ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಾಧ್ಯಕ್ಷ ಸ್ಥಾನ ಕೇಳಿ ಪಡೆಯಬಾರದು: ಸಿ.ಟಿ.ರವಿ

Published 1 ಆಗಸ್ಟ್ 2023, 5:49 IST
Last Updated 1 ಆಗಸ್ಟ್ 2023, 5:49 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಎಂಬುದು ಜವಾಬ್ದಾರಿಯುತ ಸ್ಥಾನ. ಅದನ್ನು ಕೇಳಿ ಪಡೆಯಬಾರದು, ಯಾರು ಸೂಕ್ತ ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

‘ಅಧ್ಯಕ್ಷ ಹುದ್ದೆಗೆ ಕಾಂಪಿಟೇಷನ್ ಇರುವುದಿಲ್ಲ. ಆದ್ದರಿಂದ ನಾನು ರೇಸ್‌ನಲ್ಲಿ ಇಲ್ಲ. ಯಾವುದೇ ಹುದ್ದೆ ಶಾಶ್ವತವಲ್ಲ. ಯಾವ ಸಂದರ್ಭಕ್ಕೆ ಯಾರ ಸೂಕ್ತ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ’ ಎಂದು ಸುದ್ದಿಗಾರರಿಗೆ ಹೇಳಿದರು.

‘ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನನ್ನನ್ನು ಮುಕ್ತಗೊಳಿಸಲಾಗಿದೆ. ದೆಹಲಿಯಲ್ಲಿ ಈಗ ಯಾವುದೇ ಕೆಲಸ ಇಲ್ಲ. ಕಚೇರಿ ಬಂದ್ ಮಾಡಿ ಸಹಕಾರ ನೀಡಿದವರಿಗೆ ಧನ್ಯವಾದ ಹೇಳುವುದಷ್ಟೇ ಬಾಕಿ ಇದೆ. ಅದಕ್ಕಾಗಿ ದೆಹಲಿಗೆ ಹೋಗುತ್ತೇನೆ’ ಎಂದರು.

‘ಬೆಲೆ ಏರಿಕೆಯ ಬರೆ ಎಳೆಯಲು ರಾಜ್ಯದ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿಲ್ಲ. ಹಾಲಿನ ದರ, ಅಬಕಾರಿ ಸುಂಕ ಏರಿಕೆ ಮಾಡುವ ಮೂಲಕ ಜನರಿಗೆ ಮೋಸ ಮಾಡಲಾಗಿದೆ. ಚುನಾವಣೆ ವೇಳೆ ಅಮಿತ್ ಶಾ ಅವರು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಪ್ರಚಾರ ಮಾಡಲಾಯಿತು. ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಅಮೂಲ್ ಮತ್ತು ನಂದಿನಿ ‍ಪರಸ್ಪರ ತಾಂತ್ರಿಕ ಸಹಕಾರ ಪಡೆದು ಕೆಲಸ ಮಾಡಬೇಕು ಎಂದಷ್ಟೇ ಹೇಳಿದ್ದರು. ಅದನ್ನು ತಪ್ಪಾಗಿ ಬಿಂಬಿಸುವ ಕೆಲಸ ನಡೆಯಿತು’ ಎಂದು ಹೇಳಿದರು.

ತಿರುಪತಿಗೆ ನಂದಿನಿ ತುಪ್ಪ 50 ವರ್ಷಗಳಿಂದ ಸರಬರಾಜಾಗುತ್ತಿತ್ತು. ತಿರುಪತಿ ಪ್ರಸಾದಕ್ಕೆ ನಂದಿನಿ ತುಪ್ಪ ಸೇರ್ಪಡೆಯಾಗುತ್ತಿದೆ ಎಂಬುದು ಹೆಮ್ಮೆಯ ವಿಷಯವಾಗಿತ್ತು. ಚುನಾವಣೆ ನಂತರ ತಿರುಪತಿಗೆ ತುಪ್ಪ ಸರಬರಾಜು ನಿಲ್ಲಿಸಿರುವುದನ್ನು ಕೇಳಿ ದುಃಖವಾಗಿದೆ. ಕೆಎಂಎಫ್ ಅಧ್ಯಕ್ಷರು ಮತ್ತು ಸಹಕಾರ ಸಚಿವರು ಪ್ರತಿಷ್ಟೆ ಬಿಟ್ಟು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತನಾಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT