ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ದಿನದಲ್ಲಿ 2000 ಕಿ.ಮೀ. ಕ್ರಮಿಸಿದ ಸಾಹಸಿ

ಅಯೋಧ್ಯೆಗೆ ಸೈಕಲ್‌ ಯಾತ್ರೆ ಕೈಗೊಂಡ ಹೊಸಯಳನಾಡು ಯುವಕ
Last Updated 10 ಮೇ 2021, 4:57 IST
ಅಕ್ಷರ ಗಾತ್ರ

ಹಿರಿಯೂರು: ‘ಕೋವಿಡ್ ಅಲೆಯ ನಡುವೆಯೇ ಸೈಕಲ್‌ನಲ್ಲಿ 18 ದಿನಗಳಲ್ಲಿ ಐದು ರಾಜ್ಯಗಳನ್ನು ಸುತ್ತಿ ಅಯೋಧ್ಯೆಗೆ ಹೋಗಿ ಮರಳಿ ಬಂದಿರುವೆ. ನಮ್ಮಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇದ್ದಲ್ಲಿ ಕೊರೊನಾ ಸೋಂಕು ತಗುಲುವುದಿಲ್ಲ’ ಎಂದು ಹೇಳುತ್ತಾರೆ ತಾಲ್ಲೂಕಿನ ಹೊಸಯಳನಾಡು ಗ್ರಾಮದ ಯುವಕ ಕರಿಯಣ್ಣ.

ತಾಲ್ಲೂಕಿನ ಹೊಸಯಳನಾಡು ಗ್ರಾಮದಿಂದ ಏ.12ರಂದು ‘ಹನುಮ ಜನ್ಮಭೂಮಿಯಿಂದ ರಾಮ ಜನ್ಮಭೂಮಿಗೆ’ ಎಂಬ ಘೋಷ ವಾಕ್ಯದೊಂದಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದ ಕರಿಯಣ್ಣ ಶನಿವಾರ ಯಶಸ್ವಿಯಾಗಿ ಯಾತ್ರೆ ಮುಗಿಸಿ ಮರಳಿದ್ದು, ‘ಪ್ರಜಾವಾಣಿ’ ಜೊತೆ ತಮ್ಮ ಅನುಭವ ಹಂಚಿಕೊಂಡರು.

‘ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಊರ ಹೊರಗಿನ ಶಾಲೆ, ದೇವಸ್ಥಾನ, ಕೆಲವು ಕಡೆ ಆರ್ಎಸ್ಎಸ್ ಕಚೇರಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದೆ. ಮತ್ತೆ ಚಿತ್ರದುರ್ಗದಲ್ಲಿ ಪರೀಕ್ಷೆ ಮಾಡಿಸಿದೆ. ನೆಗೆಟಿವ್ ವರದಿ ಬಂದ ಕಾರಣ ಗ್ರಾಮಕ್ಕೆ ಮರಳಿದ್ದೇನೆ. ಯುವ ಸಮೂಹ ಉಡಾಫೆ ಮನೋಭಾವ ಬಿಟ್ಟು, ಮಾರ್ಗಸೂಚಿ ಪಾಲಿಸಿದಲ್ಲಿ ಖಂಡಿತಾ ಕೊರೊನಾವನ್ನು ಓಡಿಸಬಹುದು’ ಎಂದರು.

‘ನಿತ್ಯ ನೂರು ಕಿ.ಮೀ. ಕ್ರಮಿಸುತ್ತ ಮೊದಲು ಹೈದರಾಬಾದ್ ತಲುಪಿದೆ. ಆಕಸ್ಮಿಕ ಎಂಬಂತೆ ಅಲ್ಲಿಂದ ರಾಷ್ಟ್ರೀಯ ಮಟ್ಟದ ಸೈಕಲ್ ಕ್ರೀಡಾಪಟು ಎಂ. ವರಪ್ರಸಾದ್ ಜೊತೆಗೂಡಿದ ನಂತರ ಕೇವಲ 18 ದಿನದಲ್ಲಿ 2000 ಕಿ.ಮೀ. ಕ್ರಮಿಸಿ ಏ.30 ರಂದು ಬೆಳಿಗ್ಗೆ 10.30ಕ್ಕೆ ಅಯೋಧ್ಯೆ ತಲುಪಿದೆವು. ವರಪ್ರಸಾದ್ ಇದ್ದ ಕಾರಣಕ್ಕೆ ಭಾಷೆಯ ಸಮಸ್ಯೆ ಆಗಲಿಲ್ಲ. ಕೂಡ್ಲಿಗಿ, ಅಂಜನಾದ್ರಿ, ಗಂಗಾವತಿ, ಕಾರಟಗಿಗಳಲ್ಲಿ ‘ಭಾರತ ಕೊರೊನಾ ಮುಕ್ತವಾಗಬೇಕು, ದೇಶದ ಜನರು ಪ್ರಾಮಾಣಿಕರಾಗಬೇಕು, ಎಲ್ಲ ದೇಶವಾಸಿಗಳಿಗೆ ಪೌಷ್ಟಿಕ ಆಹಾರ ದೊರಕಬೇಕು. ಜೀವಜಲ ಉಳಿವಿಗೆ ಎಲ್ಲರು ಶ್ರಮಿಸಬೇಕು. ಯುವಕರು ರಾಮಭಕ್ತಿಯೇ ಶಕ್ತಿ ಎಂಬುದನ್ನು ಅರಿಯಬೇಕು’ ಎಂಬ ನಮ್ಮ ಯಾತ್ರೆಯ ಉದ್ದೇಶ ಕುರಿತ ಜಾಗೃತಿ ಸಭೆಗಳನ್ನು ನಡೆಸಿದ್ದೆವು. ಬಳಿಕ ಕೋವಿಡ್ ಕಾರಣದಿಂದ ಸಭೆಗಳನ್ನು ನಡೆಸಲು ಆಗಲಿಲ್ಲ’ ಎಂದು ಹೇಳಿದರು.

ಮರೆಯದ ನೆನಪು: ‘ಹಂಪಿಯಲ್ಲಿ ಕೋವಿಡ್ ಕಾರಣದಿಂದ ದೋಣಿ ಸೇವೆ ಸ್ಥಗಿತಗೊಂಡಿತ್ತು. ಹನುಮಂತಪ್ಪ ಎಂಬ ಎಳನೀರು ಮಾರುವ ವ್ಯಕ್ತಿ ಉಚಿತವಾಗಿ ಎಳನೀರು ಕೊಟ್ಟು, ತನ್ನ ಹೆಗಲ ಮೇಲೆ ನನ್ನ ಸೈಕಲ್ ಹೊತ್ತು ತುಂಗಭದ್ರಾ ನದಿ ದಾಟಲು ನೆರವು ನೀಡಿದ್ದರು. ಮಹಾರಾಷ್ಟ್ರದ ಉನ್ನಿ ಎಂಬ ಗ್ರಾಮದಲ್ಲಿ ಗ್ರಾಮಸ್ಥರು ಹಬ್ಬದ ಅಡುಗೆ ಮಾಡಿ ಬಡಿಸಿದ್ದು, ನಾಗಪುರ ದಾಟಿದ ನಂತರ ಎದುರಾದ ಘಾಟಿಯಲ್ಲಿ ಸುಮಾರು 8 ಕಿ.ಮೀ. ದೂರ ಸೈಕಲ್ ಅನ್ನು ತಳ್ಳಿಕೊಂಡು ಹೋಗಿದ್ದನ್ನು ಎಂದೂ ಮರೆಯಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT