ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ಬೆಲೆ ಕುಸಿತ: ಕೊತ್ತಂಬರಿ ಬೆಳೆ ನಾಶ

Published 29 ಜನವರಿ 2024, 7:15 IST
Last Updated 29 ಜನವರಿ 2024, 7:15 IST
ಅಕ್ಷರ ಗಾತ್ರ

ಚಳ್ಳಕೆರೆ: ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿದಿರುವ ಕಾರಣ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಸುತ್ತಮುತ್ತ ನೀರಾವರಿ ಪ್ರದೇಶದಲ್ಲಿ ಬೆಳೆದ ಕೊತ್ತಂಬರಿ ಬೆಳೆಯನ್ನು ರೈತರು ಟ್ಯಾಕ್ಟರ್ ಮೂಲಕ ನಾಶಪಡಿಸುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಮಳೆ ಸಮರ್ಪಕವಾಗಿ ಸುರಿಯದ‌್ದರಿಂದ ಅಂತರ್ಜಲ ಕಡಿಮೆಯಾಗಿ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಜೀವನ ಸಾಗಿಸಲು ಇರುವ ಅತ್ಯಲ್ಪ ನೀರಿನಲ್ಲೇ ಟೊಮೆಟೊ, ಬದನೆ, ಬೆಂಡೆ, ಹೀರೇಕಾಯಿ ಸೇರಿದಂತೆ ತರಕಾರಿ ಬೆಳೆ ಜತೆಗೆ ಕೊತ್ತಂಬರಿ, ಮೆಂತ್ಯೆ ಸೊಪ್ಪು ಬೆಳೆದಿದ್ದ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಪ್ರತಿ ಸಿವುಡು (ಒಂದು ಕಟ್ಟು) 50 ಪೈಸೆ ಇದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಬೀಜ, ಗೊಬ್ಬರ ಹಾಗೂ ಕೂಲಿ ಸೇರಿ ಒಂದು ಎಕರೆಯಲ್ಲಿ ಕೊತ್ತಂಬರಿ ಬೆಳೆಯಲು ಕನಿಷ್ಠ ₹ 15,000 ವೆಚ್ಚವಾಗುತ್ತದೆ.

‘ಎಕರೆಗೆ 20,000 ಸಿವುಡು ಕೊತ್ತಂಬರಿ ಸೊಪ್ಪು ದೊರೆಯುತ್ತದೆ. ಕಟ್ಟಿಗೆ ₹ 2ರಿಂದ ₹ 3 ಸಿಕ್ಕರೆ ನಷ್ಟವಾಗುವುದಿಲ್ಲ. ಆದರೆ 50 ಪೈಸೆಗೆ ಕೇಳುತ್ತಿರುವುದರಿಂದ ನಷ್ಟವಾಗುತ್ತಿದೆ. ನಮ್ಮ ಬಳಿ 50 ಪೈಸೆಗೆ ಖರೀದಿ ಮಾಡುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ ₹ 5ಕ್ಕೆ ಮಾರಾಟ ಮಾಡುತ್ತಾರೆ. ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಸಿಗುತ್ತಿಲ್ಲ. ಇದರಿಂದಾಗಿ ಸೊಪ್ಪು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ’ ಎಂದು ರೈತ ಓಬಳೇಶ್‍ ರೆಡ್ಡಿ ಅಳಲು ತೋಡಿಕೊಂಡರು.

ರೈತರಾದ ಪ್ರಸನ್ನ, ಸುದರ್ಶನರೆಡ್ಡಿ ಒಂದು ಎಕರೆಯಲ್ಲಿ, ಓಬಳೇಶ್‍ ರೆಡ್ಡಿ ಎರಡು ಎಕರೆ, ಪ್ರಶಾಂತ ರೆಡ್ಡಿ ಒಂದೂವರೆ ಎಕರೆ, ಗೋವಿಂದಪ್ಪ ಎರಡು ಎಕರೆಯಲ್ಲಿ ಬೆಳೆದ ‌ಕೊತ್ತಂಬರಿ ಸೊಪ್ಪಿನ ಬೆಳೆಯನ್ನು ನಾಶಪಡಿಸಿದ್ದಾರೆ.

‘ಸೊಪ್ಪಿನ ಬೆಳೆಯಾದರೆ 20 ದಿನಗಳಲ್ಲಿ ಕೈಗೆಟುಕುತ್ತದೆ. ಉತ್ತಮ ಬೆಲೆ ಸಿಕ್ಕರೆ ಲಾಭ. ಇಲ್ಲದಿದ್ದರೆ ಹವೀಜ (ಕೊತ್ತಂಬರಿ ಕಾಳು) ಬರುವ ತನಕ ಕಾಯಬೇಕು. ಆಗಲೂ ಉತ್ತಮ ಬೆಲೆ ಸಿಗದಿದ್ದರೆ ನಷ್ಟದ ಪ್ರಮಾಣ ಇನ್ನೂ ಹೆಚ್ಚು ಎಂಬ ಕಾರಣಕ್ಕೆ ಬಹುತೇಕ ರೈತರು ಸೊಪ್ಪನ್ನು ಮಾತ್ರ ಬೆಳೆದು ಕಟಾವು ಮಾಡುತ್ತಾರೆ’ ಎಂದು ಓಬಳೇಶ್‌ ರೆಡ್ಡಿ ಹೇಳಿದರು.

ರಾಮಜೋಗಿಹಳ್ಳಿ, ಗಂಜಿಗುಂಟೆ, ಚಿಕ್ಕಮದುರೆ, ಕುರುಡಿಹಳ್ಳಿ, ಸೋಮಗುದ್ದು, ಬಾಲೇನಹಳ್ಳಿ ಸೇರಿದಂತೆ ತಾಲ್ಲೂಕಿನ ಕಪ್ಪುಮಣ್ಣಿನ ಭೂಮಿಯಲ್ಲಿ ಕೊತ್ತಂಬರಿ ಬೆಳೆಯಲಾಗಿದೆ. ನಷ್ಟ ಅನುಭವಿಸಿದ ಸೊಪ್ಪಿನ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ತಾಲ್ಲೂಕು ರೈತ ಮುಖಂಡ ಓ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.

‘ಈ ಭಾಗದಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಹೊರತುಪಡಿಸಿ ಇನ್ನುಳಿದ ತಿಂಗಳಲ್ಲಿ ಕೊತ್ತಂಬರಿ ಸೊಪ್ಪಿಗೆ ಬೇಡಿಕೆ ಇರುವುದಿಲ್ಲ. ರೈತರು ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಎಕರೆಗಟ್ಟಲೇ ಸೊಪ್ಪಿನ ಬೆಳೆ ಬೆಳೆಯುವ ಬದಲಿಗೆ ಮಾರುಕಟ್ಟೆ ಬೆಲೆ ಅನುಸರಿಸಿ ಒಂದು ಗುಂಟೆ, ಎರಡು ಗುಂಟೆ ಹೀಗೆ ಹತ್ತು ಗುಂಟೆಯೊಳಗೆ ಹಂತ ಹಂತವಾಗಿ ಸೊಪ್ಪಿನ ಬೆಳೆ ಬೆಳೆಯುವ ವಿಧಾನ ಕಂಡುಕೊಳ್ಳಬೇಕು’ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಸಲಹೆ ನೀಡಿದ್ದಾರೆ.

ಬೆಲೆ ಕುಸಿತದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ರೈತ ಓಬಳೇಶ್ ರೆಡ್ಡಿ ತಮ್ಮ ಹೊಲದಲ್ಲಿ ಬೆಳೆದ ಕೊತ್ತಂಬರಿ ಸೊಪ್ಪು ನಾಶಪಡಿಸುತ್ತಿರುವುದು
ಬೆಲೆ ಕುಸಿತದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ರೈತ ಓಬಳೇಶ್ ರೆಡ್ಡಿ ತಮ್ಮ ಹೊಲದಲ್ಲಿ ಬೆಳೆದ ಕೊತ್ತಂಬರಿ ಸೊಪ್ಪು ನಾಶಪಡಿಸುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT