ಮಂಗಳವಾರ, ಮೇ 24, 2022
27 °C
ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ

ರಾಜ್ಯ ಸರ್ಕಾರದ ಮಲತಾಯಿ ಧೋರಣೆ: ರಾಜೇಗೌಡ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ಶೃಂಗೇರಿ ಕ್ಷೇತ್ರದ ಮೂರು ತಾಲ್ಲೂಕುಗಳನ್ನು ಅತಿವೃಷ್ಟಿ ಬಾಧಿತ ತಾಲ್ಲೂಕುಗಳೆಂದು ಸರ್ಕಾರ ಘೊಷಿಸಿದ್ದರೂ, ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಶೃಂಗೇರಿ ಕ್ಷೇತ್ರಕ್ಕೆ ಮಲತಾಯಿ ಧೋರಣೆ ತೋರಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮಳೆಯಿಂದ ಎನ್.ಆರ್.ಪುರ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಹಾನಿ ಸಂಭವಿಸಿತ್ತು, ಸೇತುವೆಗಳು ಕೊಚ್ಚಿ ಹೋಗಿವೆ. ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು ನಷ್ಟವಾಗಿದೆ. ಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದ ಗಮನ ಸೆಳೆದಿದ್ದಾರೆ. ಈವರೆಗೂ ಹಣ ಅನುದಾನ ಬಿಡುಗಡೆಯಾಗಿಲ್ಲ’ ಎಂದರು.

‘ಮಾಗುಂಡಿ, ಖಾಂಡ್ಯದ ಕೆಲವು ಭಾಗ, ಬಸರೀಕಟ್ಟೆ ಭಾಗದಲ್ಲಿ ಹೆಚ್ಚು ಹಾನಿ ಸಂಭವಿಸಿದೆ. 4.9 ಸಾವಿರ ಹೆಕ್ಟೇರ್ ತೋಟದ ಪ್ರದೇಶ ಹಾನಿಯಿಂದ ಅಂದಾಜು ₹ 6.83 ಕೋಟಿ, 175 ಎಕರೆ ಕೃಷಿ ಭೂಮಿ ಹಾನಿಯಿಂದ ಅಂದಾಜು ಸುಮಾರು ₹ 3.50 ಕೋಟಿ ನಷ್ಟ ಸಂಭವಿಸಿದೆ. 12 ಮನೆಗಳು ಪೂರ್ಣ ಹಾನಿ, 31 ಮನೆಗಳು ತೀವ್ರ ಹಾನಿ, 87 ಮನೆಗಳು ಭಾಗಶ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ₹ 17 ಕೋಟಿಯಷ್ಟು ಹಾನಿಯಾಗಿದೆ. ಪಿ.ಆರ್.ಇ.ಡಿ ಗೆ ಸೇರಿದ ರಸ್ತೆ ₹ 157 ಕೋಟಿಯಷ್ಟು ಹಾನಿ ಸಂಭವಿಸಿದೆ’ ಎಂದು ವಿವರಿಸಿದರು.

‘ನರೇಗಾ ಯೋಜನೆ ಹೊರತುಪಡಿಸಿ ಯಾವುದೇ ಅನುದಾನ ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡಿಲ್ಲ. ಪಂಚಾಯಿತಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಹಣಕ್ಕೆ ಸಿಗುವ ಬಡ್ಡಿ ಮೊತ್ತವನ್ನು ಸರ್ಕಾರ ಪಂಚಾಯಿತಿಯ ಬಳಕೆಗೆ ನೀಡದೆ ವಾಪಸ್ ಪಡೆದಿದ್ದು ನಾಚಿಕೆ ಗೇಡಿನ ಸಂಗತಿಯಾಗಿದೆ’ ಎಂದು ಟೀಕಿಸಿದರು.

‘ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ. ಪ್ರಸ್ತುತ ಬಿಜೆಪಿ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿದೆ. ಪ್ರತಿ ತಿಂಗಳು ಅತ್ಯಗತ್ಯ ಔಷಧಿ ಖರೀದಿಗೆ ನೀಡಬೇಕಿದ್ದ ಮೊತ್ತವನ್ನು ಸರ್ಕಾರ ನೀಡುತ್ತಿಲ್ಲ’ ಎಂದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಮುಖಂಡರಾದ ಬರ್ಕತ್ ಆಲಿ, ಸಂದೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು