ಭಾನುವಾರ, ಮಾರ್ಚ್ 26, 2023
24 °C
ರಾಷ್ಟ್ರೀಯ ಮಟ್ಟದಲ್ಲಿ 1,429ನೇ ರ್‍ಯಾಂಕ್

ಚಿತ್ರದುರ್ಗ: ಶಿಕ್ಷಕ ದಂಪತಿ ಪುತ್ರ ಸ್ವಾಗತ್‌ಗೆ ನೀಟ್‌ ಪರೀಕ್ಷೆಯಲ್ಲಿ 672 ಅಂಕ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯ ಶಿಕ್ಷಕ ದಂಪತಿ ಎಸ್.ಕೆ. ರಾಮಸ್ವಾಮಿ ಹಾಗೂ ಸುನಿತಾ ಅವರ ಮಗ ಎಸ್.ಆರ್. ಸ್ವಾಗತ್ ನೀಟ್ ಪರೀಕ್ಷೆಯಲ್ಲಿ 720ಕ್ಕೆ 672 ಅಂಕಗಳನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ 1,429ನೇ ರ್‍ಯಾಂಕ್ ಗಳಿಸಿದ್ದಾನೆ. ಕೆಟಗರಿಯಲ್ಲಿ 369ನೇ ರ್‍ಯಾಂಕ್ ಪಡೆದಿದ್ದಾನೆ.

ಸ್ವಾಗತ್‌ ಅವರ ತಂದೆ–ತಾಯಿ ಇಬ್ಬರೂ ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಅಲ್ಲಿಯೇ ನೆಲೆಸಿದ್ದಾರೆ.

‘ನಾನು ಎಸ್ಸೆಸ್ಸೆಲ್ಸಿವರೆಗೆ ಶಿವಮೊಗ್ಗದಲ್ಲೇ ಓದಿದ್ದೆ. ಪಿಯುಸಿಗೆ ದಾವಣಗೆರೆಯ ಸರ್ ಎಂ.ವಿ.ಕಾಲೇಜಿಗೆ ಸೇರಿದೆ. ಪರೀಕ್ಷೆಗೂ ಮೊದಲು 700 ಅಂಕ ಪಡೆಯುವ ಗುರಿಯೊಂದಿಗೆ ಓದಿದ್ದೆ. ಆದರೆ, ಪ್ರಶ್ನೆಗಳಲ್ಲಿ ಆದ ಗೊಂದಲದಿಂದ 672 ಅಂಕ ಪಡೆಯಲು ಸಾಧ್ಯವಾಯಿತು. ಶಿಕ್ಷಕರ ಮಾರ್ಗದರ್ಶನದಂತೆ ತರಬೇತಿ ಪಡೆಯುತ್ತಿದ್ದೆ. ಕೊರೊನಾದಿಂದ ದ್ವಿತೀಯ ಪಿಯುಸಿಯ ಮಧ್ಯದಲ್ಲಿ ಕೇವಲ ಮೂರು ತಿಂಗಳಷ್ಟೇ ಕಾಲೇಜು ನಡೆಯಿತು. ಉಳಿದಂತೆ ಎರಡು ವರ್ಷವೂ ಆನ್‌ಲೈನ್ ಕ್ಲಾಸ್ ನಡೆಸುತ್ತಿದ್ದರು. ಮನೆಯಲ್ಲಿ ಕುಳಿತು ಶ್ರದ್ಧೆಯಿಂದ ಆನ್‌ಲೈನ್ ತರಗತಿ ಆಲಿಸುತ್ತಿದ್ದೆ. ಮುಖ್ಯಾಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೆ. ದಿನಕ್ಕೆ 6ರಿಂದ 8 ಗಂಟೆ ಅಧ್ಯಯನ ಮಾಡುತ್ತಿದ್ದೆ’ ಎಂದು ವಿವರಿಸಿದರು ಸ್ವಾಗತ್.

‘ತಂದೆ, ತಾಯಿ ಹಾಗೂ ಕಾಲೇಜಿನ ಉಪನ್ಯಾಸಕರು ಹೆಚ್ಚು ಪ್ರೋತ್ಸಾಹ ನೀಡಿದರು. ಒತ್ತಡದಲ್ಲಿ ಅಧ್ಯಯನ ಮಾಡದೆ ಸಮಾಧಾನದಿಂದ ಓದುತ್ತಿದ್ದೆ. ಕಾಲೇಜಿನಲ್ಲಿ ಪ್ರತೀ ವಾರಾಂತ್ಯದಲ್ಲಿ ಪರೀಕ್ಷೆ ಮಾಡಿ ರ್‍ಯಾಂಕ್ ನೀಡುತ್ತಿದ್ದರು. ವಿದ್ಯಾರ್ಥಿಗಳ ನಡುವೆ ಹೆಚ್ಚು ಸ್ಪರ್ಧೆ ಇತ್ತು. ಇದರಿಂದ ನನಗೆ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು. ಮುಂದೆ ವೈದ್ಯಕೀಯ ಪದವಿ ಪಡೆದು ಉತ್ತಮ ವೈದ್ಯನಾಗುವ ಕನಸಿದೆ’ ಎನ್ನುತ್ತಾನೆ ಸ್ವಾಗತ್‌.

‘ಸ್ವಾಗತ್ ಶಿಸ್ತಿನಿಂದ ಅಧ್ಯಯನ ಮಾಡುತ್ತಿದ್ದ. ಅವನಿಗೆ ಇನ್ನೂ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಇತ್ತು. ಆದರೆ, ಸಣ್ಣ–ತಪ್ಪುಗಳಿಂದ ಅಂಕಗಳು ಕಡಿಮೆ ಆದವು. 720ಕ್ಕೆ 672 ಅಂಕ ಪಡೆಯುವುದು ಸುಲಭವಲ್ಲ. ಕಷ್ಟಪಟ್ಟು ಓದಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎನ್ನುತ್ತಾರೆ ತಂದೆ ರಾಮಸ್ವಾಮಿ.

‘ಕೋವಿಡ್‌ನಿಂದ ಎರಡು ವರ್ಷ ಸರಿಯಾಗಿ ಕಾಲೇಜುಗಳೇ ನಡೆಯಲಿಲ್ಲ. ಮಗ ಕಾಲೇಜಿಗೆ ಹೋಗದೆ ಹೇಗೆ ಹೆಚ್ಚು ಅಂಕ ಪಡೆಯುತ್ತಾನೆ ಎಂಬ ಆತಂಕ ಇತ್ತು. ಆದರೆ, ಕೇವಲ ಆನ್‌ಲೈನ್ ಕ್ಲಾಸ್ ಕೇಳಿಕೊಂಡು ಈ ಸಾಧನೆ ಮಾಡಿದ್ದಾನೆ’ ಎಂದು ತಾಯಿ ಸವಿತಾ ಮಗನ ಬಗ್ಗೆ ಹೆಮ್ಮೆಯಿಂದ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.