ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಬೀಡಾಡಿ ದನಗಳ ಹಾವಳಿ: ತಪ್ಪದ ಕಿರಿಕಿರಿ

ರಘು ಕೆ.ಜಿ.
Published 28 ಮೇ 2024, 6:59 IST
Last Updated 28 ಮೇ 2024, 6:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆ, ಉಪ್ಪಳ್ಳಿ ಭಾಗದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ವರ್ತಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಇಲ್ಲಿನ ಮಾರ್ಗದಲ್ಲಿ ಹಣ್ಣು–ತರಕಾರಿ, ಬೇಕರಿ, ಮಾಂಸ ಮಾರಾಟ ಮಳಿಗೆ, ಪ್ರಾವಿಜನ್‌ ಸ್ಟೋರ್, ಖಾಸಗಿ ಬಸ್‌ ನಿಲ್ದಾಣ, ಆಸ್ಪತ್ರೆಗಳು ಇದ್ದು ವ್ಯಾಪಾರ ಚಟುವಟಿಕೆಗಳ ಕೇಂದ್ರವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ನಡು ರಸ್ತೆಯ ಎಲ್ಲೆಂದರಲ್ಲಿ ಬೀಡಾಡಿ ದನಗಳು ಮಲಗಿ ಸಂಚಾರ ದಟ್ಟಣೆ ಉಂಟಾಗಿ ಅಪಘಾತಗಳಿಗೂ ಕಾರಣವಾಗುತ್ತಿವೆ.

ಬೀಡಾಡಿ ದನಗಳು ಹಿಂಡು ಹಿಂಡಾಗಿ ಆಹಾರವನ್ನು ಅರಸಿ ಬೇಕರಿ, ತರಕಾರಿ, ಹೂವು, ಹಣ್ಣಿನ ಮಳಿಗೆಗಳಿಗೆ ಬರುತ್ತವೆ. ಕೆಲವು ವರ್ತಕರು ತಿಂಡಿ–ತಿನಿಸು ನೀಡಿ ಉಪಚರಿಸುತ್ತಾರೆ. ಬಳಿಕ ಅವುಗಳು ರಸ್ತೆ ಬದಿಯಲ್ಲಿಯೇ ಮಲಗಿ ವಾಹನ ಸಂಚಾರ ಹಾಗೂ ವ್ಯಾಪಾರಕ್ಕೆ ತೊಂದರೆಪಡಿಸುತ್ತಿವೆ. ಪಾದಚಾರಿಗಳು ಓಡಾಡುವುದೇ ಕಷ್ಟ ಎಂಬುದು ಇಲ್ಲಿನ ವ್ಯಾಪಾರಿಗಳ ಅಳಲು.

ನಗರದಲ್ಲಿ ಸುಮಾರು 500ಕ್ಕೂ ಅಧಿಕ ಬೀಡಾಡಿ ದನಗಳಿವೆ. ಈ ಪೈಕಿ ಗೌರಿಕಾಲುವೆ, 60 ಫೀಟ್ ರಸ್ತೆ, ಹೊಸಮನೆ ಬಡಾವಣೆ, ರಾಮನಹಳ್ಳಿ, ಶಂಕರಪುರ, ಕೋಟೆ, ಸಂತೆ ಮೈದಾನ, ಹೌಸಿಂಗ್ ಬೋರ್ಡ್, ಕೆ.ಎಂ. ರಸ್ತೆ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಸಂಖ್ಯೆ ಹೆಚ್ಚಿದೆ. ದಿನದಿಂದ ದಿನಕ್ಕೆ ಬೀಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿದ್ದರೂ  ನಗರಸಭೆ ಕಣ್ಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರ ದೂರು.

ನಗರಸಭೆ ವತಿಯಿಂದ ಕಳೆದ ವರ್ಷ 100ರಿಂದ 150 ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಬಿಡಲಾಗಿತ್ತು. ಪತ್ರಿಕೆಗಳ ಮೂಲಕವೂ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿತ್ತು. ಈಗ ಮತ್ತೆ ಅವುಗಳನ್ನು ಹಿಡಿದು ಗೋಶಾಲೆಗಳಿಗೆ ವಹಿಸಲು ಟೆಂಡರ್ ಕರೆಯಲಾಗಿದೆ. ಚುನಾವಣೆ ಕಾರಣ ವಿಳಂಬವಾಗುತ್ತಿದೆ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ನಾಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಗರಸಭೆ ಹಾಗೂ ಪ್ರಾಣಿ ದಯಾ ಸಂಘದ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ದನಗಳನ್ನು ಮೇಯಲು ನಗರದ ಮುಖ್ಯ ರಸ್ತೆಗಳಿಗೆ ಬಿಡದಂತೆ ಮಾಲೀಕರಿಗೆ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ. ಆದರೂ, ಉಲ್ಲಂಘನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಬಿಡಲಾಗುವುದು. ಆಗ ಅವುಗಳನ್ನು ಹುಡುಕಿಕೊಂಡು ಬಂದಾಗ ಅದರ ಮಾಲೀಕರು ಯಾರು ಎಂಬುದು ಪತ್ತೆ ಸಾಧ್ಯವಾಗಲಿದೆ ಎಂದು ನಗರಸಭೆ ಆಯುಕ್ತ ಎಚ್.ಟಿ. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಲ್ಲಂದೂರು, ಶಿರವಾಸೆ, ಜಾಗರ, ಆವತಿ, ಕಳವಾಸೆ ಸೇರಿದಂತೆ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು, ರೈತರು, ಬೆಳೆಗಾರರು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಇದರಿಂದ ವಾಹನಗಳ ದಟ್ಟಣೆಯೂ ಅಧಿಕ ಈ ನಡುವೆ ಬೀಡಾಡಿ ದನಗಳ ಎಲ್ಲೆಂದರಲ್ಲಿ ಮಲಗಿ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ನಿಯಂತ್ರಣಕ್ಕೆ ನಗರಸಭೆ ಕ್ರಮವಹಿಸಬೇಕು ಎಂದು ಸ್ಥಳೀಯ ದಿನೇಶ್ ಒತ್ತಾಯಿಸಿದರು.

ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಅವುಗಳ ಮಾಲೀಕರಿಗೆ ಆಟೋರಿಕ್ಷಾ ಮೂಲಕ ಜಾಗೃತಿ ಮೂಡಿಸಲಾಗುವುದು. ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಡಿದು ಗೋಶಾಲೆಗಳಿಗೆ ಬಿಡಲಾಗುವುದು. ಮಾಲೀಕರು ಪತ್ತೆಯಾದಲ್ಲಿ ಕ್ರಮ ಜರುಗಿಸಲಾಗುವುದು.
ಎಚ್‌.ಟಿ.ಕೃಷ್ಣಮೂರ್ತಿ ನಗರಸಭೆ ಆಯುಕ್ತ
ಗೋಶಾಲೆಗಳಿಗೆ ಬೇಕು ಸರ್ಕಾರದ ನೆರವು 
ಬೀಡಾಡಿ ದನಗಳನ್ನು ಹಿಡಿದು ರಕ್ಷಣೆ ಮಾಡಲು ಗೋಶಾಲೆಗಳಿವೆ. ಅವುಗಳ ನಿರ್ವಹಣೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕಾಮಧೇನು ಗೋಶಾಲೆ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ವಿ.ಟಿ. ಲಕ್ಷ್ಮಣ್‌ ಒತ್ತಾಯಿಸಿದರು. ‘ಇಂದಾವರದ ಕಾಮಧೇನು ಗೋಶಾಲೆಯಲ್ಲಿ 170ಕ್ಕೂ ಹೆಚ್ಚು ಗೋವುಗಳು ಬೀಡಾಡಿ ದನಗಳು ಇವೆ. ಸರ್ಕಾರದ ಯಾವುದೇ ಅನುದಾನವಿಲ್ಲದೇ ದಾನಿಗಳ ನೆರವಿನಿಂದಲೇ ಮುನ್ನಡೆಸಿಕೊಂಡು ಬಂದಿದ್ದೇವೆ. ಸದ್ಯ ಮೇವಿನ ಕೊರತೆ ಇದ್ದು ನಿಭಾಯಿಸುವುದೇ ಕಷ್ಟವಾಗುತ್ತಿದೆ. ಸರ್ಕಾರ ಗೋಶಾಲೆಗೆ ಅನುದಾನ ನೀಡಿದಲ್ಲಿ ಸಹಕಾರಿಯಾಗಲಿದೆ’ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT