ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

ಭತ್ತ ಸಸಿಮಡಿ ನಿರ್ಮಿಸಲು ಭರದ ಸಿದ್ಧತೆ; ಮರಗಸಿ ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ
Published 21 ಮೇ 2024, 13:38 IST
Last Updated 21 ಮೇ 2024, 13:38 IST
ಅಕ್ಷರ ಗಾತ್ರ

ಮೂಡಿಗೆರೆ: ಬರದಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ವಾರದಿಂದೀಚೆಗೆ ಉತ್ತಮವಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮುಂಗಾರು ಪೂರ್ವದಲ್ಲಿ ಇದುವರೆಗೆ ಸರಾಸರಿ ಆರು ಇಂಚು ಮಳೆಯಾಗಿದ್ದು, ಭತ್ತದ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೂನ್ ಅಂತ್ಯದ ವೇಳೆಗೆ ಭತ್ತದ ನಾಟಿ ಮಾಡಬೇಕಿರುವುದರಿಂದ ಅಗಡಿಯಲ್ಲಿ ಸಸಿ ಮಡಿಗಳನ್ನು ನಿರ್ಮಿಸಿಕೊಳ್ಳಲು ಭತ್ತದ ಗದ್ದೆಗಳನ್ನು ಉಳುಮೆ ಮಾಡಲಾಗುತ್ತಿದೆ.

ನೀರಿಲ್ಲದೇ ಒಣಗಿದ್ದ ಕಾಫಿ ತೋಟಗಳಲ್ಲಿ ಚಿಗುರು ಕಾಣಿಸಿಕೊಳ್ಳುತ್ತಿದ್ದು, ಒಣಗಿದ ರಂಬೆಗಳಲ್ಲಿ ಅಳಿದುಳಿದ ಕಾಫಿ ಹೀಚುಗಳು ಹೂವಿನಿಂದ ಹೊರಬರತೊಡಗಿವೆ. ಗೊಬ್ಬರ ಹಾಕುವ ಕಾರ್ಯ ಬಿರುಸಿನಿಂದ ಸಾಗಿದೆ. ಬಿಸಿಲಿಗೆ ಹೆದರಿ ಕಾಫಿ ತೋಟಗಳಲ್ಲಿ ಮರಗಸಿಯನ್ನು ಮಾಡಿಸದ ರೈತರು ಮಳೆ ಬಿದ್ದು ಇಳೆ ತಂಪಾಗಿರುವುದರಿಂದ ಮರಗಸಿ ಮಾಡಿಸಲು ಮುಂದಾಗಿದ್ದಾರೆ. ಸ್ಥಳೀಯ ಕಾರ್ಮಿಕರ ಜತೆಗೆ ಮರಗಸಿಯಲ್ಲಿ ನೈಪುಣ್ಯತೆ ಪಡೆದ ತಮಿಳುನಾಡಿನ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.

ಶುಂಠಿಗದ್ದೆಯಲ್ಲಿ ಬಿತ್ತನೆಯಾಗಿದ್ದ ಶುಂಠಿ ಚಿಗುರೊಡೆಯ ತೊಡಗಿದ್ದು, ಮಣ್ಣು ಕೊಡುವ ಚಟುವಟಿಕೆಗಳು ಬಿರುಸುಗೊಂಡಿವೆ. ಏಕಕಾಲದಲ್ಲಿ ಭತ್ತದ ಗದ್ದೆ, ಕಾಫಿ, ಶುಂಠಿ ಗದ್ದೆಗಳಲ್ಲಿ ಚಟುವಟಿಕೆಗಳು ಭರದಿಂದ ಸಾಗುತ್ತಿರುವುದರಿಂದ ಕಾರ್ಮಿಕರಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಮಳೆಗಾಲ ಆರಂಭಗೊಳ್ಳುವ ಮುನ್ನವೇ ಕೃಷಿ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕಿರುವುದರಿಂದ ರೈತಾಪಿ ವರ್ಗವು ಬಿಡುವಿಲ್ಲದ ಚಟುವಟಿಕೆಯಲ್ಲಿ ತೊಡಗಿದೆ.

‘ಈ ಬಾರಿ ಮಳೆ ತಡವಾದರೂ ನಾಲ್ಕೈದು ದಿನ ಉತ್ತಮವಾಗಿ ಸುರಿದಿದ್ದರಿಂದ ಕೃಷಿ ಚಟುವಟಿಕೆಗೆ ವರದಾನವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಅದರೊಳಗೆ ಕೃಷಿ ಕಾರ್ಯಗಳನ್ನು ಮುಗಿಸಬೇಕಿರುವುದರಿಂದ ಒತ್ತಡ ಉಂಟಾಗಿದೆ. ಮಳೆಯು ಕಾಫಿ, ಕಾಳು ಮೆಣಸಿಗೆ ಹದ ತಂದು ಕೊಟ್ಟಿದೆ. ಈ ಬಾರಿ ಭತ್ತಕ್ಕೂ ಮಳೆ ಪೂರಕವಾಗಿರುವುದರಿಂದ ಕಳೆದ ಬಾರಿ ನೀರಿಲ್ಲದೇ ಸಸಿಮಡಿಗಳನ್ನು ಗದ್ದೆಗಳಲ್ಲಿಯೇ ಬಿಟ್ಟ ಪರಿಸ್ಥಿತಿ ಬಾರದು ಎಂಬ ನಿರೀಕ್ಷೆಯಿದೆ. ಜೂನ್ ಮೊದಲ ವಾರದಿಂದ ಮಳೆಗಾಲ ಪ್ರಾರಂಭವಾದರೆ ಕೃಷಿಗೆ ನೆರವಾಗುತ್ತದೆ’ ಎನ್ನುತ್ತಾರೆ ರೈತ ಗಿರೀಶ್ ಕುನ್ನಳ್ಳಿ.

ಭತ್ತ ಬೆಳೆ ಹೆಚ್ಚುವ ನಿರೀಕ್ಷೆ

ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿರುವುದರಿಂದ ಭತ್ತದ ಬೆಳೆಯುವ ಪ್ರದೇಶ ಹೆಚ್ಚಾಗುವ ನಿರೀಕ್ಷೆ ಇದೆ. ಈಗಾಗಲೇ ಅಕ್ಕಿಯ ದರವು ಮಾರುಕಟ್ಟೆಯಲ್ಲಿ ಹೆಚ್ಚಾಗಿರುವುದರಿಂದ ರೈತರು ಭತ್ತದ ಬೆಳೆಯತ್ತ ಆಸಕ್ತಿ ತೋರುತ್ತಿದ್ದು ಪಾಳು ಬಿದ್ದ ಗದ್ದೆಗಳಲ್ಲಿ  ಉಳುಮೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT