ಶನಿವಾರ, ಡಿಸೆಂಬರ್ 3, 2022
20 °C

ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಅಧಿಸೂಚನೆ: ರಾಜೇಗೌಡ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಅರಣ್ಯ ಇಲಾಖೆ ಯವರು ಕಂದಾಯ ಭೂಮಿಯನ್ನು ಅರಣ್ಯ ಎಂದು 1/4 ಅಧಿಸೂಚನೆ ಮಾಡುವಾಗ ರೈತರು ಒತ್ತುವರಿ ಮಾಡಿದ ಜಮೀನು ಬಿಡಬೇಕಾಗಿತ್ತು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ಅಕ್ರಮ–ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಣ್ಯ ಇಲಾಖೆಯವರು ಜವಾಬ್ದಾರಿಯಿಂದ ವರ್ತಿಸದೆ 1/4 ಅಧಿಸೂಚನೆ ಮಾಡುವಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆಗಳಲ್ಲಿ ಸಮರ್ಪಕ ಮಾಹಿತಿ ನೀಡದೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಅಧಿಸೂಚನೆ ಹೊರಡಿಸಿದ್ದಾರೆ. ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರು 2000ನೇ ಇಸವಿಯಿಂದಲೂ ಫಾರಂ ನಂ50, 53ಅಡಿ ಅರ್ಜಿ ಸಲ್ಲಿಸಿದ್ದಾರೆ. ಫಾರಂ ನಂ 57, 94ಸಿ, 94ಸಿಸಿ ಯಲ್ಲೂ ರೈತರು ಅರ್ಜಿ ಸಲ್ಲಿಸಿದ್ದಾರೆ. ಇದು ಇತ್ಯರ್ಥ್ಯವಾಗುವವರೆಗೂ 1/4 ಅಧಿಸೂಚನೆ ಹೊರಡಿಸಬಾರದು ಎಂದು ಸಲಹೆ ನೀಡಿದರು.

ಯಾವುದೇ ಬಗರ್ ಹುಕುಂ ಜಮೀ ನಿಗೆ ಹಕ್ಕು ಪತ್ರ ನೀಡಬೇಕಾದರೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಇದನ್ನು ಮೀರಿ ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ಹಕ್ಕು ಪತ್ರ ನೀಡಿದರೆ ಇದಕ್ಕೆ ತಹಶೀಲ್ದಾರ್ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದರು.

ಬಗರ್ ಹುಕುಂ ಸಮಿತಿ ಸದಸ್ಯ ಹೊಸೂರು ದಿನೇಶ್ ಮಾತನಾಡಿ, 2008ರಲ್ಲೂ ಜಿಲ್ಲಾಧಿಕಾರಿಯು ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ನೀಡಬಾರದೆಂದು ಆದೇಶ ಮಾಡಿದ್ದಾರೆ. ಆನಂತರ ಬಗರ್ ಹುಕುಂ ಸಮಿತಿಯವರು ರೈತರಿಗೆ ಹಕ್ಕು ಪತ್ರ ನೀಡಿದ್ದಾರೆ. ಸರ್ಕಾರವೇ ಬಗರ್ ಹುಕುಂ ಸಮಿತಿ ರಚನೆ ಮಾಡಿದೆ. ಕಂದಾಯ ಭೂಮಿಯನ್ನು ರೈತರು ಒತ್ತುವರಿ ಮಾಡಿದ್ದರೆ ಅದಕ್ಕೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಒಪ್ಪಿಗೆ ಏಕೆ ಬೇಕು ಎಂದು ಪ್ರಶ್ನಿಸಿದರು.

ಈಗಾಗಲೇ ಶೃಂಗೇರಿ ಕ್ಷೇತ್ರದಲ್ಲಿ 10 ಸಾವಿರ ಬಗರ್ ಹುಕುಂ ಅರ್ಜಿ ಹಾಗೆಯೇ ಉಳಿದಿದೆ. ಅರಣ್ಯ ಭೂಮಿಯ ಡೀಲೈನ್‌ನ ಹೊರಗೆ ಇರುವ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿದ ರೈತರಿಗೆ ನೀಡುವುದು ಸೂಕ್ತವಾಗಿದೆ. ಬಗರ್ ಹುಕುಂ ಸಮಿತಿ ಇದ್ದರೂ ರೈತರಿಗೆ ಹಕ್ಕು ಪತ್ರ ನೀಡದಿದ್ದರೆ ಪ್ರಯೋಜನವಿಲ್ಲ ಎಂದರು.

ಸಮಿತಿಯ ಸದಸ್ಯ ಮಂಜುನಾಥ್, ಸದಸ್ಯಕಾರ್ಯದರ್ಶಿ ತಹಶೀಲ್ದಾರ್ ಎಸ್.ವಿಶ್ವನಾಥ್, ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಸಚ್ಚಿನ್, ಬಾಳೆಹೊನ್ನೂರು ವಲಯ ಅರಣ್ಯಾಧಿಕಾರಿ ಸಂದೀಪ್, ಎನ್.ಆರ್.ಪುರ ಉಪವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಉಪತಹಶೀಲ್ದಾರ್ ನಾಗೇಂದ್ರಪ್ಪ, ಕಂದಾಯ ನಿರೀಕ್ಷಕ ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.