ಮಂಗಳವಾರ, ಮಾರ್ಚ್ 2, 2021
26 °C
ಬಸ್ ನಿರ್ವಾಹಕನ ಸಮಾಜಮುಖಿ ಕಾರ್ಯ– ಉಚಿತ ಸೇವೆ

ನರಸಿಂಹರಾಜಪುರ: ಶವ ಸಾಗಿಸಲು ಕಬ್ಬಿಣದ ರೆಡಿಮೆಡ್ ಚಟ್ಟ!

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಪಟ್ಟಣದ ಹಳೆಮಂಡಗದ್ದೆ ಸಮೀಪ ವಾಸವಾಗಿರುವ ಅನ್ನಪೂರ್ಣೇಶ್ವರಿ ಮೋಟಾರ್ಸ್ (ಕೆಕೆಬಿ) ಬಸ್‌ನಲ್ಲಿ ನಿರ್ವಾಹಕರಾಗಿರುವ ಶಿವಕುಮಾರ್ ಲಾಡ್ ಅವರು ಬಿದಿರಿನ ರೀತಿಯೇ ಕಾಣುವ ಕಬ್ಬಿಣದ ಚಟ್ಟವನ್ನು ತಯಾರಿಸಿ ಶವ ಸಾಗಿಸಲು ಉಚಿತವಾಗಿ ನೀಡುವುದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಬ್ಬಿಣದ ಚಟ್ಟವನ್ನು ತಯಾರಿಸಬೇಕೆಂಬ ಆಲೋಚನೆ ಬರಲು ಕಾರಣವಾದ ಸನ್ನಿವೇಶವನ್ನು ಶಿವಕುಮಾರ್ ವಿವರಿಸುವುದು ಹೀಗೆ:

‘ಕೆಲವು ತಿಂಗಳ ಹಿಂದೆ ಮನೆಯ ಸಮೀಪದ ಬಡ ಮಹಿಳೆಯೊಬ್ಬರು ಮರಣ ಹೊಂದಿದರು. ಅವರ ಶವ ಸಾಗಿಸಲು ಚಟ್ಟ ತಯಾರಿಸಲು ಬೇಕಾದ ಬಿದಿರನ ಪರಿಕರಗಳನ್ನು ತರಲು ಹೋದಾಗ ₹1,500 ಕೇಳಿದರು. ಚರ್ಚೆಯ ನಂತರ ₹1,400ಕ್ಕೆ ಕೊಟ್ಟರು. ಇದನ್ನು ನೋಡಿ ಮನಸ್ಸಿಗೆ ಬಹಳ ಬೇಸರವಾಯಿತು. ಬಡವರು ಮರಣಹೊಂದಿದಾಗ ಇಷ್ಟು ಹಣ ಹೊಂದಿಸುವುದು ಕಷ್ಟವಾಗುತ್ತದೆ ಎಂದು ಅರಿತು ಸಿದ್ಧ ಕಬ್ಬಿಣದ ಚಟ್ಟ ತಯಾರಿಸುವ ಚಿಂತನೆ ಮಾಡಿದೆ’.

ಈ ವಿಚಾರವನ್ನು ಅಭಿನವ ಗಿರಿರಾಜ್ ಬಳಿ ಪ್ರಸ್ತಾಪ ಮಾಡಿ ಅವರನ್ನು ಶಿವಮೊಗ್ಗಕ್ಕೆ ಕಳುಹಿಸಿ ಅಲ್ಲಿಂದ ಕಬ್ಬಿಣದ ಸಲಾಕೆಗಳನ್ನು ತರಿಸಿ ಬಿದಿರಿನ ಚಟ್ಟದ ಮಾದರಿಯಲ್ಲಿಯೇ ವೆಲ್ಡಿಂಗ್ ಶಾಪ್‌ನಲ್ಲಿ ನೆಟ್, ಬೋಲ್ಟ್ ಸಿಸ್ಟಂ ಮಾಡಿ ತಯಾರಿಸಿದರು. ಇದಕ್ಕೆ ಹಸಿರು ಮಿಶ್ರಿತ ಬಿದಿರಿನ ಚಿತ್ತಾರದ ಬಣ್ಣ ಬಳಿದು ಥೇಟ್‌ ಬಿದಿರಿನ ರೀತಿ ಕಾಣುವಂತೆ ಮಾಡಿದರು. ನಿರ್ವಹಣೆಯ ಜವಾಬ್ದಾರಿಯನ್ನು ಅಭಿನವ ಗಿರಿರಾಜ್ ಅವರಿಗೆ ವಹಿಸಿದರು. ಈವರೆಗೆ ಇದು ಮೂರು ಶವಗಳನ್ನು ಸಾಗಿಸಲು ಉಪಯೋಗವಾಗಿದೆ.

‘ಯಾರದ್ದೇ ಮನೆಯಲ್ಲಿ ಮರಣ ಸಂಭವಿಸಿದರೆ ಅವರು ಇದನ್ನು ತೆಗೆದುಕೊಂಡು ಹೋಗಬಹುದು. ಇದಕ್ಕೆ ಯಾವುದೇ ಹಣ ನೀಡಬೇಕಾಗಿಲ್ಲ’ ಎಂದರು.

ಪರಿಸರ ವಿನಾಶದ ಸಂದರ್ಭದಲ್ಲಿ ಬಿದಿರು ಸಹ ವಿನಾಶದ ಅಂಚಿಗೆ ತಲುಪಿದೆ. ಇದರಿಂದಾಗಿ ಬಿದಿರು ಬಳಸಿ ವಿವಿಧ ಪರಿಕರಗಳನ್ನು ತಯಾರಿಸುವ ಜನಾಂಗದವರು ಪರ್ಯಾಯ ವೃತ್ತಿಯತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿದಿರಿನ ಲಭ್ಯತೆಯೂ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಸಂಪ್ರದಾಯದಂತೆ ಶವ ಸಾಗಿಸಲು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡಿದ ಬಸ್ ನಿರ್ವಾಹಕ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ಸಂಪರ್ಕ ಸಂಖ್ಯೆ: ಶಿವಕುಮಾರ್ ಲಾಡ್ 9483813291, ಅಭಿನವಗಿರಿರಾಜ್ 9448203388.

‘ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶ’

‘ಮುಂದಿನ ದಿನಗಳಲ್ಲಿ ಬಿದಿರಿನಿಂದ ಚಟ್ಟ ಕಟ್ಟುವವರು ಯಾರು ಸಿಗುವುದಿಲ್ಲ. ಚಟ್ಟ ಕಟ್ಟಲು ಸಾಕಷ್ಟು ವೆಚ್ಚ ತಗುಲುತ್ತದೆ. ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಬ್ಬಿಣದ ಚಟ್ಟ ಸಿದ್ಧಪಡಿಸಿ ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಡಿಕೆ ಹಿಡಿದುಕೊಂಡು ಹೋಗಲು ಕಬ್ಬಿಣದ ಪರಿಕರ ಹಾಗೂ ಅಲ್ಯೂಮಿನಿಯಂ ಚಟ್ಟವನ್ನು ತಯಾರಿಸುವ ಉದ್ದೇಶ ಹೊಂದಿದ್ದೇನೆ’ ಎನ್ನುತ್ತಾರೆ ಶಿವಕುಮಾರ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು