ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್: 6,106 ಪ್ರಕರಣ ಇತ್ಯರ್ಥ

ನ್ಯಾಯಾಂಗ ಇಲಾಖೆಯಲ್ಲಿ ಸಂತಸ * ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 37 ರಾಜಿ
Last Updated 14 ಆಗಸ್ಟ್ 2021, 15:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 6,106 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಂದೇ ದಿನ ಇಷ್ಟೊಂದು ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿದ್ದು, ಅದಾಲತ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ನ್ಯಾಯಾಂಗ ಇಲಾಖೆಯಲ್ಲಿ ಸಂತಸ ಮೂಡಿಸಿದೆ.

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೂಳಿ ಎಂ. ಪ್ರೇಮಾವತಿ ಅವರ ನೇತೃತ್ವದಲ್ಲಿ ಅದಾಲತ್ ನಡೆಯಿತು. ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ 36,570 ಪ್ರಕರಣಗಳ ಪೈಕಿ 7,236 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 6,106 ಪ್ರಕರಣ ರಾಜಿ ಮೂಲಕ ಇತ್ಯರ್ಥಗೊಳಿಸಿ, ₹ 12.84 ಕೋಟಿ ಹಣವನ್ನು ಸಂಬಂಧಿಸಿದವರಿಗೆ ಕೊಡಿಸಲಾಯಿತು.

ವ್ಯಾಜ್ಯ ಪೂರ್ವ ಪ್ರಕರಣ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 37 ಪ್ರಕರಣಗಳೊಂದಿಗೆ ₹ 44 ಲಕ್ಷ ಹಣವನ್ನು ಇತ್ಯರ್ಥಗೊಳಿಸಲಾಯಿತು. ಅದಾಲತ್‌ನಲ್ಲಿ ಚೆಕ್‌ ಬೌನ್ಸ್‌, ಬ್ಯಾಂಕ್ ವಸೂಲಾತಿ, ಕಾರ್ಮಿಕರ ವಿವಾದ, ವಿದ್ಯುತ್ ಮತ್ತು ನೀರಿನ ಶುಲ್ಕ ಪ್ರಕರಣ ಸೇರಿ ಇತರ ವ್ಯಾಜ್ಯ ಪೂರ್ವ ಪ್ರಕರಣಗಳು ಅದಾಲತ್‌ಗೆ ಆಯ್ಕೆಯಾಗಿದ್ದವು.

ಮೋಟಾರು ವಾಹನ ಅಪಘಾತ ಪರಿಹಾರ, ಭೂಸ್ವಾಧೀನ ಪ್ರಕರಣ, ಕಂದಾಯ ಪ್ರಕರಣ, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಸೇರಿ ಹಲವು ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅನೇಕ ಪ್ರಕರಣ ಇತ್ಯರ್ಥಗೊಂಡವು.

ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಸಂಪರ್ಕದೊಂದಿಗೆ ರಾಜಿ ಸಂಧಾನದ ಮೂಲಕ ವಿವಿಧ ಪ್ರಕರಣ ಇತ್ಯರ್ಥಪಡಿಸಿದರು. ನ್ಯಾಯಾಧೀಶರಾದ ಬನ್ನಿಕಟ್ಟಿ ಹನುಮಂತಪ್ಪ, ಜಿತೇಂದ್ರನಾಥ್‌, ಎಸ್.ಎನ್. ಕಲ್ಕಣಿ, ಬಿ.ಕೆ.ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT