ಶನಿವಾರ, ಜನವರಿ 28, 2023
16 °C

ದಲಿತ ಕುಟುಂಬದ ವಿರುದ್ಧ ಪ್ರತಿ ದೂರು: ಆರೋಪಿಗಳ ಪತ್ತೆಗೆ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತಾಲ್ಲೂಕಿನ ಹುಣಸೆ ಹಳ್ಳಿಪುರ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ 10 ಜನರನ್ನು ಕೂಲಿಲೈನ್‌ ಮನೆಯಲ್ಲಿ ಕೂಡಿ ಹಾಕಿ ಹಿಂಸಿಸಿದ ಪ್ರಕರಣದ ಆರೋಪಿಗಳಾದ ಜಗದೀಶ ಗೌಡ, ಪುತ್ರ ತಿಲಕ್‌ ತಲೆಮರೆಸಿಕೊಂಡಿದ್ದಾರೆ.

‘ಎಸ್ಟೇಟ್‌ ಮಾಲೀಕ ಜಗದೀಶ ಹಾಗೂ ಅವರ ಮಗ ತಿಲಕ್‌ ಅವರ ಪತ್ತೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎನ್‌ಆರ್‌ ಪುರ ಪೊಲೀಸ್‌‌ ಇನ್‌ಸ್ಪೆಕ್ಟರ್‌ ನೇತತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದರು.

‘ಕಾರ್ಮಿಕ ಮಹಿಳೆ ಅರ್ಪಿತಾ ಮೇಲೆ ಹಲ್ಲೆ ಮಾಡಿದಾಗ ಪೆಟ್ಟಾಗಿ ಅವರಿಗೆ ಗರ್ಭಪಾತ ಆಗಿದೆ ಎಂದು ಆರೋಪಿ ಸಿರುವುದರಲ್ಲಿ ಹುರುಳಿಲ್ಲ. ಕೆಲ ದಿನಗಳ ಹಿಂದೆಯೇ ಅವರಿಗೆ ಗರ್ಭಪಾತವಾಗಿದೆ. ಅದಕ್ಕೆ ದಾಖಲೆ ಸಿಕ್ಕಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿದೂರು: ಏತನ್ಮಧ್ಯೆ, ‘ಹ್ಯಾರಂಬಿ ಪುರದ ಮನೆಯ ಕಾಂಪೌಂಡ್‌ನೊಳಕ್ಕೆ ತೋಟದ ಕಾರ್ಮಿಕರು ನುಗ್ಗಿ ಹೂವಿನ‌ ಕುಂಡಗಳನ್ನು ಒಡೆದುಹಾಕಿ, ಕೊಲೆಗೆ ಯತ್ನಿಸಿದ್ದಾರೆ’ ಎಂದು ಎಸ್ಟೇಟ್‌ ಮಾಲೀಕ ಜಗದೀಶ ಅವರ ಪತ್ನಿ ಅಶ್ವಿನಿ ದೂರು ನೀಡಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕು ಗಾಳಿಗಂಡಿ ಪ್ರದೇಶದ ಕಾರ್ಮಿಕರಾದ ಎಂ. ಸತೀಶ, ಕವಿತಾ, ಹರೀಶ, ಶಿವ, ಇಂದಿರಾ, ಮಂಜುನಾಥ, ರೂಪಾ, ಮುತ್ತಯ್ಯ, ಗುಲಾಬಿ, ಸತೀಶ, ಚೈತ್ರಾ, ಧನುಶ್‌, ವಿಜಯ, ಅರ್ಪಿತಾ, ಕಿರಣ್‌ ವಿರುದ್ಧ ಐಪಿಸಿ 143 (ಅಕ್ರಮ ಕೂಟ), 147 (ಗಲಭೆ), 148 (ಅಪಾಯಕಾರಿ ಆಯುಧ ಹಿಡಿದು ಹಲ್ಲೆ), 149 (ಅಕ್ರಮವಾಗಿ ಗುಂಪು ಸೇರುವುದು), 448 (ಅತಿಕ್ರಮ ಪ್ರವೇಶ) ಕಲಂಗಳ ಅಡಿಯಲ್ಲಿ ಬಾಳೆಹೊನ್ನೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಕಾರ್ಮಿಕರು ತೋಟದ ಕೂಲಿ ‌ಕೆಲಸಕ್ಕಾಗಿ ಜುಲೈನಲ್ಲಿ ₹ 9 ಲಕ್ಷ ಹಣ ಮುಂಗಡ ಪಡೆದಿದ್ದರು. ಕೂಲಿಲೈನ್‌ನಲ್ಲಿ ವಾಸ ಇದ್ದರು. ನಮಗೆ ತಿಳಿಯದಂತೆ ಕಾರ್ಮಿಕರು ಕಾಡುಪ್ರಾಣಿ ಬೇಟೆಯಲ್ಲಿ ತೊಡಗಿದ್ದರು. ಇಂಥ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ಕೃತ್ಯ ಮುಂದುವರೆಸಿದ್ದರು. ಮುಂಗಡ ಹಣ ವಾಪಸ್ ನೀಡಿ ಹೋಗಿ ಎಂದು ಒಂದು ತಿಂಗಳು ಕಾಲಾವಕಾಶ ನೀಡಿದ್ದೆವು. ಹಣ ಹಿಂದಿರುಗಿಸಿ, ವಾಪಸ್‌ ಹೋಗಿ ಎಂದು ಹೇಳಿದ್ದಕ್ಕೆ ಕಾರ್ಮಿಕರು ಸಿಟ್ಟಾಗಿ ಕತ್ತಿ, ದೊಣ್ಣೆ ಹಿಡಿದು ಇದೇ 10ರಂದು ಮನೆ ಆವರಣಕ್ಕೆ ನುಗ್ಗಿ ಕೃತ್ಯ ಎಸಗಿದರು. ನಾವು (ಪತಿ ಜಗದೀಶ, ಪುತ್ರ ತಿಲಕ್‌) ಮನೆಯೊಳಗೆ ಚಿಲಕ ಹಾಕಿಕೊಂಡು ತಪ್ಪಿಸಿಕೊಂಡೆವು. ನಂತರ ಚಿಕ್ಕಮಗಳೂರಿಗೆ ಬಂದೆವು‘ ಎಂದು ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು