ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ರಸ್ತೆ ಇಕ್ಕೆಲದ 192 ವೃಕ್ಷ ಹನನ ಶುರು

ಬೈಪಾಸ್‌: ಚತುಷ್ಪಥವಾಗಿ ವಿಸ್ತರಣೆ ಕಾಮಗಾರಿ
Last Updated 26 ನವೆಂಬರ್ 2021, 1:49 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಬೈಪಾಸ್‌ ರಸ್ತೆಯ (ಎಐಟಿ ವೃತ್ತದಿಂದ ಹಿರೇಮಗಳೂರು ಬಳಿಯ ವೃತ್ತದವರೆಗೆ) ವಿಸ್ತರಣೆ ಕಾಮಗಾರಿ ಶುರುವಾಗಿದೆ, ರಸ್ತೆಯ ಬದಿಯ ಮರಗಳ ಹನನ ಕೈಗೆತ್ತಿಕೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) ಹಾಸನ ವಿಭಾಗವು ವಿಸ್ತರಣೆ ಕಾರ್ಯ ನಿರ್ವಹಿಸುತ್ತಿದೆ. ಕಾಮಗಾರಿಗೆ ಮಾರ್ಗದ ಇಕ್ಕೆಲಗಳ ಒಟ್ಟು 192ಮರಗಳು ಉರುಳಲಿವೆ.

5.5 ಮೀಟರ್‌ ವಿಸ್ತೀರ್ಣದ ಈ ರಸ್ತೆಯು 22.5 ಮೀಟರ್‌ಗೆ ವಿಸ್ತರಣೆಯಾಗಲಿದೆ. ವಿಭಜಕ, ರಸ್ತೆ ಬದಿಯಲ್ಲಿ ಕಾಂಕ್ರಿಟ್‌ ಮೋರಿ ನಿರ್ಮಾಣವಾಗಲಿದೆ. ಒಟ್ಟಾರೆ 3.28 ಕಿ.ಮೀ ನಿರ್ಮಾಣಕ್ಕೆ ₹ 29.4 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಮುಗಿಸಲು 2022 ರ ಫೆಬ್ರುವರಿವರೆಗೆ ಗಡುವು ನೀಡಲಾಗಿದೆ.

ಮರಗಳ ಹನನಕ್ಕೆ ₹ 18.86 ಲಕ್ಷವನ್ನು ಅರಣ್ಯ ಇಲಾಖೆಗೆ ಪಾವತಿಸಲಾಗಿದೆ. ಈ ಪೈಕಿ ಸಸಿ ನೆಟ್ಟು ಬೆಳೆಸಲು ಎನ್‌ಎಚ್‌ನಿಂದ ₹ 15.7 ಲಕ್ಷ ಹಾಗೂ ಮರಗಳ ಟೆಂಡರ್‌ ಪಡೆದವರು ಬಾಕಿ ₹ 3.2 ಲಕ್ಷ ಪಾವತಿಸಿದ್ದಾರೆ ಎಂದು ಎಂಜಿನಿಯರ್‌ವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಲ, ಆರಳಿ, ಸಂಪಿಗೆ ಸಹಿತ ವಿವಿಧ ಜಾತಿಯ ಮರಗಳನ್ನು ಕಡಿಯಲಾಗುತ್ತಿದೆ. ಈಗಾಗಲೇ ಹಲವು ಮರಗಳನ್ನು ಕತ್ತರಿಸಲಾಗಿದೆ. ಮರಗಳನ್ನು ಕಡಿದಿರುವ ಕಡೆಗಳಲ್ಲಿ ರಸ್ತೆ ಬೋಳಾಗಿ ಕಾಣುತ್ತಿದೆ. ಮೂಲ ಚಹರೆಯೇ ಬದಲಾಗುತ್ತಿದೆ.

ನಗರ ಮತ್ತು ಸುತ್ತಮುತ್ತ (ಕೆ.ಎಂ ರಸ್ತೆ (ಎನ್‌ಎಚ್‌–173), ಬಿ.ಎಚ್‌ ರಸ್ತೆ (ಎನ್‌ಎಚ್‌–206), ರಾಮನಹಳ್ಳಿ ಮುಖ್ಯರಸ್ತೆ (ರತ್ನಗಿರಿ ಬೋರೆ ಸಮೀಪ)...) ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯಲ್ಲಿ ಎರಡೂವರೆ ವರ್ಷ ಅವಧಿಯಲ್ಲಿ 4ಸಾವಿರಕ್ಕೂ ಹೆಚ್ಚು ಮರಗಳನ್ನು ಉರುಳಿಸಲಾಗಿದೆ.

‘ಒಂದು ವೃಕ್ಷ ಹನನಕ್ಕೆ ಪರ್ಯಾಯವಾಗಿ 10 ಸಸಿಗಳನ್ನು ನೆಟ್ಟು ಪೋಷಿಸುತ್ತೇವೆ ಎಂದು ಅರಣ್ಯ ಇಲಾಖೆಯವರು ಕತೆ ಹೇಳುತ್ತಾರೆ. ಆದರೆ, ಕಾರ್ಯಗತ ಮಾಡಲ್ಲ. ರಸ್ತೆ ಬದಿಯ ಸಾಲುಮರಗಳನ್ನು ಉಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ’ ಎಂದು ಪರಿಸರಾಸಕ್ತರೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT