ಬುಧವಾರ, ಆಗಸ್ಟ್ 10, 2022
23 °C
ಕಡೂರು: ಬೆಳವಣಿಗೆ ಹಂತದಲ್ಲೇ ಕೊಳೆಯುತ್ತಿರುವ ಬೆಳೆ

ಕಲ್ಲಂಗಡಿ ಬೆಳೆಗಾರರು ಕಂಗಾಲು

ಬಾಲುಮಚ್ಚೇರಿ Updated:

ಅಕ್ಷರ ಗಾತ್ರ : | |

Prajavani

ಕಡೂರು: ತಾಲ್ಲೂಕಿನಲ್ಲಿ ಹಾಕಿದ್ದ ಕಲ್ಲಂಗಡಿ ಬೆಳೆ ಆರಂಭದಲ್ಲೇ ಕೊಳೆಯುತ್ತಿರುವ ಕಾರಣ ಬೆಳೆಗಾರರು ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

ಕಲ್ಲಂಗಡಿ ಮೂರು ತಿಂಗಳ ಬೆಳೆ. ಒಂದು ಬಳ್ಳಿಯಲ್ಲಿ ಸುಮಾರು ಎರಡು ಉತ್ತಮ ಗುಣಮಟ್ಟದ 10 ರಿಂದ 12 ಕೆ.ಜಿ. ತೂಗುವ ಹಣ್ಣು ದೊರೆಯುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ನಾಟಿ ಮಾಡಲಾಗುತ್ತದೆ. ಕೆಂಪು- ಮರಳು ಜಮೀನು ಈ ಬೆಳೆಗೆ ಸೂಕ್ತ. ಒಂದು ಎಕರೆ ಕಲ್ಲಂಗಡಿ ಬೆಳೆಯಲು 40 ರಿಂದ 60 ಸಾವಿರ ಖರ್ಚು ಬರುತ್ತದೆ. ಮಲ್ಚಿಂಗ್, ಡ್ರಿಪ್ ಮುಂತಾದ ಆಧುನಿಕ ಕ್ರಮ ಅನುಸರಿಸಿದರೆ ಖರ್ಚು ಹೆಚ್ಚಾದರೂ ಬೆಳೆ ಉತ್ತಮವಾಗಿ ಬಂದರೆ ಎಕರೆಗೆ 12 ರಿಂದ 14 ಟನ್ ಇಳುವರಿ ಪಡೆಯಬಹುದು. ಒಂದು ಟನ್‌ಗೆ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಕನಿಷ್ಠ ₹ 5 ಸಾವಿರ ಸಿಗುತ್ತದೆ.

ಕೊರೊನಾ ಹೊಡೆತಕ್ಕೆ ಈಗಾಗಲೇ ರೈತರೂ ಹೈರಾಣಾಗಿದ್ದಾರೆ. ಒಂದಿಷ್ಟು ಹಣ ದುಡಿಯಬಹುದೆಂಬ ಲೆಕ್ಕಾಚಾರದಲ್ಲಿ ಕಲ್ಲಂಗಡಿ ನಾಟಿ ಮಾಡಿದ ರೈತರು ನಿರೀಕ್ಷಿತ ಇಳುವರಿ ಬಾರದೇ ಕಂಗಾಲಾಗಿದ್ದಾರೆ. ಇದಕ್ಕೆ ಕಾರಣ ಕಳಪೆ ಬೀಜ ಎಂಬುದು ಅವರ ದೂರು.

ಸಾಮಾನ್ಯವಾಗಿ ರೈತರು ನಾಟಿ ಮಾಡುವುದು ಖಾಸಗಿ ಕಂಪನಿಗಳ ಹೈಬ್ರೀಡ್ ಬೀಜವನ್ನು. ನಿರ್ದಿಷ್ಟ ಕಂಪನಿಯೊಂದರ ಬೀಜವನ್ನು ನಾಟಿ ಮಾಡಿರುವ ರೈತರು ಗಿಡಗಳ ಸಮೃದ್ಧ ಬೆಳವಣಿಗೆ ಕಂಡು ಸಂತಸಗೊಂಡಿದ್ದರು. ಆದರೆ, ಕಾಯಿ ಬಲಿಯುವ ಹಂತದಲ್ಲಿಯೇ ಕೊಳೆತು ಹೋಗುತ್ತಿರುವುದು ಅವರ ಸಂತಸಕ್ಕೆ ತಣ್ಣೀರೆರೆಚಿದೆ. ಹಾಕಿದ ಖರ್ಚು ವಾಪಸ್‌ ಬರದ ಪರಿಸ್ಥಿತಿ ಎದುರಾಗಿದೆ.

ತಾಲ್ಲೂಕಿನ ಚಿಕ್ಕದೇವನೂರು, ಕಾಮೇನಹಳ್ಳಿ, ಗುಂಡಸಾಗರ, ಸೂರಾಪುರ, ಯಳಗೊಂಡನಹಳ್ಳಿ, ನಿಡಘಟ್ಟ, ನಾಗರಾಳು ಮುಂತಾದೆಡೆ ಸುಮಾರು 450 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದ್ದು, ಬಹುತೇಕ ಕಡೆ ಇದೇ ಪರಿಸ್ಥಿತಿ. ದಿಕ್ಕು ತೋಚದಂತಾದ ರೈತರು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಕೃಷಿ ಕ್ಷೇತ್ರ ಮೊದಲೇ ಹಲವಾರು ಸಮಸ್ಯೆಗಳಿಂದ ನಲುಗಿದೆ. ಇಂತಹುದರಲ್ಲಿ ಈ ಸಮಸ್ಯೆ ಎದುರಾಗಿರುವುದು ಮತ್ತಷ್ಟು ನೋವಿಗೆ ರೈತರು ಕೊರೊಳೊಡ್ಡಬೇಕಾಗಿದ್ದು, ಸರ್ಕಾರದ ಸಹಾಯ ಹಸ್ತಕ್ಕೆ ರೈತರು ನಿರೀಕ್ಷೆಯಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು