ಭಾನುವಾರ, ಸೆಪ್ಟೆಂಬರ್ 19, 2021
31 °C
ಮಿನಿ ವಿಧಾನಸೌಧಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಆರ್‌. ಅಶೋಕ್‌

ಇನ್ನೂ 10 ವರ್ಷ ಬಿಜೆಪಿ ಸರ್ಕಾರದ ಆಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಲಗೈ, ಎಡಗೈ ಆಗಿ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನು ಕೆಲಸ ಮಾಡಿದ್ದೆವು. ಆತ್ಮೀಯ ಸ್ನೇಹಿತರಾದ ಬಸವರಾಜ ಬೊಮ್ಮಾಯಿ ಅವರಿಗೆ ಪೂರ್ಣ ಬೆಂಬಲ ನೀಡಿದ್ದೇವೆ. ನಮ್ಮ ಸರ್ಕಾರ ಇನ್ನೂ 10 ವರ್ಷ ಅಧಿಕಾರದಲ್ಲಿ ಇರುತ್ತದೆ. ಜನಪರವಾಗಿ ಒಳ್ಳೆಯ ಕೆಲಸ ಮಾಡುತ್ತೇವೆ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ₹ 10 ಕೋಟಿ ವೆಚ್ಚದ ಮಿನಿ ವಿಧಾನ
ಸೌಧದ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದ ಸೌಲಭ್ಯ ಪಡೆಯಲು ಬರುವ ಜನರಿಗೆ ಅನುಕೂಲ ಆಗಲೆಂದು ಇಲ್ಲಿ ಸುಸಜ್ಜಿತವಾದ 2 ಅಂತಸ್ತಿನ ಮಿನಿ ವಿಧಾನಸೌಧ ಕಟ್ಟಡ ಕಟ್ಟಲು ನಾನು ಅವಕಾಶ ಮಾಡಿಕೊಟ್ಟಿದ್ದೇನೆ. ಈ ಕಚೇರಿಯಿಂದ ಹೆಚ್ಚಿನ ಜನರಿಗೆ ಸರ್ಕಾರದ ಸೌಲಭ್ಯ ಕೊಡುವಂತಹ ಕೆಲಸ ಆಗಬೇಕೇ ಹೊರತು ಕಿರುಕುಳ ಕೊಡಬಾರದು. ವಯಸ್ಸಾದವರು ವೃದ್ಧಾಪ್ಯ ವೇತನ ಸೌಲಭ್ಯ ಪಡೆಯಲು ಉದ್ದನೆಯ ಸಾಲಿನಲ್ಲಿ ರಸ್ತೆಯಲ್ಲಿ ನಿಲ್ಲುವುದು ಕಂಡರೆ ಕರುಳು ಚುರುಕ್‌ ಅನ್ನುತ್ತದೆ. ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನವನ್ನು ಈ ತಿಂಗಳಿನಿಂದ ₹ 200 ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

‘ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ನನ್ನ ಚಿಕ್ಕ ತಮ್ಮ (ಸಹೋದರ) ಇದ್ದಂಗೆ. ಅವರು ತಾಲ್ಲೂಕಿನ ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನರ ಪರವಾಗಿ ಕೆಲಸ ಮಾಡುವ ಎಂಎಲ್‌ಎ ಯಾರಾದರೂ ಇದ್ದರೆ ಅದು ಗೂಳಿಹಟ್ಟಿ ಡಿ. ಶೇಖರ್‌. ಅವರು ನನ್ನ ಹತ್ತಿರ ಏನೇನು ಸೌಲಭ್ಯ ಕೇಳಿದ್ದಾರೋ ಎಲ್ಲವನ್ನು ಕೊಟ್ಟಿದ್ದೇನೆ. ಬಡವರ ನೆಮ್ಮದಿಯ ಬದುಕಿಗೆ ಕ್ರಮ ಕೈಗೊಂಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಕಾಮಗಾರಿಗೆ ಸಾವಿರಾರು ಕೋಟಿ ಅನುದಾನ ಕೊಡಲಾಗಿದೆ. ತಾಲ್ಲೂಕಿನ ಅಭಿವೃದ್ಧಿಗೆ ಅವರು ಕೇಳಿದ ಸೌಲಭ್ಯ ಒದಗಿಸುತ್ತೇನೆ’ ಎಂದು ಭರವಸೆ
ನೀಡಿದರು.

‘ಕೋವಿಡ್‌ ಸೋಂಕು ನಿಯಂತ್ರಣ ಆದ ತಕ್ಷಣ ಹಳ್ಳಿ ಕಡೆಗೆ ಜಿಲ್ಲಾಧಿಕಾರಿ ಕಾರ್ಯಕ್ರಮ ಮತ್ತೆ ಆರಂಭಿಸಲಾಗುವುದು. ಒಂದು ದಿನ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಉಪವಿಭಾಗ ಅಧಿಕಾರಿಗಳು ಹಳ್ಳಿಯ ಜನರ ಮನೆಯ ಬಾಗಿಲಿಗೆ ಹೋಗಬೇಕು. ಪೂರ್ಣ ದಿನ ಅಲ್ಲಿಯೇ ಇರಬೇಕು. ಆಗ ಅಧಿಕಾರಿಗಳ ಬಗ್ಗೆ ಜನರು ಒಳ್ಳೆಯ ಭಾವನೆ ವ್ಯಕ್ತಪಡಿಸುತ್ತಾರೆ. ಬರೀ ಕಚೇರಿಯಲ್ಲಿದ್ದರೆ ಹಳ್ಳಿಯ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ಕೂಡ ಒಂದು ದಿನ ಹಳ್ಳಿಯಲ್ಲಿಯೇ ಇರುತ್ತೇನೆ. ಅಲ್ಲಿಯೇ ಊಟ ಮಾಡಿ ಶಾಲೆಯಲ್ಲಿಯೇ ಮಲಗುತ್ತೇನೆ. ಯಾವ ಚೇರ್ಮನ್‌ ಮನೆಗೂ ಹೋಗುವುದಿಲ್ಲ. ಒಳ್ಳೆಯ ನಾಟಿ ಕೋಳಿ ಸಾಂಬಾರ್‌ ಊಟಕ್ಕೂ ಹೋಗುವುದಿಲ್ಲ’ ಎಂದು ತಿಳಿಸಿದರು.

‘94ಸಿ ಮುಂದುವರಿಸುತ್ತಿದ್ದೇವೆ. ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವವರು ಹಕ್ಕುಪತ್ರ ಪಡೆಯಲು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಬ್ರಿಟಿಷ್‌ ಕಾನೂನು ತೆಗೆದು ಹಾಕಿ, ಜನರ ಪರವಾಗಿ ಕಾನೂನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಹಳ್ಳಿಯಲ್ಲಿ ಸ್ಮಶಾನ ಇರಬೇಕು. ಮೂಲಸೌಕರ್ಯ ಒದಗಿಸಲು ಜಿಲ್ಲೆಯಲ್ಲಿ 279 ಕಂದಾಯ ಗ್ರಾಮ ಮಾಡಲು ಜಿಲ್ಲಾಧಿಕಾರಿ ಮಾಹಿತಿ ಒದಗಿಸಿದ್ದಾರೆ. ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೆ ನಮ್ಮ ಸಂವಿಧಾನ ಬದುಕುವ ಹಕ್ಕು ನೀಡಿದೆ. ಪ್ರತಿಯೊಬ್ಬರ ನೆಮ್ಮದಿಯ ಜೀವನಕ್ಕೆ ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.

ತಲಾ 2 ಎಕರೆ ಜಮೀನು ಕೊಡಿ

ವಾಣಿವಿಲಾಸ ಸಾಗರ ಜಲಾಶಯ ನಮ್ಮ ತಾಲ್ಲೂಕಿನಲ್ಲಿದೆ. ಹಿಂದೆ ಈ ಜಲಾಶಯ ನಿರ್ಮಾಣಕ್ಕೆ ಇಲ್ಲಿನ ರೈತರು ತಮ್ಮ ಜಮೀನು ಪುಗಸಟ್ಟೆ ಕೊಟ್ಟಿದ್ದಾರೆ. ಯಾವುದೇ ಪರಿಹಾರ ತೆಗೆದುಕೊಂಡಿಲ್ಲ. ಜಲಾಶಯದಿಂದ ಸುಮಾರು 25 ಹಳ್ಳಿಯ ರೈತರ ಜಮೀನು ಮುಳುಗಡೆಯಾಗಿದೆ. ಕೃಷಿ ಜಮೀನು ಕಳೆದುಕೊಂಡಿರುವ ರೈತರಿಗೆ ಸರ್ಕಾರಿ ಜಾಗದಲ್ಲಿ ತಲಾ 2 ಎಕರೆ ಜಮೀನನ್ನು ಮಂಜೂರು ಮಾಡಿ ಕೊಡಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಮನವಿ ಮಾಡಿದರು.

ಜನರ ಸಮಸ್ಯೆ ಆಲಿಸಿದ ಸಚಿವ

ಮಿನಿ ವಿಧಾನಸೌಧ ನಿರ್ಮಾಣ ಭೂಮಿಪೂಜೆಗೂ ಮೊದಲು ಸಚಿವ ಆರ್‌. ಅಶೋಕ್‌ ಅವರು ಹಕ್ಕಿಪಿಕ್ಕಿ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ನಿರ್ಮಾಣ ಆಗುತ್ತಿರುವ ಬಡಾವಣೆ ವೀಕ್ಷಿಸಿದರು. ಭೂಮಿಪೂಜೆ ನಂತರ ಹತ್ತಿರದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹಕ್ಕಿಪಿಕ್ಕಿ ಜನರ ಮನೆಯೊಳಗೆ ಹೋಗಿ ಅವರ ಸಮಸ್ಯೆ ಆಲಿಸಿದರು.

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಅಧಿಕೃತ ಹಕ್ಕುಪತ್ರ ವಿತರಿಸಲಾಯಿತು. ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಪುರಸಭೆ ಅಧ್ಯಕ್ಷ ಎಂ. ಶ್ರೀನಿವಾಸ್‌, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಸಿಇಒ ಡಾ. ನಂದಿನಿದೇವಿ, ಉಪವಿಭಾಗ ಅಧಿಕಾರಿ ಚಂದ್ರಯ್ಯ, ತಹಶೀಲ್ದಾರ್‌ ವೈ. ತಿಪ್ಪೇಸ್ವಾಮಿ, ಇಒ ವಿಶ್ವನಾಥ್‌, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು
ಹಾಜರಿದ್ದರು.

‘ವೃದ್ಧಾಪ್ಯ ವೇತನಕ್ಕೆ ಅಲೆದಾಡಿಸಬೇಡಿ’

ಆಧಾರ್‌ ಕಾರ್ಡ್‌ ಆಧಾರವಾಗಿ ಇಟ್ಟುಕೊಂಡು 60 ವರ್ಷ ಆದವರಿಗೆ ನೇರವಾಗಿ ಅವರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಸೌಲಭ್ಯ ಒದಗಿಸಬೇಕು. ಈ ರೀತಿ ಪರಿವರ್ತನೆಯನ್ನು ರಾಜ್ಯದಲ್ಲಿ ತಂದಿದ್ದೇವೆ. ಈಗಾಗಲೇ 30,000 ಜನರಿಗೆ ಅವರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಕೊಟ್ಟಿದ್ದೇವೆ. ಇನ್ನೂ 2 ಲಕ್ಷ ಜನರಿಗೆ ಜನರಿಗೆ ವೃದ್ಧಾಪ್ಯ ವೇತನ ಕೊಡಲಾಗುವುದು. 68 ಲಕ್ಷ ಜನರಿಗೆ ಪಿಂಚಣಿ ಸೌಲಭ್ಯ ಕೊಡುತ್ತಿದ್ದೇವೆ. ಈ ವರ್ಷ ಹೆಚ್ಚುವರಿಯಾಗಿ 1,22,000 ಜನರಿಗೆ ಪಿಂಚಣಿ ಸೌಲಭ್ಯ ಕೊಡುತ್ತಿದ್ದೇವೆ. ಇನ್ನೂ ಮುಂದೆ ವೃದ್ಧಾಪ್ಯ ವೇತನ ಪಡೆಯಲು ಯಾರೂ ರಸ್ತೆಯಲ್ಲಿ ನಿಲ್ಲಬಾರದು. ಇಲ್ಲಸಲ್ಲದ ದಾಖಲೆ ಕೇಳಿ ಅಲೆದಾಡಿಸಬಾರದು ಎಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಕಂದಾಯ ಸಚಿವ ಆರ್‌. ಅಶೋಕ್‌ ಸೂಚನೆ ನೀಡಿದರು.

ಭೂಮಿಪೂಜೆ ದಿನವೇ ಅಪಸ್ವರ

ಈಗಿರುವ ತಾಲ್ಲೂಕು ಕಚೇರಿ ಪಟ್ಟಣದ ಹೃದಯ ಭಾಗದಲ್ಲಿದೆ. ಇದರಿಂದ ತಾಲ್ಲೂಕಿನ ಎಲ್ಲೆಡೆಯಿಂದ ಸರ್ಕಾರಿ ಕೆಲಸಕ್ಕೆ ಬಂದು ಹೋಗುವ ಜನರಿಗೆ ಅನುಕೂಲ ಆಗುತ್ತಿದೆ. ಆದರೆ, ಈಗ ನೂತನವಾಗಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಪಟ್ಟಣದಿಂದ ದೂರವಿರುವ ಗುಡ್ಡದಲ್ಲಿದೆ. ಯಾವುದೇ ಮುಖ್ಯರಸ್ತೆ ಹತ್ತಿರದಲ್ಲಿ ಹಾದು ಹೋಗಿಲ್ಲ. ಸಾರಿಗೆ ಸಂಪರ್ಕವಿಲ್ಲ. ಇಲ್ಲಿಗೆ ವೃದ್ಧರು, ಅಂಗವಿಕಲರು ಸೇರಿ ಇನ್ನಿತರರು ಹೋಗಿ ಬರಲು ತುಂಬಾ ಕಷ್ಟವಾಗುತ್ತದೆ. ಹಳ್ಳಿಗಳಿಂದ ಬರುವ ಬಡಜನರು ತಾಲ್ಲೂಕು ಕಚೇರಿಗೆ ಹೋಗಲು ಮತ್ತೆ ಆಟೊ ಚಾರ್ಜ್‌ ಕೊಡಬೇಕಾಗುತ್ತದೆ. ಹಾಗಾಗಿ, ಪಟ್ಟಣಕ್ಕೆ ಹೊಂದಿಕೊಂಡಂತೆ ಹಾದುಹೋಗಿರುವ ಯಾವುದಾದರೂ ಮುಖ್ಯರಸ್ತೆ ಬದಿಯ ಸಮತಟ್ಟಾದ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಿಸಿದ್ದರೆ ಎಲ್ಲರಿಗೂ ಅನುಕೂಲ ಆಗುತ್ತಿತ್ತು. ಅದನ್ನು ಬಿಟ್ಟು ಪ್ರಾಣಿಪಕ್ಷಿಗಳು ಇರುವಂಥ ಗುಡ್ಡವನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಗೆಯುವುದು ಎಕೆ ಎಂಬ ಅಪಸ್ವರದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.

ಕೋವಿಡ್‌ ನಿಯಮ ಉಲ್ಲಂಘನೆ

ಮಿನಿ ವಿಧಾನಸೌಧ ಭೂಮಿಪೂಜೆ ಹಾಗೂ ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಆದರೆ, ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೇದಿಕೆಯಿಂದ ಕೆಳಗಿಳಿದ ಸಚಿವರಿಗೆ ವಿವಿಧ ಮನವಿ ಸಲ್ಲಿಸಲು, ಮಾತನಾಡಿಸಲು ನೂರಾರು ಜನರು ಮುಗಿಬಿದ್ದರು. ಕೋವಿಡ್‌ ನಿಯಮ ಪಾಲಿಸಲಿಲ್ಲ. ಜನರು ಪರಸ್ಪರ ಅಂತರ ಕಾಪಾಡಿಕೊಳ್ಳದ ದೃಶ್ಯ ಕಂಡು ಬಂತು.

‘ಅವರ್‍ಯಾರೂ ನಮಗಿಂತ ಮೇಲಲ್ಲ’

ಮಿನಿ ವಿಧಾನಸೌಧ ಶಂಕುಸ್ಥಾಪನೆ ಸಮಾರಂಭದ ಕಪ್ಪುಶಿಲೆ ಕಲ್ಲಿನಲ್ಲಿ ಮೊದಲಿಗೆ ಘನ ಉಪಸ್ಥಿತಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಅವರ ನಂತರ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ ರೀರಾಮುಲು ಹೆಸರು ಹಾಕಿಸಲಾಗಿತ್ತು. ಇವರಿಬ್ಬರ ಹೆಸರಿನ ಕೆಳಗೆ ಶಂಕುಸ್ಥಾಪನೆ: ಕಂದಾಯ ಸಚಿವ ಆರ್‌. ಅಶೋಕ್‌ ಎಂದು ಹೆಸರು ಹಾಕಿಸಲಾಗಿತ್ತು. ಶಂಕುಸ್ಥಾಪನೆ ಮಾಡಿದ ಬಳಿಕ ಇದನ್ನು ಗಮನಿಸಿದ ಸಚಿವ ಆರ್‌. ಅಶೋಕ್‌ ಈ ಕಲ್ಲಿನಲ್ಲಿ ನನಗಿಂತ ಮೇಲೆ ಹೆಸರು ಹಾಕಿರುವವರು ಯಾರೂ ನಮಗಿಂತ ಮೇಲಲ್ಲ. ಮೊದಲು ಇದನ್ನು ಬದಲಾಯಿಸಿ ನನಗೆ ಮಾಹಿತಿ ಕೊಡಿ ಎಂದು ಸಚಿವ ಆರ್‌.ಅಶೋಕ್‌ ಜಿಲ್ಲಾಧಿಕಾರಿಗೆ ಸೂಚಿಸಿದರು.

........

ಹಿರಿಯೂರು ರಸ್ತೆಯಿಂದ ಹೊಳಲ್ಕೆರೆ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿರುವ ರಸ್ತೆ 100 ಅಡಿ ಅಗಲವಾದರೆ ಮಾತ್ರ ಬೈಪಾಸ್‌ ರಸ್ತೆ ಆಗುತ್ತದೆ. ಪಟ್ಟಣದಲ್ಲಿ ಉದ್ಯಾನ ನಿರ್ಮಿಸಲು 20 ಎಕರೆ ಜಮೀನು ಮಂಜೂರು ಮಾಡಬೇಕು.

–ಎಸ್‌. ಲಿಂಗಮೂರ್ತಿ, ಅಧ್ಯಕ್ಷರು, ರಾಜ್ಯ ಖನಿಜ ನಿಗಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.