ಗುರುವಾರ , ಫೆಬ್ರವರಿ 20, 2020
30 °C
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ

ಮನೆ ನಿರ್ಮಾಣಕ್ಕೆ ₹5ಲಕ್ಷ ನೀಡಿ: ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ₹5ಲಕ್ಷ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಳೆ ಮಾಧ್ಯಮಿಕ ಶಾಲಾ ಆವರಣದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾರ್ಮಿಕ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ‘ರಾಜ್ಯದಲ್ಲಿನ ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂಬುದಾಗಿ ಮುಖ್ಯಮಂತ್ರಿ, ಸಚಿವರು ಹೇಳುತ್ತಿದ್ದಾರೆ. ಯಾರ ಕಲ್ಯಾಣ ಮಾಡಿದ್ದಾರೆ ಎಂಬುದನ್ನು ತೋರಿಸಲಿ’ ಎಂದು ಸವಾಲು ಹಾಕಿದರು.

‘ರಾಜ್ಯದಲ್ಲಿ ಸೆಸ್‌ ಬಾಕಿ ಉಳಿಸಿಕೊಂಡಿರುವ ಸೋಲಾರ್ ಕಂಪನಿಗಳು, ಖಾಸಗಿ ದೂರವಾಣಿ ಸಂಸ್ಥೆಗಳು, ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳ ಸೆಸ್‌ ಹಣ ವಸೂಲಿ ಮಾಡುವ ಮೂಲಕ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ವೈ. ಕುಮಾರ್, ‘ನೋಂದಾಯಿತ ಕಟ್ಟಡ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಸಹಾಯಧನವಾಗಿ ₹10ಲಕ್ಷ ನೀಡಬೇಕು. ಸಹಜ ಸಾವಿಗೆ ₹5 ಲಕ್ಷ ಪರಿಹಾರ ವಿತರಿಸಬೇಕು’ ಎಂದು ಆಗ್ರಹಿಸಿದರು.

‘ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಆದೇಶ ಮುಂದುವರೆಸಬೇಕು. ವೇತನ ದ್ವಿಗುಣಗೊಳಿಸಲು ಮುಂದಾಗಬೇಕು. 60 ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಸಹಾಯಧನ ಮೃತರಾಗುವವರೆಗೂ ಮುಂದುವರೆಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರನ್ನು ಬೇರ್ಪಡಿಸಬೇಕು. ಪ್ರಧಾನಮಂತ್ರಿ ಮನ್‌ಧನ್ ಪಿಂಚಣಿ ಯೋಜನೆಯ ವಂತಿಕೆಯನ್ನು ಮಂಡಳಿಯಲ್ಲಿ ಇರುವ ಹಣದಿಂದಲೇ ಭರಿಸಬೇಕು. ಜತೆಗೆ ಪಿಂಚಣಿ ನೀಡುವಂತೆ ಆದೇಶಿಸಬೇಕು. ರಾಜ್ಯದಾದ್ಯಂತ ತಲೆದೋರಿರುವ ಸರ್ವರ್ ಸಮಸ್ಯೆ ಕೂಡಲೇ ಬಗೆಹರಿಸಬೇಕು’ ಎಂದು ಸರ್ಕಾರಕ್ಕೆ ಕೋರಿದರು.

ಇದೇ ಸಂದರ್ಭದಲ್ಲಿ ನಮ್ಮ ಎಲ್ಲ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಕೆ. ಗೌಸ್‌ಪೀರ್, ಖಜಾಂಚಿ ಡಿ. ಈಶ್ವರಪ್ಪ, ಮುಖಂಡರಾದ ಜೆ. ಮಂಜುನಾಥ್, ಇಮಾಮ್ ಮೊಹಿಮುದ್ದೀನ್, ವೈ. ಬಸವರಾಜ್, ಮುಜೀಬುಲ್ಲಾ, ಮಹಂತೇಶ್, ರಾಜಣ್ಣ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು