ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಡಿಕ್ಕಿ ಹೊಡೆದು ಪಿಯು ವಿದ್ಯಾರ್ಥಿನಿ ಸಾವು

ಪೊಲೀಸರ ಮೇಲೆ ಮುಗಿಬಿದ್ದ ಜನ: ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ
Published 16 ಜನವರಿ 2024, 14:27 IST
Last Updated 16 ಜನವರಿ 2024, 14:27 IST
ಅಕ್ಷರ ಗಾತ್ರ

ಸಿರಿಗೆರೆ: ಇಲ್ಲಿಗೆ ಸಮೀಪದ ವಿಜಾಪುರ ಗೊಲ್ಲರಹಟ್ಟಿಯ ರಾಷ್ಟ್ರೀಯ ಹೆದ್ದಾರಿ –48ರಲ್ಲಿ ಮಂಗಳವಾರ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದು, ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಹಿರೆಕಂದವಾಡಿ ಗ್ರಾಮದ ಸುಚಿತ್ರಾ (18) ಮೃತಪಟ್ಟ ವಿದ್ಯಾರ್ಥಿನಿ. ಐಟಿಐ ಓದುತ್ತಿರುವ ಮತ್ತೊಬ್ಬ ಯುವಕ ಎಂ.ಆದಿತ್ಯ ಅಪಘಾತದಲ್ಲಿ ಗಾಯಗೊಂಡಿದ್ದು, ಚಿತ್ರದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇಬ್ಬರೂ ಚಿತ್ರದುರ್ಗ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೆಳಿಗ್ಗೆ ಬಸ್‌ಗಾಗಿ ಕಾಯುತ್ತಿದ್ದಾಗ ರಸ್ತೆಯಲ್ಲಿ ಬಂದ ಬಸ್‌ಗೆ ಕೈ ಮಾಡಿದ್ದಾರೆ. ಅದು ನಿಲ್ಲಿಸದೇ ಹೋಗಿದೆ. ಹಿಂದಿನಿಂದ ಬಂದ ಲಾರಿಯೊಂದು ಯುವತಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ಆರಂಭಿಸಿದರು.

ಒಂದು ಗಂಟೆಗೂ ಹೆಚ್ಚು ಕಾಲ ವಾಹನ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಚಿತ್ರದುರ್ಗ ಹಾಗೂ ದಾವಣಗೆರೆ ನಡುವೆ ಸಂಚರಿಸುವ ವಾಹನಗಳು ಹೆದ್ದಾರಿಯ ಎರಡು ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ಭರಮಸಾಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಆಗ ಸಾರ್ವಜನಿಕರು ಪೊಲೀಸರ ಮೇಲೆ ಮುಗಿಬಿದ್ದರು.

ಸರ್ವಿಸ್ ರಸ್ತೆಗೆ ಬರದ ಬಸ್‌ಗಳು: ಹೆದ್ದಾರಿಯಲ್ಲಿ ಸಾಗುವ ಬಸ್‌ಗಳು ಗ್ರಾಮದ ಜನರಿಗೆ ಸೇವೆ ಒದಗಿಸುತ್ತಿಲ್ಲ. ಚಿತ್ರದುರ್ಗ ಮತ್ತು ದಾವಣಗೆರೆ ಮಧ್ಯೆ ಸಂಚರಿಸುವ ಬಸ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ‌ ಸಂಸ್ಥೆ (ಕೆಎಸ್ಆರ್ ಟಿಸಿ) ಬಸ್ ಕೂಡ ಸರ್ವಿಸ್ ರಸ್ತೆಗೆ ಬರುತ್ತಿಲ್ಲ. ಹೆದ್ದಾರಿಯಲ್ಲಿ ಚಲಿಸುವ ಬಹುತೇಕ ಬಸ್‌ಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಿಲ್ಲಿಸುವುದೇ ಇಲ್ಲ. ಶಾಲೆ– ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಬಸ್‌ಗೆ ಕಾಯುವ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಹಲವು ಬಾರಿ ಅಪಘಾತಗಳು ಸಂಭವಿಸಿವೆ.‌ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ತಹಶೀಲ್ದಾರ್‌ ನಾಗವೇಣಿ, ರಾಜ್ಯ ಸಾರಿಗೆ ಸಂಸ್ಥೆ ಡಿಪೋ ವ್ಯವಸ್ಥಾಪಕ ಹುಸೇನ್‌, ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ, ಅಬ್ದುಲ್‌ ಖಾದರ್‌, ಡಿವೈಎಸ್‌ಪಿ ಅನಿಲ್‌ ಕುಮಾರ್‌, ಭರಮಸಾಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮೇಶ್‌ ರಾವ್‌ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದರು.

ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯತ್ಯಯ
ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯತ್ಯಯ
ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯತ್ಯಯ
ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯತ್ಯಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT