ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ದಶಕ ಕಳೆದರೂ ಸಿಗದ ವಸತಿ ನಿವೇಶನ

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಸಾಗದ ಕನಸು
Published 5 ಜುಲೈ 2023, 6:38 IST
Last Updated 5 ಜುಲೈ 2023, 6:38 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಸತಿರಹಿತರು ನಿವೇಶನ ಹೊಂದಿ ಸ್ವಂತ ಸೂರು ಹೊಂದಬೇಕೆಂಬ ಕನಸು ದಶಕಗಳು ಕಳೆದರೂ ನನಸಾಗಿಲ್ಲ.

ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಅವರು ರಾಜೀವ್ ನಗರ ಬಡಾವಣೆ ನಿರ್ಮಾಣ ಮಾಡಿ ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿದ್ದರು. ಅದನ್ನು ಹೊರತುಪಡಿಸಿದರೆ ಸುಮಾರು 2 ದಶಕಗಳಿಂದ ವಸತಿರಹಿತರಿಗೆ ನಿವೇಶನ ಹಂಚಿಕೆಯೇ ಆಗಿಲ್ಲ. 2008ರಿಂದ 2013ರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಶಾಸಕರಾಗಿದ್ದ ಡಿ.ಎನ್.ಜೀವರಾಜ್ ಪಟ್ಟಣಕ್ಕೆ ಹೊಂದಿಕೊಂಡಿರುವ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಳುವಳ್ಳಿ ಗ್ರಾಮದ 5 ಎಕರೆ ಗ್ರಾಮಠಾಣಾ ಪ್ರದೇಶದಲ್ಲಿ ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ನೀಡಲು ಮಂಜೂರು ಮಾಡಿಸಿದ್ದರು. ಅಂದಿನ ಪಟ್ಟಣ ಪಂಚಾಯಿತಿಯಲ್ಲಿದ್ದ ಬಿಜೆಪಿ ಆಡಳಿತ ಮಂಡಳಿ ಈ ಜಾಗದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಡಾವಣೆ ನಿರ್ಮಿಸಿ 169 ನಿವೇಶನಗಳ ನೀಲಿ ನಕ್ಷೆ ತಯಾರಿಸಿತ್ತು. ಆದರೆ, ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿರಲಿಲ್ಲ.

ಅಕ್ಟೋಬರ್ 2014ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನರಹಿತರ ಸಮೀಕ್ಷೆ ಮಾಡಿ, ಬಂದ ಅರ್ಜಿಗಳ ಬಗ್ಗೆ ಸಮೀಕ್ಷೆ ಉಸ್ತುವಾರಿ ತಂಡದವರಿಂದ ಭೌತಿಕ ಸ್ಥಳ ತನಿಖೆ ಮಾಡಿಸಿ ಪಟ್ಟಿಯನ್ನು ವೆಬ್‌ಸೈಟ್‌ಗೆ ಅಳವಡಿಸಬೇಕು; ಸೂಚನಾ ಫಲಕದಲ್ಲೂ ಪ್ರಕಟಿಸಿ ಆಕ್ಷೇಪಣೆಗಳಿದ್ದರೆ ತಿದ್ದುಪಡಿ ಮಾಡಿ ಆನ್‌ಲೈನ್‌ಗೆ ಅಳವಡಿಸಬೇಕು. ಬಳಿಕ ಶಾಸಕರ ನೇತೃತ್ವದ ಜಾಗೃತಿ ಸಭೆ ಕರೆದು ಅನುಮೋದನೆ ಪಡೆಯಬೇಕು ಎಂದು ಆದೇಶ ಹೊರಡಿಸಿತ್ತು.

ಅಂದು ಪಟ್ಟಣ ಪಂಚಾಯಿತಿಯಲ್ಲಿದ್ದ ಕಾಂಗ್ರೆಸ್‌ ಆಡಳಿತ ಮಂಡಳಿ ನಿವೇಶನ ರಹಿತರ ಬಗ್ಗೆ ಸಮೀಕ್ಷೆ ಕೈಗೊಳ್ಳದೆ ಏಕಾಏಕಿ ನಿವೇಶನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿತ್ತು. ಸ್ವಂತ ಸೂರು ನಿರ್ಮಿಸಿಕೊಳ್ಳಬಹುದು ಎಂಬ ಆಸೆಯಿಂದ ಸುಮಾರು 436 ಮಂದಿ ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದರು. ಇದರಿಂದ ಪಟ್ಟಣ ಪಂಚಾಯಿತಿಗೆ ಸಾವಿರಾರು ರೂಪಾಯಿ ಆದಾಯ ದೊರೆಯಿತೇ ಹೊರತು ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಧ್ಯವಾಗಲಿಲ್ಲ.

ಅಂದು ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದ ಅಂದಿನ ಶಾಸಕ ಡಿ.ಎನ್.ಜೀವರಾಜ್, ನಿವೇಶನ ರಹಿತರಿಗೆ ನಿವೇಶನ ಹಂಚಲು ಪ್ರತಿ ವಾರ್ಡ್‌ನಲ್ಲಿ ಸಭೆ ನಡೆಸಿದ್ದರೂ ನಿವೇಶನ ಹಂಚಲು ಸಾಧ್ಯವಾಗಲಿಲ್ಲ. 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಟಿ.ಡಿ.ರಾಜೇಗೌಡ ಅವರು ಜುಲೈ 2022ರಲ್ಲಿ ಆಶ್ರಯ ಸಮಿತಿ ಸಭೆಯಲ್ಲಿ 158 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಬಡಾವಣೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದಿಂದ ಅನುದಾನ ಬಿಡುಗಡೆಯೂ ಆಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದರಿಂದ ನಿವೇಶನ ರಹಿತರ ಕನಸು ಈಡೇರಲೇ ಇಲ್ಲ.

ಸ್ವಂತ ಸೂರು ನಿರ್ಮಿಸಿಕೊಳ್ಳಬೇಕೆಂಬ ಉದ್ದೇಶದಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಏಳೆಂಟು ವರ್ಷಗಳು ಕಳೆದಿವೆ. ಈಗಲಾದರೂ ನಿವೇಶನ ನೀಡಿದರೆ ಅನುಕೂಲವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಫಲಾನುಭವಿಯೊಬ್ಬರು ತಿಳಿಸಿದರು.

ಆಶ್ರಯ ಯೋಜನೆಯಡಿ 158 ಫಲಾನುಭವಿಗಳ ಆಯ್ಕೆ ಪೂರ್ಣಗೊಂಡಿದ್ದು, ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಯಲ್ಲಿ ಫಲಾನುಭವಿಗಳ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಕ್ರಮ ಸಂಖ್ಯೆಯ ಆಧಾರದಲ್ಲಿ ನಿವೇಶನ ಹಂಚಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಎ.ಚಂದ್ರಕಾಂತ್ ತಿಳಿಸಿದರು.

ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶನ ಹಂಚಲು ಬಡಾವಣೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲೇ ಆಶ್ರಯ ಸಮಿತಿ ಸಭೆ ಕರೆದು ಆಯ್ಕೆಯಾಗಿರುವ ಫಲಾನುಭವಿಗಳಿಗೆ ನಿವೇಶನ ಹಂಚಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT