ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಪರಿಹಾರ ವಿತರಣೆಗೆ ₹ 6 ಲಕ್ಷ ಲಂಚ ಪಡೆದ ಆರೋಪ

ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ಭೂಸ್ವಾಧೀನಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹಿರಿಯೂರು ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 150ಕ್ಕೆ ಭೂಮಿ ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡಲು ಆರು ಲಕ್ಷ ಲಂಚ ಪಡೆದ ಭೂಸ್ವಾಧೀನಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ವಿಶೇಷ ಭೂಸ್ವಾಧೀನಾಧಿಕಾರಿ ವೀರೇಶಕುಮಾರ್‌, ಕಚೇರಿಯ ವ್ಯವಸ್ಥಾಪಕ ಎಂ.ಬಿ.ಮೋಹನ್‌ ಹಾಗೂ ಕಾರು ಚಾಲಕ ಮನ್ಸೂರ್‌ ಬಂಧಿತರು. ಲಂಚದ ರೂಪದಲ್ಲಿ ಪಡೆದ ಆರು ಲಕ್ಷವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಿರಿಯೂರು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 150ರ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಎಚ್‌.ಕೆ.ನೇತ್ರಾ ಎಂಬುವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಮಿಗೆ ಪರಿಹಾರ ಮಂಜೂರು ಮಾಡುವ ಪ್ರಕ್ರಿಯೆ ಹಲವು ದಿನಗಳಿಂದ ಬಾಕಿ ಇದೆ. ಹೀಗಾಗಿ, ನೇತ್ರಾ ಅವರು ಆಗಸ್ಟ್‌ ತಿಂಗಳಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿದ್ದರು. ಕಚೇರಿಯ ವ್ಯವಸ್ಥಾಪಕರ ಬಳಿ ವ್ಯವಹರಿಸುವಂತೆ ಭೂಸ್ವಾಧೀನಾಧಿಕಾರಿ ಸೂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೋಹನ್‌ ಅವರನ್ನು ಭೇಟಿಯಾದ ಮಹಿಳೆ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಾರೆ. ಕೆಲ ದಿನ ಬಿಟ್ಟು ಬರುವಂತೆ ಸೂಚಿಸಿ ಸಾಗಹಾಕಿದ್ದಾರೆ. ಸೆ.13ರಂದು ವಿಶೇಷ ಭೂಸ್ವಾಧೀನಾಧಿಕಾರಿಯ ಕಾರು ಚಾಲಕ ಮನ್ಸೂರ್‌ ಮಹಿಳೆಯ ಮನೆಗೆ ಭೇಟಿ ನೀಡಿದ್ದಾರೆ. ₹ 6 ಲಕ್ಷ ಲಂಚ ನೀಡಿದರೆ ಪರಿಹಾರ ಮೊತ್ತದ ಚೆಕ್‌ ಎರಡು ದಿನಗಳಲ್ಲಿ ನೀಡುವುದಾಗಿ ಅಧಿಕಾರಿ ಒಪ್ಪಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ನೇತ್ರಾ ಅವರು ಎಸಿಬಿಗೆ ದೂರು ನೀಡಿದ್ದರು.

ಸೆ.14ರಂದು ರಾತ್ರಿ ಮಹಿಳೆಯ ಮನೆಗೆ ಭೇಟಿ ನೀಡಿದ ಮನ್ಸೂರ್‌, ಆರು ಲಕ್ಷ ಲಂಚ ಪಡೆದು ಕಚೇರಿ ವ್ಯವಸ್ಥಾಪಕರಿಗೆ ತಲುಪಿಸಿದ್ದಾರೆ. ಈ ಬಗ್ಗೆ ವಿಶೇಷ ಭೂಸ್ವಾಧೀನಾಧಿಕಾರಿಗೂ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಡಿವೈಎಸ್‌ಪಿ ಬಸವರಾಜ್‌ ಆರ್‌.ಮುಗದುಮ್‌ ನೇತೃತ್ವದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು