ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಶುಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಪಶು ಆಸ್ಪತ್ರೆಗಳು ಸಿಬ್ಬಂದಿ ಇಲ್ಲದೆ ಸೊರಗುತ್ತಿವೆ. ಅದರಲ್ಲೂ ವೈದ್ಯರು ಮತ್ತು ಡಿ ದರ್ಜೆ ನೌಕರರ ಹುದ್ದೆಗಳು ಬಹುತೇಕ ಖಾಲಿ ಇವೆ. ಮಲೆನಾಡು ಭಾಗದಲ್ಲಂತೂ ವೈದ್ಯರೇ ಇಲ್ಲವಾಗಿದ್ದಾರೆ.
ಮಲೆನಾಡು ಮತ್ತು ಬಯಲು ಸೀಮೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಹಸು, ಎಮ್ಮೆ, ಮೇಕೆ, ಕುರಿ, ನಾಯಿ, ಹಂದಿ, ಕತ್ತೆ, ಸಾಕು ಪ್ರಾಣಿಗಳ ಸಂಖ್ಯೆ 4.64 ಲಕ್ಷ ಇದೆ. ಕೋಳಿಗಳ ಸಂಖ್ಯೆಯೇ 23.36 ಲಕ್ಷ ಇದೆ. ಅದರಲ್ಲೂ ಹಸುಗಳ ಸಂಖ್ಯೆ 2.90 ಲಕ್ಷ ಇದೆ. 142 ಪಶು ವೈದ್ಯಕೀಯ ಸಂಸ್ಥೆಗಳಿದ್ದು, ಬಹುತೇಕ ಕಡೆಗಳಲ್ಲಿ ವೈದ್ಯರಿಲ್ಲ. ಅದರಲ್ಲೂ ಮೆಲನಾಡು ಭಾಗದಲ್ಲಿ ವೈದ್ಯರೇ ಇಲ್ಲವಾಗಿದೆ.
ಶೃಂಗೇರಿ ತಾಲ್ಲೂಕಿನಲ್ಲಿ ಏಳು ಹುದ್ದೆಗಳ ಪೈಕಿ ಒಂದೇ ಹುದ್ದೆ ಭರ್ತಿಯಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ(ಕಳಸ ಸೇರಿ) 17 ಹುದ್ದೆಗಳಲ್ಲಿ 15 ಹುದ್ದೆಗಳು ಖಾಲಿ ಇವೆ. ಎನ್.ಆರ್.ಪುರ ತಾಲ್ಲೂಕಿನ 8 ಹುದ್ದೆಗಳ ಪೈಕಿ 6 ಹುದ್ದೆಗಳು ಖಾಲಿ ಇವೆ. ಕೊಪ್ಪ ತಾಲ್ಲೂಕಿನಲ್ಲಿ 10 ಹುದ್ದೆಗಳ ಪೈಕಿ 5 ಹುದ್ದೆಗಳು ಭರ್ತಿಯಾಗಿವೆ.
ಜಾನುವಾರುಗಳ ಸಂಖ್ಯೆ ಜಾಸ್ತಿ ಇರುವುವುದರಿಂದ ಬಯಲು ಸೀಮೆಯ ತರೀಕೆರೆ, ಅಜ್ಜಂಪುರ ಮತ್ತು ಕಡೂರು ತಾಲ್ಲೂಕಿನಲ್ಲಿ ಹೆಚ್ಚು ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆದರೂ ಅಜ್ಜಂಪುರ ತಾಲ್ಲೂಕಿನಲ್ಲಿ ನಾಲ್ಕು ಹುದ್ದೆ ಮತ್ತು ಕಡೂರು ತಾಲ್ಲೂಕಿನಲ್ಲಿ ಐದು ಹುದ್ದೆಗಳು ಖಾಲಿ ಇವೆ.
ಮಲೆನಾಡು ಭಾಗದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕರು ಬಯಲು ಸೀಮೆಯ ಭಾಗದವರೇ ಆಗಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಪಶು ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ ಖಾಸಗಿ ವೈದ್ಯರನ್ನೇ ರೈತರು ಅವಲಂಭಿಸುವಂತಾಗಿದೆ. ದೂರದ ಸರ್ಕಾರಿ ಆಸ್ಪತ್ರೆಗಳಿಗೆ ಜಾನುವಾರುಗಳನ್ನು ಕರೆದೊಯ್ಯುವುದು ರೈತರಿಗೆ ಸಾಹಸದ ಕೆಲಸವೇ ಆಗಲಿದೆ. ಗೂಡ್ಸ್ ವಾಹನಗಳನ್ನು ಬಾಡಿಗೆಗೆ ಪಡೆದು ಕರೆದೊಯ್ಯಬೇಕು. ಅದಕ್ಕೆ ಕನಿಷ್ಠ ₹2 ಸಾವಿರ ವೆಚ್ಚವಾಗುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
ಆಸ್ಪತ್ರೆಗಳ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಡಿ. ದರ್ಜೆ ನೌಕರರ 231 ಹುದ್ದೆಗಳ ಪೈಕಿ 198 ಹುದ್ದೆಗಳು ಖಾಲಿ ಇವೆ. 75 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
2.87 ಲಕ್ಷ ಜಾನುವಾರುಗಳಿಗೆ ಲಸಿಕೆ
ಹಸು ಎತ್ತು ಮತ್ತು ಎಮ್ಮೆಗಳ ಸಂಖ್ಯೆ ಜಿಲ್ಲೆಯಲ್ಲಿ 3.24 ಲಕ್ಷ ಇದೆ ಎಂಬುದು ಅಂಕಿ ಅಂಶ. ಐದು ವರ್ಷಗಳ ಹಿಂದೆ ಗಣತಿ ಆಗಿರುವುದರಿಂದ ಈಗ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದ್ದು 2.90 ಲಕ್ಷ ಇವೆ ಎಂಬುದು ಅಧಿಕಾರಗಳ ಲೆಕ್ಕಾಚಾರ. ಈ ಪೈಕಿ ಈಗ 2.87 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗಿದೆ. ಕಾಲುಬಾಯಿ ಜ್ವರ ಏಪ್ರಿಲ್‌ನಲ್ಲಿ ಒಂದು ತಿಂಗಳು ಆಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಈ ಲಸಿಕೆ ನೀಡಲಾಗುತ್ತದೆ. ಇನ್ನು ಹಸು ಮತ್ತು ಎತ್ತುಗಳಿಗೆ ಮಾತ್ರ ಚರ್ಮಗಂಟು ರೋಗದ ಲಸಿಕೆ ಹಾಕುತ್ತಿದ್ದು 1.71 ಲಕ್ಷ ಜಾನುವಾರುಗಳಿಗೆ ಈ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ಆದರೆ ಹಳ್ಳಿಗಳಿಗೆ ಬರುವ ಸಿಬ್ಬಂದಿ ಎಲ್ಲಾ ಹಸು ಮತ್ತು ಎಮ್ಮೆಗಳನ್ನು ಹುಡುಕಿ ಲಸಿಕೆ ಹಾಕುವುದಿಲ್ಲ. ಅವರು ಊರಿಗೆ ಬಂದಾಗ ಸಿಗುವ ಜಾನುವಾರುಗಳಿಗೆ ಮಾತ್ರ ಲಸಿಕೆ ಹಾಕುತ್ತಿದ್ದಾರೆ ಎಂಬುದು ರೈತರ ಅಭಿಪ್ರಾಯ.
ಪಶು ಸಂಜೀವಿನಿ ಬಗ್ಗೆ ಅರಿವೇ ಇಲ್ಲ
ಅನಾರೋಗ್ಯ ಕಾಣಿಸಿಕೊಂಡ ಕೂಡಲೇ ಜಾನುವಾರುಗಳು ಇದ್ದಲ್ಲಿಗೇ ತೆರಳಿ ಚಿಕಿತ್ಸೆ ನೀಡಲು ಪಶು ಸಂಜೀವಿನಿ ವಾಹನಗಳನ್ನು ಸರ್ಕಾರ ನೀಡಿದೆ. ಆದರೆ ಈ ವ್ಯವಸ್ಥೆ ಹಳ್ಳಿಯ ರೈತರಿಗೆ ತಲುಪೇ ಇಲ್ಲ. ತಾಲ್ಲೂಕಿ ಒಂದರಂತೆ ವಾಹನಗಳಿದ್ದು 1962 ಸಹಾಯವಾಣಿಯನ್ನೂ ಆರಂಭಿಸಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರೈತರನ್ನು ವಿಚಾರಿಸಿದರೆ ಜಾನುವಾರು ಮಾಲೀಕರಲ್ಲಿ ಅರಿವೇ ಇಲ್ಲ. ಗ್ರಾಮೀಣ ಭಾಗದ ರೈತರು ಜಾನುವಾರುಗಳಿಗೆ ಖಾಯಿಲೆ ಬಂದ ಸಂದರ್ಭದಲ್ಲಿ ಅಥವಾ ಇನ್ನೀತರ ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳನ್ನೇ ಬಾಡಿಗೆಗೆ ಪಡೆದು ತೆರಳುತ್ತಿದ್ದಾರೆ.
ರಿಪ್ಲೆಕ್ಟರ್ ಅಳವಡಿಕೆ ಸವಾಲು
ಬೀಡಾಡಿ ದನಗಳಿಂದ ಆಗುವ ಅಪಘಾತ ತಪ್ಪಿಸಲು ಜಿಲ್ಲೆಯಲ್ಲಿ ದನಗಳಿಗೆ ರಿಪ್ಲೆಕ್ಟರ್ ಅಳವಡಿಕೆ ಕಾರ್ಯವನ್ನು ಪಶು ಸಂಗೋಪನಾ ಇಲಾಖೆ ಆರಂಭಿಸಿದೆ. ಆದರೆ ಅವುಗಳನ್ನು ಹಿಡಿದು ಅಳವಡಿಕೆ ಮಾಡುವುದೇ ಸವಾಲಿನ ಕೆಲಸವಾಗಿದೆ. ರಾತ್ರಿ ವೇಳೆ ರಸ್ತೆಯಲ್ಲಿ ನಿಲ್ಲುವ ಜನುವಾರುಗಳು ಕಾಣಿಸದೆ ವಾಹನ ಸವಾರರು ಬಂದು ಡಿಕ್ಕಿ ಮಾಡುವುದು ಸಾಮಾನ್ಯವಾಗಿದೆ. ಆದ್ದರಿಂದ ಅವುಗಳ ಕೊರಳಿಗೆ ರೇಡಿಯಂ ಪಟ್ಟಿಯನ್ನು ಅಳವಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 500 ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ಧಾರವಾಡದಿಂದ ರೇಡಿಯಂ ರಿಪ್ಲೆಕ್ಟರ್ ಬೆಲ್ಟ್‌ಗಳನ್ನು ತಂದು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆ ವೈದ್ಯರು ಈ ಕಾರ್ಯಾಚರಣೆ ಮಾಡುತ್ತಿದ್ದಾರೆ. ಮಲೆನಾಡು ಗಿಡ್ಡ ತಳಿಯ ಹಸುಗಳು ಕೈಗೆ ಸಿಗದಾಗಿದ್ದು ರಿಪ್ಲೆಕ್ಟರ್ ಅಳವಡಿಕೆ ಕಷ್ಟವಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.