ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗೆತ: ಹೆಚ್ಚಾದ ಸಂಚಾರ ದಟ್ಟಣೆ

ಮಲ್ಲಂದೂರು ರಸ್ತೆ ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿ ವಿಳಂಬ
Last Updated 3 ಜುಲೈ 2019, 13:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆ – ಬಾರ್‌ಲೇನ್ ರಸ್ತೆ ಕೂಡುವ ಸ್ಥಳದಲ್ಲಿ ಚರಂಡಿ ಸ್ವಚ್ಛಗೊಳಿಸಲು ರಸ್ತೆ ಅಗೆದಿದ್ದು, ಹದಿನೈದು ದಿನಗಳಿಂದ ವಾಹನಸವಾರರು, ಅಂಗಡಿ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ.

ಮಲ್ಲಂದೂರು ರಸ್ತೆ ನಿತ್ಯ ಜನಸಂದಣಿ ಮತ್ತು ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಬುಧವಾರದಂದು ಸಂತೆ ನಡೆಯುವುದರಿಂದ ದಟ್ಟಣೆ ಪ್ರಮಾಣ ಇನ್ನೂ ಹೆಚ್ಚಾಗಿರುತ್ತದೆ. ಬಾರ್ ಲೇನ್ ರಸ್ತೆ ಕಿಷ್ಕಿಂದೆಯಂತಿದ್ದು, ಏಕಮುಖ ಸಂಚಾರ ವ್ಯವಸ್ಥೆ ಇದೆ. ಈ ಎರಡು ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಚರಂಡಿ ಸ್ವಚ್ಛಗೊಳಿಸಲು ಬಾರ್‌ಲೇನ್ ರಸ್ತೆಗೆ ಅಡ್ಡಲಾಗಿ ಅಗೆಯಲಾಗಿದ್ದು, ಮಣ್ಣನ್ನು ಮಲ್ಲಂದೂರು ರಸ್ತೆಗೆ ಹಾಕಲಾಗಿದೆ. ಅದರಿಂದ ಈ ಜಾಗದಲ್ಲಿ ದಿಣ್ಣೆಗಳು ಏರ್ಪಟ್ಟಿವೆ. ವಾಹನ ಚಲಾಯಿಸಲು ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಮಣ್ಣನ್ನು ಅಗೆದು ಚರಂಡಿ ಮೇಲಿನ ಹಾಸುಗಲ್ಲುಗಳನ್ನು ತೆಗೆಯಲಾಗಿದೆ. ಒಂದು ಬಾರಿ ಚರಂಡಿಯನ್ನು ಸ್ವಚ್ಛಗೊಳಿಸಲಾಗಿದೆ. ಚರಂಡಿಯಿಂದ ತೆಗೆದ ಕಸವನ್ನು ಪಕ್ಕದ ಮಣ್ಣಿನ ದಿಣ್ಣೆ ಮೇಲೆಯೇ ಹಾಕಲಾಗಿದೆ. ಆದರೆ ಚರಂಡಿಯಲ್ಲಿ ಕಸ, ಕೊಳಚೆ ನೀರು, ಪ್ಲಾಸ್ಟಿಕ್ ಮತ್ತೆ ತುಂಬಿಕೊಂಡಿದೆ. ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.

‘ಚರಂಡಿ ಸ್ವಚ್ಛಗೊಳಿಸಲು ರಸ್ತೆ ಅಗೆದು 15 ದಿನಗಳಾಗಿವೆ. ಈ ಸ್ಥಳದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಚಿಕೂನ್ ಗುನ್ಯಾ, ಮಲೇರಿಯಾ, ಡೆಂಗಿಯಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಚರಂಡಿ ಸ್ವಚ್ಛಗೊಳಿಸಿ, ಹಾಸುಗಲ್ಲು ಹಾಕಿ, ರಸ್ತೆ ದುರಸ್ಥಿಗೊಳಿಸಲು ನಗರಸಭೆ ಶೀಘ್ರವಾಗಿ ಕ್ರಮವಹಿಸಬೇಕು’ ಎಂದು ಫಿರ್ದೂಸ್ ಮಸೀದಿ ಮೌಜನ್ ಅಬ್ದುಲ್ ಫೌಜಲ್ ಒತ್ತಾಯಿಸಿದರು.

‘ರಸ್ತೆ ಅಗೆದಿರುವುರಿಂದ ಸಮೀಪದ ಅಂಗಡಿಗಳಿಗೆ ಗ್ರಾಹಕರು ಬರುತ್ತಿಲ್ಲ. ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ರಸ್ತೆ ಮೇಲೆ ಮಣ್ಣಿನ ದಿಣ್ಣೆ ಏರ್ಪಟ್ಟಿರುವುದರಿಂದ ಈ ಜಾಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಅರ್ಧಗಂಟೆಯಾದರೂ ವಾಹನಗಳು ಕದುಲದಷ್ಟು ದಟ್ಟಣೆ ಇರುತ್ತದೆ’ ನಗರಸಭೆ ಈ ಬಗ್ಗೆ ಕ್ರಮ ವಹಿಸಬೇಕು. ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು’ ಎಂದು ಅಮರ್ ಸ್ಟುಡಿಯೋ ಮಾಲೀಕ ಮುಫ್ತಿಯಾರ್ ಅಹಮದ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT