ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಮುಚ್ಚಿದರೆ ರೈತರಿಗೆ ಆಪತ್ತು

ರೈತ, ಕಾರ್ಮಿಕ ತಿದ್ದುಪಡಿ ಕಾಯ್ದೆಗೆ ಜನರ ವಿರೋಧ: ಕಲ್ಕುಳಿ ವಿಠಲ ಹೆಗ್ಡೆ
Last Updated 22 ಜನವರಿ 2021, 1:50 IST
ಅಕ್ಷರ ಗಾತ್ರ

ಶೃಂಗೇರಿ: ‘ಕೇಂದ್ರ ಸರ್ಕಾರದ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಬೃಹತ್ ಚಳವಳಿಯನ್ನು ಅನ್ನ ತಿನ್ನುವವರು ಬೆಂಬಲಿಸಬೇಕು’ ಎಂದು ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ತಿಳಿಸಿದರು.

ರೈತ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆ ವಿರೋಧಿಸಿ ಶೃಂಗೇರಿಯ ಕನ್ನಡ ಭವನದಲ್ಲಿ ಗುರುವಾರ ವಿವಿಧ ಸಂಘಟನೆಗಳು ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿದರು.

‘ಎಪಿಎಂಸಿಯಲ್ಲಿ ಈ ಹಿಂದೆ ರೈತರು ತಮ್ಮ ಬೆಳೆಗಳನ್ನು ನಿಗದಿತ ಬೆಲೆಗೆ ಮಾರುತ್ತಿದ್ದರು. ಆದರೆ, ಎಪಿಎಂಸಿ ಮುಚ್ಚಿದರೆ ಕೃಷಿಕರು ಬೆಳೆದ ಬೆಳೆಗಳನ್ನು ಸಂತೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಎದುರಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‌

‘ಯುಪಿಎ ಸರ್ಕಾರವು ಕೂಡಾ ಕೃಷಿ ಕಾಯ್ದೆ ಜಾರಿಗೆ ತಂದಾಗ ವಿರೋಧ ಪಕ್ಷದಲ್ಲಿದ್ದ ನರೇಂದ್ರ ಮೋದಿ ಅವರು ಅದನ್ನು ತೀವ್ರವಾಗಿ ವಿರೋಧಿಸಿದ್ದರು. ಪ್ರಸ್ತುತ ಅಧಿಕಾರ ಬಂದಾಗ ಕಾಯ್ದೆಯನ್ನು ಬೆಂಬಲಿಸಿ ಜಾರಿಗೆ ತಂದಿದ್ದಾರೆ’ ಎಂದು ಕಲ್ಕುಳಿ ವಿಠಲ ಹೆಗ್ಡೆ ದೂರಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ‘ಜನವರಿ 26ರಂದು ರಾಜ್ಯದಲ್ಲಿ ಬೃಹತ್‌ ಜನ ಗಣರಾಜ್ಯೋತ್ಸವ ಪೆರೇಡ್ ಹಮ್ಮಿಕೊಂಡಿದ್ದು, ಮಡಿಕೇರಿ, ಮೈಸೂರು, ನೆಲಮಂಗಲ, ಧಾರವಾಡ ಮುಂತಾದ ಕಡೆಯಿಂದ 50 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ’ ಎಂದರು.

ಶೃಂಗೇರಿ ಕ್ಷೇತ್ರದ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶಂಕರ್, ಅದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ಮರಿಯಪ್ಪ, ಹಾಗಲಗಂಚಿ ವೆಂಕಟೇಶ್, ಸಂತೋಷ್ ಕಾಳ್ಯ, ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT