ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶುದ್ಧೀಕರಣಕ್ಕೆ ರಘುಪತಿ ಭಟ್ ಬೆಂಬಲಿಸಿ: ಈಶ್ವರಪ್ಪ

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ
Published 30 ಮೇ 2024, 14:32 IST
Last Updated 30 ಮೇ 2024, 14:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್‌ ಸ್ಪರ್ಧಿಸಿದ್ದಾರೆ. ಮತದಾರರು ಅವರ ಸೇವೆಯನ್ನು ಪರಿಗಣಿಸಿ ಪ‍್ರಾಶಸ್ತ್ಯದ ಮತ ನೀಡಿ ಬೆಂಬಲಿಸಬೇಕು’ ಎಂದು ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಮನವಿ ಮಾಡಿದರು.

ರಾಜ್ಯ ಬಿಜೆಪಿಯಲ್ಲಿ ಈಗ ಸಾಮೂಹಿಕ ನಾಯಕತ್ವ ಇಲ್ಲದಂತಾಗಿದೆ. ಹಿಂದೆ ರಾಜಕೀಯ ಹೋರಾಟ, ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಸಾಮೂಹಿಕ ನಾಯಕತ್ವದಲ್ಲೇ ನಿರ್ಧಾರವಾಗುತ್ತಿತ್ತು. ಆದರೆ, ದುರದೃಷ್ಟ ಎಂಬಂತೆ ಈಗ ಪಕ್ಷ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಕುಟುಂಬದ ಹಿಡಿದಲ್ಲಿದೆ. ಹಾಗಾಗಿ ನಿಷ್ಠಾವಂತರನ್ನು ಕಡೆಗಣಿಸಿ ಚುನಾವಣೆಯಲ್ಲಿ ತಮಗೆ ಬೇಕಾದವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಆರೋಪಿಸಿದರು.

‘ದೇಶದಲ್ಲಿ ಬಿಜೆಪಿ ಆರಂಭವಾಗಿದ್ದೇ ಹಿಂದುತ್ವದ ಸಿದ್ಧಾಂತದ ನೆಲೆಗಟ್ಟಿನಲ್ಲಿ. ಸದ್ಯ ಪಕ್ಷದಲ್ಲಿ ಹಿಂದುತ್ವಕ್ಕಾಗಿ ದುಡಿಯುತ್ತಿರುವ ನಾಯಕರನ್ನು ಮೂಲೆಗುಂಪು ಮಾಡುವ ಯತ್ನ ನಡೆಯುತ್ತಿವೆ. ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದಲ್ಲಿ ಲಿಂಗಾಯತ ನಾಯಕ ಇರುವುದು ಯಡಿಯೂರಪ್ಪ ಒಬ್ಬನೇ ಎಂಬ ಭ್ರಮೆಯಲ್ಲಿದೆ. ಅಪ್ಪ, ಮಕ್ಕಳ ಹಿಡಿತ ತಪ್ಪಿಸಿ, ಪಕ್ಷವನ್ನು ಶುದ್ಧೀಕರಣ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು ಬಯಸುತ್ತಿದ್ದಾರೆ. ಹಾಗಾಗಿಯೇ ನಾನು ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ’ ಎಂದು ವಿವರಿಸಿದರು.

ಕಾಂಗ್ರೆಸ್ ಸೇರಿದ್ದ ಜಗದೀಶ್‌ ಶೆಟ್ಟರ್‌ ಅವರನ್ನು ಉಚ್ಚಾಟನೆ ಮಾಡಿ ಮತ್ತೆ ಬಿಜೆಪಿಗೆ ಸೇರಿಸಿಕೊಂಡು ಬೆಳಗಾವಿಯಿಂದ ಲೋಕಸಭೆ ಚುನಾವಣೆ ಸ್ಪರ್ಧೆಗೂ ಅವಕಾಶ ನೀಡಿದ್ದಾರೆ. ಹಾಗಾಗಿ ಬಿಜೆಪಿಯಲ್ಲಿ ಉಚ್ಚಾಟನೆಗೆ ಯಾವುದೇ ಬೆಲೆ ಇಲ್ಲ. ಈಗಾಗಲೇ ಬಿಜೆಪಿ ಕೆಲವು ಮುಖಂಡರು ಕುಟುಂಬದ ಧೋರಣೆಗೆ ಬೇಸತ್ತು ಒತ್ತಡ, ಭಯದ ಕಾರಣದಿಂದ ತಮಗೆ ಬಾಹ್ಯವಾಗಿ ಬೆಂಬಲ ನೀಡುತ್ತಿದ್ದಾರೆ ಎಂದರು.

ರಘುಪತಿ ಭಟ್ ಹಿಂದುತ್ವದ ಸಿದ್ಧಾಂತ, ವಿಚಾರ ಹೊಂದಿದ ಅನುಭವಿ ರಾಜಕಾರಣಿ. ಚುನಾವಣೆಯಲ್ಲಿ ಮತದಾರರಿಗೆ ಸ್ಪಷ್ಟತೆ ಇದೆ. ಪಕ್ಷದ ಶುದ್ಧೀಕರಣವಾಗಬೇಕಿದೆ ಹಾಗಾಗಿ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು. 

ಮುಖಂಡರಾದ ರಾಜಶೇಖರ ನಾಯ್ಡು, ಅಕ್ಕಿಕಾಳು ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಸೋಮೇಶ್, ಮಂಜು ಹಾಜರಿದ್ದರು.

ಡಿಕೆಶಿ ಸಿದ್ಧರಾಮಯ್ಯ ಭಂಡತನ ಬಿಡಬೇಕು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದಲ್ಲಿ ಅಧಿಕಾರಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಗೆ ನೈತಿಕತೆ ಇದ್ದಲ್ಲಿ ತಮ್ಮ ಭಂಡತನ ಬಿಟ್ಟು ನಿಗಮದ ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಆಗಿಲ್ಲವಾದರೆ ಮತ್ತೇ ಮರುಸೇರ್ಪಡೆ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು. ತಾನೂ ಹಿಂದೆ ಇಂತಹದ್ದೆ ಘಟನೆ ನಡೆದಾಗ ಹೈಕಮಾಂಡ್ ಸೂಚನೆ ನೀಡಿದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆ ವಿಚಾರವೇ ಬೇರೆ ಇದೇ ಬೇರೆ ಎಂದು ಹೇಳಿ ಕಾಂಗ್ರೆಸ್ ಭಂಡತನ ಮಾಡುವುದು ಬೇಡ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT