆ ಒಟ್ಟು 243 ಮಕ್ಕಳು ಕಲಿಯುತ್ತಿದ್ದಾರೆ.

ವಾಸುಶೆಟ್ಟಿ ಪುತ್ರ ಕೆ.ವಿ.ಸತೀಶ್ ಶೆಟ್ಟಿ 2018-19ರಲ್ಲಿ ಸುಮಾರು ₹ 7 ಲಕ್ಷ ವೆಚ್ಛದಲ್ಲಿ ಆಧುನಿಕ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಶಾಲಾ ದಾಖಲಾತಿ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಸತೀಶ್ ಶೆಟ್ಟಿ, ಜಯಶ್ರೀ ದಂಪತಿ ದಿ.ರುದ್ರಮ್ಮ ಮತ್ತು ದಿ.ಎರ್ಮಾಳು ವಾಸುಶೆಟ್ಟಿ ಸ್ಮರಣಾರ್ಥ ₹ 40 ಲಕ್ಷ ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿದ್ದಾರೆ.

ಶಾಲಾ ಪುನಶ್ಚೇತನ ಸಮಿತಿಯ ಕಣ್ಣನ್ ಮೂಲಕ ಬೆಂಗಳೂರಿನ ಸೌಜನ್ಯ ಸೇವಾಶ್ರಮ ಟ್ರಸ್ಟ್ ವತಿಯಿಂದ ಪ್ರತಿವರ್ಷ ನೋಟ್ ಪುಸ್ತಕ, ಬ್ಯಾಗ್, ಟಿ ಶರ್ಟ್, ಡೈರಿ ಇತ್ಯಾದಿ ಕಲಿಕಾ ಸಾಮಗ್ರಿ ನೀಡುತ್ತಿದ್ದಾರೆ.

ಸ್ಪಂದನ ಸಂಸ್ಥೆ ಅಧ್ಯಕ್ಷರಾಗಿದ್ದ ಜಾನ್ ಪೆರೀಸ್, ಶಾಲಾ ಪುನಶ್ಚೇತನ ಸಮಿತಿ ಅಧ್ಯಕ್ಷರಾಗಿದ್ದ ಕೆ.ಎನ್.ಪ್ರಸನ್ನ ಶೆಟ್ಟಿ ಮುಂತಾದವರು 2018-19ರಲ್ಲಿಎಲ್‌ಕೆಜಿ, ಯುಕೆಜಿ ಆರಂಭಿಸಲು ಅಗತ್ಯವಿದ್ದ 2 ಕೊಠಡಿಗಳನ್ನು ನಿರ್ಮಿಸಲು ಶ್ರಮಿಸಿದ್ದರು. ಪ್ರಸ್ತುತ ಶಾಲಾ ಪುನಶ್ಚೇತನ ಸಂಸ್ಥೆ ಅಧ್ಯಕ್ಷರಾಗಿ ಕೆ.ಎನ್.ಪ್ರಸನ್ನ ಶೆಟ್ಟಿ, ಸ್ಪಂದನ ಸಂಸ್ಥೆ ಅಧ್ಯಕ್ಷರಾಗಿ ಶಂಕರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮೋಹನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದೆಲ್ಲದರ ಫಲವಾಗಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಮೂರನೇ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT