ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮಕ್ಕೆ ಸಾಕ್ಷಿಯಾದ ಚಿಣ್ಣರ ಕಲರವ

ಜಿಲ್ಲೆಯ ಎಲ್‌ಕೆಜಿ, ಯುಕೆಜಿ, ಅಂಗನವಾಡಿಗಳಲ್ಲಿ ಮನೆಮಾಡಿದ ಸಂತಸ
Last Updated 9 ನವೆಂಬರ್ 2021, 6:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೆಗಲ ಮೇಲೆ ಪುಟಾಣಿ ಬ್ಯಾಗ್‌ ಹೊತ್ತು, ಮಾಸ್ಕ್ ಧರಿಸಿ ಶಾಲೆಗಳ ಅಂಗಳ ಪ್ರವೇಶಿಸುತ್ತಿದ್ದ ನೂರಾರು ಚಿಣ್ಣರು ನಗುಮೊಗದಿಂದಲೇ ಪೋಷಕರೊಂದಿಗೆ ಬಂದರು.

ಶಿಕ್ಷಕರು–ಶಿಕ್ಷಕಿಯರು ಅದ್ದೂರಿ ಸ್ವಾಗತದೊಂದಿಗೆ ತಮ್ಮ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಕೆಲ ಮಕ್ಕಳು ಮಾತ್ರ ಅಳುತ್ತಿದ್ದ ಸದ್ದು ಕೇಳಿಸಿತು.

ಕೋವಿಡ್ ಕಾರಣಕ್ಕೆ ಒಂದೂವರೆ ವರ್ಷದಿಂದ ಚಿಣ್ಣರಿಲ್ಲದೆಯೇ ಬಾಗಿಲು ಮುಚ್ಚಿದ್ದ ಶಾಲೆಗಳು ಸೋಮವಾರ ಆರಂಭವಾದಾಗ ಕಂಡ ದೃಶ್ಯಗಳಿವು. ಕೆಲ ಶಾಲೆಗಳಲ್ಲಿ ವರ್ಣಮಯ ಕಾಗದ, ತೋರಣಗಳಿಂದ ಅಲಂಕರಿಸಲಾಗಿತ್ತು. ಹಲವೆಡೆ ಕೇಕ್‌ ಕತ್ತರಿಸಿ ಸಿಹಿ ಹಂಚಲಾಯಿತು. ಪುಟಾಣಿಗಳ ಚಿಲಿಪಿಲಿ ಕಲರವ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಯಿತು.

ಸರ್ಕಾರದ ಮಾರ್ಗಸೂಚಿ ಅನ್ವಯ ಚಿಣ್ಣರು ಕೂರುವಂಥ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿ ಶುಚಿಗೊಳಿಸಲಾಗಿತ್ತು. ಜ್ಞಾನದೀಪ, ಗುರುಕುಲ, ವಿದ್ಯಾವಾಹಿನಿ ಸೇರಿ ಹಲವು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳು ದಾಂಗುಡಿ ಇಟ್ಟರು.

‘ನನ್ನ ತರಲೇ, ತುಂಟಾಟ ನೋಡಿ ಶಾಲೆ ಯಾವಾಗ ಆರಂಭ ಆಗುತ್ತದೆ ಎಂದು ಪೋಷಕರು ಕಾಯುತ್ತಿದ್ದರು. ಕೊನೆಗೂ ಶಾಲೆ ಆರಂಭವಾಗಿದೆ. ಸ್ನೇಹಿತರನ್ನು ಭೇಟಿಯಾಗುವ ಅವಕಾಶ ನನಗೂ ದೊರೆತಿದೆ. ನರ್ಸರಿಗೆ ಸೇರಿದಾಗಲೂ ಶಾಲೆಗೆ ಬರಲು ಅಳಲಿಲ್ಲ. ಈಗಲೂ ಸಂತೋಷದಿಂದಲೇ ಹೋಗುತ್ತೇನೆ’ ಎಂದು ಖಾಸಗಿ ಶಾಲೆಯೊಂದರ ಯುಕೆಜಿ ವಿದ್ಯಾರ್ಥಿನಿ ಯಶಸ್ವಿನಿ ನಗುಮೊಗದಿಂದಲೇ ಹೇಳಿದಳು.

‘ಇಷ್ಟು ದಿನ ಮನೆಯಲ್ಲಿ ಆಟವಾಡಿ ಬೇಸರ ಉಂಟಾಗಿತ್ತು. ಕೋವಿಡ್‌ ಹೆಸರು ಹೇಳುತ್ತಲೇ ಹೊರಗೆ ಹೋಗಲು ಅಜ್ಜ–ಅಜ್ಜಿ, ತಂದೆ–ತಾಯಿ ಬಿಡಲಿಲ್ಲ. ಶಾಲೆ ಆರಂಭದ ಕಾರಣಕ್ಕೆ ಹೊರಗಡೆ ಬಿಡಲು ಮನಸ್ಸು ಮಾಡಿದ್ದಾರೆ. ಇದರಿಂದ ಶಾಲೆಗೆ ಬರಲು ತುಂಬಾ ಸಂತಸ ಉಂಟಾಗಿದೆ. ಇಲ್ಲಿ ಆಟವಾಡಲು ಅನೇಕ ಸಾಮಗ್ರಿಗಳು ಸಿಗುತ್ತವೆ. ಸ್ನೇಹಿತರ ಜತೆ ಅಆಇಈ, ಎಬಿಸಿಡಿ ಕಲಿಯಬಹುದು’ ಎಂದು ಪುಟಾಣಿ ದರ್ಶಿತ್ ಹೇಳಿದ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್ ಚಿತ್ರದುರ್ಗದ ಕಂದಾಯ ನಗರ, ಗಿರಿ ನಗರ, ವಿಜಾಪುರ, ಸೀಬಾರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ‘ಕೇಂದ್ರಗಳು ಆರಂಭ ಆಗಿರುವುದು ಸಂತಸದ ವಿಚಾರ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದರು.

‘ಮಕ್ಕಳ ಸಂತೋಷ, ಸಂಭ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಲವಲವಿಕೆ ಇಲ್ಲದೆ, ಕುಗ್ಗಿದ್ದ ಚಿಣ್ಣರಲ್ಲಿ ಉತ್ಸಾಹ ಹೆಚ್ಚಾಗಿದೆ. ಮನೆಯಲ್ಲಿ ಏನೇ ಕಲಿಸಿದರೂ ಶಾಲೆಗಳಲ್ಲಿ ಕಲಿತಾಗ ಮಾತ್ರ ಅದು ಮೆದುಳಿಗೆ ಹೋಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT