ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕೆರೆ ನೀರು ತೋಟದ ಪಾಲು: ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ

Published 28 ಫೆಬ್ರುವರಿ 2024, 6:00 IST
Last Updated 28 ಫೆಬ್ರುವರಿ 2024, 6:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬರಗಾಲದಲ್ಲಿ ತೋಟ ಉಳಿಸಿಕೊಳ್ಳಲು ಕೆಲವರು ಕೆರೆ ನೀರಿಗೆ ಮೋಟರ್ ಅಳವಡಿಸಿ ನೀರು ಖಾಲಿ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಕೆರೆಗಳಲ್ಲಿ ಜಾನುವಾರು ಕುಡಿಯಲು ನೀರಿಲ್ಲದಂತೆ ಆಗಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 124 ಕೆರೆಗಳು ಜಿಲ್ಲೆಯಲ್ಲಿವೆ. ಈ ಪೈಕಿ 22 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದರೆ, 40 ಕೆರೆಗಳಲ್ಲಿ ಶೇ 30ಕ್ಕಿಂತ ಕಡಿಮೆ ನೀರಿದೆ. ಜಾನುವಾರುಗಳ ಕುಡಿಯುವ ನೀರಿಗೆ ಈ ಕೆರೆಗಳು ಆಧಾರವಾಗಿವೆ. ಅಲ್ಲದೇ ಸುತ್ತಮುತ್ತಲ ಪ್ರದೇಶದ ಕೊಳವೆ ಬಾವಿಗಳ ಅಂತರ್ಜಲಕ್ಕೂ ಕೆರೆಗಳ ನೀರು ಆಧಾರವಾಗಿವೆ.

ಈ ಕೆರೆಗಳ ನೀರು ಈಗ ಸಮೀಪದ ಖಾಸಗಿ ಜಮೀನುಗಳ ಪಾಲಾಗುತ್ತಿದೆ. ರಾತ್ರೋ ರಾತ್ರಿ ಕೆರೆಗಳಿಗೆ ಮೋಟರ್ ಇಟ್ಟು ನೀರು ಮೇಲೆತ್ತುತ್ತಿದ್ದಾರೆ. ಅಲ್ಲದೇ ಟ್ಯಾಂಕರ್‌ಗಳಲ್ಲಿ ತುಂಬಿಕೊಂಡು ರೈತರಿಗೇ ಮಾರಾಟ ಮಾಡುವ ಕೆಲಸ ಕೂಡ ಸದ್ದಿಲ್ಲದೆ ನಡೆಯುತ್ತಿದೆ. ಹೀಗೇ ಕೆರೆಯ ನೀರು ಮೇಲೆತ್ತಿದರೆ ಎರಡು ವಾರಗಳಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳು ಸಂಪೂರ್ಣ ಖಾಲಿಯಾಗುವ ಆತಂಕ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

40 ಕೆರೆಗಳಲ್ಲಿ ನೀರು ಇನ್ನೂ ಇರುವುದು ಸಮಾಧಾನದ ಸಂಗತಿ. ಕೆಲವು ಕೆರೆಗಳು ಖಾಲಿಯಾಗಿ ಹಲವು ತಿಂಗಳುಗಳೇ ಕಳೆದಿದ್ದು, ಆ ಭಾಗದಲ್ಲಿ ಜಾನುವಾರು ಕುಡಿಯುವ ನೀರಿನ ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ನಗರದ ಸಮೀಪದ ಹೌಸಿಂಗ್ ಬೋರ್ಡ್ ಬಡಾವಣೆಗೆ ಹೊಂದಿಕೊಂಡಂತೆ ಇರುವ ಹುಣಸವಳ್ಳಿ ಕೆರೆಯಲ್ಲಿ ಶೇ 50ಕ್ಕಿಂತ ಹೆಚ್ಚು ನೀರಿದೆ. ಕೆರೆಯಲ್ಲಿ ನೀರು ಇರುವುದರಿಂದ ಸುತ್ತಮುತ್ತಲ ಬಡಾವಣೆಗಳಲ್ಲಿ ಅಂತರ್ಜಲ ಕುಸಿದಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿಲ್ಲ. ಈ ಕೆರೆ ನೀರಿಗೆ ಈಗ ಕೆಲವರು ಕನ್ನ ಹಾಕುತ್ತಿದ್ದಾರೆ. ಮೋಟರ್ ಮತ್ತು ಪೈಪ್‌ಗಳನ್ನು ಅಳವಡಿಸಿ ನೀರು ಹೀರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಕೆರೆ ಖಾಲಿಯಾಗುವ ಆತಂಕ ಇದೆ ಎಂಬುದು ಸುತ್ತಮುತ್ತಲ ಬಡಾವಣೆ ನಿವಾಸಿಗಳ ಆತಂಕ.

‘ಕೆರೆಗಳ ನೀರನ್ನು ಅಕ್ರಮವಾಗಿ ಮೇಲೆತ್ತುವುದು ತಪ್ಪು. ಜಾನುವಾರು ಕುಡಿಯುವ ನೀರಿಗೆ ತೊಂದರೆ ಜತೆಗೆ ಅಂತರ್ಜಲವೂ ಕುಸಿಯಲಿದೆ. ಅಕ್ರಮವಾಗಿ ನೀರೆತ್ತುವುದು ಕಂಡರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. 

ಚಿಕ್ಕಮಗಳೂರು ತಾಲ್ಲೂಕಿನ ಹುಣಸವಳ್ಳಿ ಕೆರೆ ನೀರಿಗೆ ಪೈಪ್ ಅಳವಡಿಸಿರುವುದು 
ಚಿಕ್ಕಮಗಳೂರು ತಾಲ್ಲೂಕಿನ ಹುಣಸವಳ್ಳಿ ಕೆರೆ ನೀರಿಗೆ ಪೈಪ್ ಅಳವಡಿಸಿರುವುದು 

ಮದಗದ ಕೆರೆಯಿಂದ 10 ಕೆರೆಗೆ ನೀರು

ಮದಗದ ಕೆರೆಯಿಂದ ಕಡೂರು ತಾಲ್ಲೂಕಿನ 10 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾಶಂಕರ್ ತಿಳಿಸಿದರು. ಮುಂಗಾರು ಕಡಿಮೆಯಾಗಿದ್ದರೂ ಮಳೆಗಾಲದಲ್ಲಿ ಈ ಕೆರೆ ತುಂಬಿಕೊಂಡಿತ್ತು. ಕೆರೆ ತುಂಬಿ ಕೋಡಿಯಿಂದ ನೀರು ಹರಿಯುವ ಸಂದರ್ಭದಲ್ಲಿ ಮುಂದಿನ 25 ಕೆರೆಗಳಿಗೆ ನೀರು ಹೊಗಲಿದೆ. ಈಗ ತೂಬಿನ ಮೂಲಕ 10 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶಕ್ಕೂ ನೀರುದೊಗಿಸಲಾಗುತ್ತಿದೆ ಎಂದರು. ಕೆರೆಗಳಲ್ಲಿ ಪೈಪ್‌ ಮತ್ತು ಮೋಟರ್ ಅಳವಡಿಸಿ ನೀರು ಮೇಲೆತ್ತುವುದು ಅಪರಾಧ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಅವರು ‘‍ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT