ಭಾನುವಾರ, ಸೆಪ್ಟೆಂಬರ್ 19, 2021
31 °C
ಕೋವಿಡ್‌ ಮೂರನೇ ಅಲೆ ಎದುರಿಸಲು ಭರದ ಸಿದ್ಧತೆ

ಕೋವಿಡ್‌ ಮೂರನೇ ಅಲೆ: ಪ್ರಾಣವಾಯುವಿಗೆ ಎಂಟು ಆಮ್ಲಜನಕ ಘಟಕ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌ನ ಸಂಭಾವ್ಯ ಮೂರನೇ ಅಲೆ ಎದುರಿಸಲು ಸಜ್ಜಾಗುತ್ತಿರುವ ಜಿಲ್ಲಾಡಳಿತ ಪ್ರಾಣವಾಯು ಕೊರತೆ ನೀಗಿಸಲು ಎಂಟು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಈ ಪೈಕಿ ಒಂದು ಘಟಕ ಕಾರ್ಯಾರಂಭಗೊಂಡಿದ್ದು, ಉಳಿದವುಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಪ್ರತಿ ತಾಲ್ಲೂಕಿನಲ್ಲಿ 500 ಲೀಟರ್‌ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಇರಬೇಕು ಎಂಬುದು ಸರ್ಕಾರದ ಆಶಯ. ಇದರಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ಹಾಗೂ ಜಿಲ್ಲಾ ಕೇಂದ್ರದಲ್ಲಿ ಮೂರು ಆಮ್ಲಜನಕ ಘಟಕಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರತಿ ನಿಮಿಷಕ್ಕೆ ಎಲ್ಲ ಘಟಕಗಳು 3,650 ಲೀಟರ್‌ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಕೋವಿಡ್‌ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಆಮ್ಲಜನಕದ ಅಗತ್ಯದ ಬಗ್ಗೆ ಅರಿವಾಗಿದೆ. ಜಿಲ್ಲೆಯಲ್ಲಿ ಒಂದೂ ಆಮ್ಲಜನಕ ಉತ್ಪಾದನಾ ಘಟಕ ಇಲ್ಲದೇ ಪರದಾಡುವ ಸ್ಥಿತಿ ಆಗ ನಿರ್ಮಾಣವಾಗಿತ್ತು. ಹರಿಹರ, ಹೊಸಪೇಟೆ, ಶಿವಮೊಗ್ಗದಿಂದ ಆಮ್ಲಜನಕ ತರಬೇಕಿತ್ತು. ಸಕಾಲಕ್ಕೆ ಪ್ರಾಣವಾಯು ಸಿಗದೇ ರೋಗಿಗಳ ಚಿಕಿತ್ಸೆಗೂ ತೊಂದರೆ ಉಂಟಾಗಿತ್ತು. ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣವಾದರೆ ಈ ಸಮಸ್ಯೆ ತಲೆದೋರದು.

ವೈದ್ಯಕೀಯ ಕಾಲೇಜುಗಳು ಆಮ್ಲಜನಕ ಉತ್ಪಾದನಾ ಘಟಕ ಹೊಂದುವುದು ಕಡ್ಡಾಯ. ತಾಂತ್ರಿಕ ಕಾರಣದಿಂದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದು ಕಾರ್ಯಾರಂಭವಾಗಿರಲಿಲ್ಲ. ಸರ್ಕಾರದ ಸೂಚನೆಯ ಮೇರೆಗೆ ಇಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿದೆ. ಆಸ್ಪತ್ರೆಗೆ ಅಗತ್ಯ ಇರುವ ಆಮ್ಲಜನಕ ಇಲ್ಲಿಯೇ ಲಭ್ಯವಾಗುತ್ತದೆ. ಉಳಿದ ಖಾಸಗಿ ಆಸ್ಪತ್ರೆಗಳು ಮಾತ್ರ ವೈದ್ಯಕೀಯ ಆಮ್ಲಜನಕಕ್ಕೆ ಖಾಸಗಿ ಏಜೆನ್ಸಿಗಳನ್ನು ಅವಲಂಬಿಸಬೇಕಾಗಬಹುದು.

ವೈದ್ಯಕೀಯ ಆಮ್ಲಜನಕದ ಕಂಟೈನರ್‌ ಕೂಡ ಸರ್ಕಾರ ಪೂರೈಸಿದೆ. ಆರೋಗ್ಯ ಇಲಾಖೆ ಇದನ್ನು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ಹಂಚಿಕೆ ಮಾಡಿದೆ. 499 ಲೀಟರ್‌ ಆಮ್ಲಜನಕವನ್ನು ಇದರಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಜಿಲ್ಲೆಯಲ್ಲಿ ಸದ್ಯ 236 ಆಮ್ಲಜನಕ ಸಾಂದ್ರಕಗಳಿವೆ. ಬಹುತೇಕ ಸಾಂದ್ರಕಗಳು ಸಂಘ–ಸಂಸ್ಥೆ ಹಾಗೂ ದಾನಿಗಳಿಂದ ನೆರವಿನ ರೂಪದಲ್ಲಿ ಬಂದಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಇತರೆಡೆಗೆ ಇವುಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆಗಳ ಸಂಖ್ಯೆಯನ್ನು 100ಕ್ಕೆ ಏರಿಸಲಾಗಿದೆ. ಜಿಲ್ಲೆಯಲ್ಲಿ 11 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲಿ 15 ಹಾಸಿಗೆಗಳಿಗೆ ಮಾತ್ರ ಆಮ್ಲಜನಕ ಪೂರೈಕೆ ಆಗುತ್ತಿತ್ತು. ಇದನ್ನು 30 ಹಾಸಿಗೆಗಳಿಗೆ ವಿಸ್ತರಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿಯೂ 100 ಹಾಸಿಗೆ ಹಾಗೂ ವೇದಾಂತ ಗಣಿ ಕಂಪನಿ ನಿರ್ಮಿಸಿದ ತಾತ್ಕಾಲಿಕ ಆಸ್ಪತ್ರೆಯ ಎಲ್ಲ ಹಾಸಿಗೆಗಳಿಗೂ ಆಮ್ಲಜನಕ ಪೂರೈಸುವ ಪೈಪ್‌ಲೈನ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಮಾಹಿತಿ
ನೀಡಿವೆ. 

...

ಜಿಲ್ಲೆಯಲ್ಲಿ 471 ಆಮ್ಲಜನಕ ಸಿಲಿಂಡರ್‌ ಇವೆ. ಇದರಲ್ಲಿ 227 ಸಿಲಿಂಡರ್‌ಗಳನ್ನು ತಾಲ್ಲೂಕು ಆಸ್ಪತ್ರೆಗಳಿಗೆ ನೀಡಲಾಗಿದೆ. ಪ್ರಾಣವಾಯುವಿಗೆ ಕೊರತೆ ಆಗದಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

- ಡಾ.ಆರ್‌. ರಂಗನಾಥ್‌, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು