ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ–ಮಹಾರಾಷ್ಟ್ರ ನಡುವೆ ಸಂಘರ್ಷ ಸೃಷ್ಟಿಸಲು ಕೆಲವರ ಸಂಚು: ಸಿ.ಟಿ. ರವಿ

Last Updated 18 ಡಿಸೆಂಬರ್ 2021, 10:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕೊಲ್ಹಾಪುರದಲ್ಲಿ ಕನ್ನಡ ಬಾವುಟ ಸುಡಲಾಗಿದೆ, ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿದೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಸಂಘರ್ಷವಾಗಲಿ ಎಂದು ಅರಾಜಕತವಾದಿಗಳು ಈ ಸಂಚು ರೂಪಿಸಿರುವ ಸಾಧ್ಯತೆ ಇದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅರಾಜಕತಾವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದ ಕಾಪಾಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರು, ಕರ್ನಾಟಕದಲ್ಲಿ ಲಕ್ಷಾಂತರ ಮರಾಠಿಗರು ಇದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ಧಕ್ಕೆ ಮಾಡಲು ಕೆಲವರು ರೂಪಿಸುವ ಷಡ್ಯಂತ್ರಗಳಿಗೆ ಎರಡೂ ರಾಜ್ಯಗಳವರೂ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

ಆದೇಶ ವಾಪಸ್‌ಗೆ ಒತ್ತಾಯ

‘ದತ್ತ ಜಯಂತಿ ನಿಟ್ಟಿನಲ್ಲಿ ಹಾಸನ ಜಿಲ್ಲಾಡಳಿತ ಹೊರಡಿಸಿರುವ ಪಾನ ನಿರೋಧ ಘೋಷಣೆ ಆದೇಶದಲ್ಲಿ ಬಳಸಿರುವ ಭಾಷೆ ಅವಹೇಳನಕಾರಿಯಾಗಿದೆ. ಸುತ್ತೋಲೆ ವಾಪಸ್‌ ಪಡೆಯಬೇಕು, ಹಾಸನ ಜಿಲ್ಲಾಧಿಕಾರಿ ಕ್ಷಮೆಯಾಚನೆ ಮಾಡಬೇಕು’ ಎಂದು ರವಿ ಆಗ್ರಹಿಸಿದರು.

‘ಆದೇಶದಲ್ಲಿ ಹೇಳಿರುವ ರೀತಿಯೇ ಅವರಿಗಿರುವ ತಪ್ಪು ಕಲ್ಪನೆಯನ್ನು ತೋರಿಸುತ್ತದೆ. ಅಪಮಾನದ ರೀತಿಯಲ್ಲಿ ಆದೇಶ ಇದೆ’ ಎಂದು ಅವರು ಹೇಳಿದರು.

ಆದೇಶದಲ್ಲಿ ಏನಿದೆ?

ಚಿಕ್ಕಮಗಳೂರಿನಲ್ಲಿ ಡಿ.19ರಂದು ನಡೆಯಲಿರುವ ದತ್ತ ಜಯಂತಿ ಅಂಗವಾಗಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಅರೇಹಳ್ಳಿ, ಬಿಕ್ಕೋಡು, ಬೇಲೂರು, ಹಳೇಬೀಡು ಮಾರ್ಗವಾಗಿ ಸಾವಿರಾರು ವಾಹನಗಳಲ್ಲಿ ದತ್ತ ಮಾಲಾಧಾರಿಗಳು ಚಿಕ್ಕಮಗಳೂರಿಗೆ ತೆರಳುತ್ತಾರೆ. ವಾಪಸಾಗುವಾಗ ಬೇಲೂರು, ಹಳೇಬೀಡು, ಬಿಕ್ಕೊಡು, ಅರೇಹಳ್ಳಿಯಲ್ಲಿ ವಾಹನ ನಿಲ್ಲಿಸಿ ಮದ್ಯ ಸೇವನೆ ಮಾಡಿ ನಂತರ ಅನ್ಯಧರ್ಮಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂತೆ ಘೋಷಣೆ ಕೂಗುತ್ತಾ ಹೋಗುವ ಸಂಭವ ಇರುವುದರಿಂದ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೇಲೂರು ತಾಲ್ಲೂಕಿನಾದ್ಯಂತ ಡಿ.19ರಂದು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ಪಾನ ನಿರೋಧ (ಒಣ) ದಿನ ಘೋಷಿಸಲು ಜಿಲ್ಲಾ ಪೊಲೀಷ್‌ ವರಿಷ್ಠಾಧಿಕಾರಿ ಪ್ರಸ್ತಾವ ಸಲ್ಲಿಸಿದ್ದಾರೆ. ಅದರಂತೆ ಬೇಲೂರು ತಾಲ್ಲೂಕು ವ್ಯಾಪ್ತಿಯಲ್ಲಿ 19ರಂದು ಮದ್ಯ ಮಾರಾಟ, ಸಾಗಣೆ ನಿಷೇಧಿಸಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT