ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷವಿಟ್ಟು ನಾಲ್ವರ ಕೊಲೆ: ಧಾರಾವಾಹಿ ಗೀಳು ಅಂಟಿಸಿಕೊಂಡಿದ್ದ ಆರೋಪಿ ಬಾಲಕಿ!

ಕುಟುಂಬಕ್ಕೆ ವಿಷವಿಟ್ಟು ನಾಲ್ವರ ಕೊಲೆ ಮಾಡಿದ ಆರೋಪ
Last Updated 21 ಅಕ್ಟೋಬರ್ 2021, 6:26 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಮುದ್ದೆಯಲ್ಲಿ ವಿಷ ಬೆರೆಸಿ ಕುಟುಂಬದ ನಾಲ್ವರ ಸಾವಿಗೆ ಕಾರಣವಾಗಿರುವ ಆರೋಪ ಎದುರಿಸುತ್ತಿರುವ 17 ವರ್ಷದ ಬಾಲಕಿ, ಟಿ.ವಿ ಧಾರಾವಾಹಿ ನೋಡುವ ಗೀಳು ಅಂಟಿಸಿಕೊಂಡಿದ್ದಳು ಎಂಬಸಂಗತಿ ಬೆಳಕಿಗೆ ಬಂದಿದೆ.

ಟಿ.ವಿ. ವೀಕ್ಷಣೆಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮವಾಗಿ ವೈಮನಸ್ಸು ಸೃಷ್ಟಿಯಾಗಿದೆ. ಈ ಗೀಳು ತಪ್ಪಿಸುವ ಉದ್ದೇಶದಿಂದ ಮಗಳನ್ನು ಮನೆಗೆಲಸ ಮಾಡುವಂತೆ ತಂದೆ–ತಾಯಿ ತಾಕೀತು ಮಾಡುತ್ತಿದ್ದರು ಎನ್ನಲಾಗಿದೆ. ಶಿಕ್ಷಣ ಮೊಟಕುಗೊಳಿಸಿದ್ದ ಬಾಲಕಿ ಕೆಲಸ ಮಾಡುತ್ತಿದ್ದರೆ ಇವಳಸಹೋದರಿ ಹಾಗೂ ಸಹೋದರ ವ್ಯಾಸಂಗದಲ್ಲಿ ಮಗ್ನರಾಗುತ್ತಿದ್ದರು. ಇದು ಬಾಲಕಿಯ ಮನಸನ್ನು ಘಾಸಿಗೊಳಿಸಿದ ಸಾಧ್ಯತೆ ಇದೆ ಎಂಬ ವಿಚಾರ ತನಿಖೆಯಿಂದಗೊತ್ತಾಗಿದೆ.

ಪ್ರಕರಣ ಏನು?

ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದ ನಾಲ್ವರು ಮೃತಪಟ್ಟ ಘಟನೆ ಜುಲೈ 12ರಂದು ನಡೆದಿತ್ತು. ಬಾಲಕಿಯ ತಂದೆ ತಿಪ್ಪಾನಾಯ್ಕ (45), ತಾಯಿ ಸುಧಾಬಾಯಿ (40), ಅಜ್ಜಿ ಗುಂಡಿಬಾಯಿ (80) ಹಾಗೂ ಸಹೋದರಿ ರಮ್ಯಾ (16) ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಹುಲ್‌ (19) ಚಿಕಿತ್ಸೆಯ ಬಳಿಕ ಚೇರಿಸಿಕೊಂಡಿದ್ದ. ಕೊಲೆ ಆರೋಪ ಎದುರಿಸುತ್ತಿರುವ ಬಾಲಕಿ ಮುದ್ದೆ ಸೇವಿಸಿರಲಿಲ್ಲ.

ಇಸಾಮುದ್ರ ಗೊಲ್ಲರಹಟ್ಟಿ ತಿಪ್ಪಾನಾಯ್ಕ ಅವರ ಸ್ವಗ್ರಾಮ. ಪತ್ನಿ ಸುಧಾಬಾಯಿ, ತಾಯಿ ಗುಂಡಿಬಾಯಿ, ಪುತ್ರ ರಾಹುಲ್‌ ಹಾಗೂ ಪುತ್ರಿ ರಮ್ಯಾ ಅವರೊಂದಿಗೆ ಜೀವನ ಕಟ್ಟಿಕೊಂಡಿದ್ದರು. ಆರೋಪಕ್ಕೆ ಗುರಿಯಾಗಿರುವ ಬಾಲಕಿ ಸುಧಾಬಾಯಿ ಅವರ ತವರು ಮನೆಯಲ್ಲಿ ನೆಲೆಸಿದ್ದಳು. ಪಿತ್ರಾರ್ಜಿತವಾಗಿ ಬಂದಿರುವ ಒಂದೂವರೆ ಎಕರೆ ಭೂಮಿಯೇ ಈ ಕುಟುಂಬಕ್ಕೆ ಆಸರೆ. ಮೆಕ್ಕೆಜೋಳ ಹಾಗೂ ತರಕಾರಿಯನ್ನು ಬೆಳೆದು ಜೀವನ ಸಾಗಿಸುತ್ತಿದ್ದರು. ಆಗಾಗ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸವನ್ನೂ ಮಾಡುತ್ತಿದ್ದರು.

ತಿಪ್ಪಾನಾಯ್ಕ ಹಾಗೂ ಸುಧಾಬಾಯಿ ದಂಪತಿಯ ಮೂವರು ಮಕ್ಕಳಲ್ಲಿ ಈ ಬಾಲಕಿ ಎರಡನೆಯಳು. ಒಂದು ವರ್ಷದ ಮಗು ಇದ್ದಾಗಲೇ ಹೊಳಲ್ಕೆರೆ ತಾಲ್ಲೂಕಿನ ಐನಳ್ಳಿಯ ಅಜ್ಜಿಯ ಮನೆಯಲ್ಲಿ ಬಿಡಲಾಗಿತ್ತು. 14 ವರ್ಷ ತುಂಬಿದ ಬಳಿಕ ತಂದೆಯ ಮನೆಗೆ ಕರೆತಲಾಗಿತ್ತು. 8ನೇ ತರಗತಿ ವ್ಯಾಸಂಗಕ್ಕೆ ಇಸಾಮುದ್ರಕ್ಕೆ ಬಂದವಳು ಶಿಕ್ಷಣವನ್ನು ಮೊಟಕುಗೊಳಿಸಿ ಕೂಲಿ ಕೆಲಸ ಮಾಡುತ್ತಿದ್ದಳು. ಕಳೆ ಕೀಳುವುದು, ತರಕಾರಿ ಬಿಡಿಸುವುದು ಹೀಗೆ ಹಲವು ಬಗೆಯ ಕೆಲಸವನ್ನುಕಲಿತಿದ್ದಳು.

‘ನಿತ್ಯವೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಯಾರೊಂದಿಗೂ ಸರಿಯಾಗಿ ಬೆರೆಯುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗಿಯೇ ಇರುತ್ತಿದ್ದಳು. ಸ್ನೇಹಿತೆಯರ ಜೊತೆ ಕೂಡ ಕೆಟ್ಟ ಆಲೋಚನೆಗಳನ್ನು ಹಂಚಿಕೊಂಡಿರಲಿಲ್ಲ. ಅವಳ ನಡವಳಿಕೆ ಯಾರಲ್ಲೂ ಅನುಮಾನ ಹುಟ್ಟಿಸಿರಲಿಲ್ಲ. ಕೆಲಸ ಮುಗಿಸಿ ಮನೆ ತಲುಪಿದ ಬಳಿಕ ಟಿ.ವಿ. ನೋಡುವುದು ಗ್ರಾಮದ ಮಹಿಳೆಯರ ದಿನಚರಿಯಾಗಿದೆ. ಈ ಬಾಲಕಿ ಕೂಡ ರಾತ್ರಿಯವರೆಗೆ ಟಿ.ವಿ. ಧಾರಾವಾಹಿ ನೋಡುತ್ತಿದ್ದಳು’ ಎಂದು ಕುಟುಂಬದ ನಿಕಟವರ್ತಿಯೊಬ್ಬರು ಮಾಹಿತಿ
ಹಂಚಿಕೊಂಡಿದ್ದಾರೆ.

ಕೃತ್ಯ ನಡೆದ ದಿನವೂ ಬಾಲಕಿ ಟಿ.ವಿ ನೋಡಿದ್ದಾಳೆ. ಜಗುಲಿಯ ಮೇಲೆ ಮುದ್ದೆ ತಯಾರಿಸಿ ಧಾರಾವಾಹಿ ನೋಡಿದ್ದಾಳೆ. ವಿದ್ಯುತ್‌ ಸ್ಥಗಿತಗೊಂಡ ಬಳಿಕ ಪೋಷಕರೊಂದಿಗೆ ಊಟಕ್ಕೆ ಕುಳಿತಿದ್ದಾಳೆ. ಉದರ ಸಮಸ್ಯೆಯ ನೆಪ ಹೇಳಿ ಮುದ್ದೆ ಸೇವಿಸಲು ನಿರಾಕರಿಸಿದ್ದಾಳೆ. ಅನ್ನ ಹಾಗೂ ಸಾಂಬಾರು ಮಾತ್ರ ಸೇವಿಸಿರುವುದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

‘ಬಾಲ್ಯದ ದಿನಗಳನ್ನು ಪೋಷಕರಿಂದ ದೂರವಾಗಿಯೇ ಕಳೆದಿದ್ದ ಬಾಲಕಿ ಕುಟುಂಬದ ಎಲ್ಲರೊಂದಿಗೆ ಹೊಂದಾಣಿಕೆ ಜೀವನ ಸಾಗಿಸುವುದು ಕಷ್ಟವಾಗಿದೆ. ಬಾಲಕಿಯ ವರ್ತನೆಗೆ ಪೋಷಕರು ಸದಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತಿಬ್ಬರು ಮಕ್ಕಳಾದ ರಮ್ಯಾ ಹಾಗೂ ರಾಹುಲ್‌ಗೆ ಪ್ರೀತಿ ತೋರಿದ್ದಾರೆ. ಅವರಿಗೆ ನೀಡುವ ಪ್ರೀತಿ–ವಾತ್ಸಲ್ಯವನ್ನು ತನಗೆ ತೋರುತ್ತಿಲ್ಲ ಎಂಬ ಕೊರಗು ಬಾಲಕಿಯಲ್ಲಿತ್ತು. ಇದು ದಿನ ಕಳೆದಂತೆ ಹೆಮ್ಮರವಾಗಿದೆ’ ಎಂಬುದು ಪೊಲೀಸರವಿವರಣೆ.

ವರ್ಷದ ಹಿಂದೆಯೇ ನಿರ್ಧಾರ

ಆಹಾರದಲ್ಲಿ ವಿಷ ಬೆರೆಸಿ ಕುಟುಂಬದ ಎಲ್ಲರನ್ನು ಕೊಲೆ ಮಾಡುವ ಸಂಚನ್ನು ವರ್ಷದ ಹಿಂದೆಯೇ ರೂಪಿಸಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ಆಹಾರದಲ್ಲಿ ಕೀಟನಾಶಕವನ್ನು ಬೆರೆಸಿ ಕೊಲೆ ಮಾಡಲು ಬಾಲಕಿ ನಿರ್ಧರಿಸಿದ್ದಳು. ಮೀನು ಸಾರು ಮಾಡಿದಾಗ ಈ ಪ್ರಯತ್ನ ಮಾಡಿದ್ದಳು. ಊಟ ಬಡಿಸಿಕೊಂಡ ಸಹೋದರ ರಾಹುಲ್‌ಗೆ ಕೀಟನಾಶಕದ ಘಾಟು ಮೂಗಿಗೆ ಬಡಿದಿತ್ತು. ಅನುಮಾನ ಬಂದು ಪರಿಶೀಲಿಸಿದಾಗ ವಿಷ ಬೆರೆತಿರುವುದು ಖಚಿತವಾಗಿತ್ತು. ಈ ಆರೋಪವನ್ನು ಬಾಲಕಿಯೇ ಬೇರೆಯವರ ಮೇಲೆ ಹೊರಿಸಿದ್ದಳು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಮೀನು ಕೆಲಸಕ್ಕೆ ಹೋಗುತ್ತಿದ್ದ ಬಾಲಕಿಗೆ ಕೀಟನಾಶಕ ಸಿಕ್ಕಿದೆ. ಬಳಸಿ ಬಿಸಾಡಿದ ಬಾಟಲಿಯಲ್ಲಿ ಒಂದಷ್ಟು ಕೀಟನಾಶಕ ಉಳಿದುಕೊಂಡಿದೆ. ಇದೇ ಬಾಟಲಿಯನ್ನು ಮನೆಗೆ ತಂದಿದ್ದಾಗಿ ವಿಚಾರಣೆಯ ವೇಳೆ ಬಾಲಕಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೊಂದಾಣಿಕೆ ಕಷ್ಟವಾಗಿರಬಹುದು’

ಹಲವು ವರ್ಷಗಳ ಬಳಿಕ ಮನೆಗೆ ಮರಳಿದ ಬಾಲಕಿಗೆ ಸಹೋದರ, ಸಹೋದರಿ ಹಾಗೂ ಪೋಷಕರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಖಿನ್ನತೆ ಬೆಳೆದು ಇಂತಹ ಅನಾಹುತಕ್ಕೆ ಕಾರಣ ಆಗಿರಬಹುದು ಎಂದು ಮನೋವೈದ್ಯ ಡಾ.ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

‘ಹುಟ್ಟಿನಿಂದ ಹಾಗೂ ಸುತ್ತಲಿನ ಪ್ರಭಾವದಿಂದ ಕೆಲ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಜ್ಜಿ ಮನೆಯಿಂದ ಕುಟುಂಬಕ್ಕೆ ಮರಳುವ ಬಾಲಕಿಯೊಂದಿಗೆ ಪೋಷಕರು ಸರಿಯಾಗಿ ನಡೆದುಕೊಳ್ಳಬೇಕಿತ್ತು. ಬಾಲಕಿಯ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಮತ್ತಿಬ್ಬರು ಮಕ್ಕಳಿಗೆ ನೀಡುವ ಪ್ರೀತಿ–ವಾತ್ಸಲ್ಯವನ್ನು ಬಾಲಕಿಗೂ ತೋರಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ’ ಎಂದು ತಿಳಿಸಿದ್ದಾರೆ.

ಬಾಲಕಿ ಮೇಲಿತ್ತು ಅನುಮಾನ

ವಿಷಾಹಾರ ಸೇವಿಸಿ ನಾಲ್ವರು ಮೃತಪಟ್ಟ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯ ಮೇಲೆಯೇ ಮೊದಲು ಅನುಮಾನ ವ್ಯಕ್ತಪಡಿಸಿದ್ದರು. ಕುಟುಂಬದ ಐವರು ಮುದ್ದೆ ಸೇವಿಸಿದರೆ ಆರೋಪಕ್ಕೆ ಗುರಿಯಾಗಿರುವ ಬಾಲಕಿ ಮಾತ್ರ ಅನ್ನ–ಸಾಂಬಾರು ಊಟ ಮಾಡಿದ್ದಳು.

17 ವರ್ಷದ ಬಾಲಕಿ ಪ್ರೇಮದ ಸೆಳೆತಕ್ಕೆ ಸಿಲುಕಿರಬಹುದೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಅವರ ಅನುಮಾನಕ್ಕೆ ಪುಷ್ಟಿ ನೀಡುವ ಅಂಶಗಳು ಸಿಕ್ಕಿರಲಿಲ್ಲ. ಹೀಗಾಗಿ, ಈ ದೃಷ್ಟಿಯಿಂದ ನಡೆಸುತ್ತಿದ್ದ ತನಿಖೆಯನ್ನು ಪೊಲೀಸರು ಕೈಬಿಟ್ಟಿದ್ದರು. ಕುಟುಂಬದೊಂದಿಗೆ ವೈಮನಸು ಬೆಳೆಸಿಕೊಂಡ ಹೊರಗಿನವರ ಕೈವಾಡ ಇರುವ ಬಗ್ಗೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT