ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ‘ಅಕ್ಕತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ’ಕ್ಕೆ ಕ್ಷಣಗಣನೆ

ನೂಕುನುಗ್ಗಲು ಆಗದಂತೆ ಕ್ರಮ, ನಗರಸಭೆಯಿಂದ ಸ್ವಚ್ಛತಾ ಕಾರ್ಯ
Published : 6 ಮೇ 2024, 14:17 IST
Last Updated : 6 ಮೇ 2024, 14:17 IST
ಫಾಲೋ ಮಾಡಿ
Comments

ಚಿತ್ರದುರ್ಗ: ಕೋಟೆನಾಡಿನ ಶಕ್ತಿ ದೇವತೆಗಳಾದ ಬರಗೇರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮನ ‘ಅಕ್ಕತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ಸವದ ಅಂಗವಾಗಿ ಸೋಮವಾರ ರಾಜಬೀದಿ ದೊಡ್ಡಪೇಟೆಯಲ್ಲಿ ಸಿದ್ಧತೆ ಭರದಿಂದ ನಡೆಯಿತು.

ಅಕ್ಕ ಬರಗೇರಮ್ಮ, ತಂಗಿ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಭೇಟಿಯಾಗುತ್ತಾರೆ. ಭೇಟಿ ಹಿನ್ನೆಲೆಯಲ್ಲಿ ನೂಕುನುಗ್ಗಲು ಆಗದಂತೆ ಎಚ್ಚರವಹಿಸಲಾಗಿದೆ. ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಕಾರಣ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

ದೊಡ್ಡಪೇಟೆಯ ಬಸವಣ್ಣ ದೇವರ ಗುಡಿ ಮುಂಭಾಗದಿಂದ ಹಳೆಯ ಮೈಸೂರು ಕೆಫೆ ಹೋಟೆಲ್‌ನ ರಸ್ತೆ ಮಾರ್ಗದುದ್ದಕ್ಕೂ ಎರಡೂ ಬದಿಯ ಪಕ್ಕದಲ್ಲಿ ಮುಂಚಿತವಾಗಿಯೇ ಕಂಬಗಳನ್ನು ಹಾಕಲಾಗಿದೆ. ಭೇಟಿ ಉತ್ಸವ ಸಮಿತಿಯಿಂದ ಉತ್ಸವಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಜತೆಗೆ ಪ್ರತಿ ವರ್ಷದಂತೆ ನಗರಸಭೆಯಿಂದ ಸ್ವಚ್ಛತಾ ಕಾರ್ಯ, ನೀರಿನ ಸೌಕರ್ಯ, ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.

ಮಹೋತ್ಸವ ನಡೆಯುವ ಸ್ಥಳದಲ್ಲಿ ಆಕರ್ಷಕ ಅಲಂಕಾರವೂ ಮೇ 7ರಂದು ನಡೆಯಲಿದೆ. ಅಕ್ಕತಂಗಿಯರು ಭೇಟಿಯಾಗುವ ಸ್ಥಳದಲ್ಲಿ ‘ಓಂ’ ಚಿಹ್ನೆ ಆಕಾರದಲ್ಲಿ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗುತ್ತದೆ. ಉತ್ಸವವನ್ನು ಕಣ್ತುಂಬಿಕೊಳ್ಳಲು ಸಂಜೆ 6ರಿಂದಲೇ ದೊಡ್ಡಪೇಟೆಗೆ ಭಕ್ತರು ಬರಲಿದ್ದಾರೆ.

ಟ್ರಾಫಿಕ್ ಸಮಸ್ಯೆ ಉಂಟಾಗುವುದನ್ನು ತಡೆಯಲು ವಾಹನಗಳು ಈ ಮಾರ್ಗವಾಗಿ ಸಂಚರಿಸದಂತೆ ರಂಗಯ್ಯನ ಬಾಗಿಲು ಸಮೀಪವಿರುವ ಗಣಪತಿ ದೇಗುಲದ ಮುಂಭಾಗದಿಂದ, ಮತ್ತೊಂದೆಡೆ ಉಯ್ಯಾಲೆ ಕಂಬದಿಂದ ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತದೆ. ರಾತ್ರಿ 8.30ರಿಂದ 9.30ರ ಒಳಗೆ ಭೇಟಿ ನಡೆಯಲಿದೆ.

ಬರಗೇರಮ್ಮ ದೇವತೆಗೆ ಸೋಮವಾರ ವಿಶೇಷ ‘ಭಂಡಾರದ ಪೂಜೆ’ ನೆರವೇರಿತು. ರಾತ್ರಿ 8ಕ್ಕೆ ಓಕಳಿ ಸೇವೆ ಜರುಗಿತು. ಬುರುಜನಹಟ್ಟಿ ಪ್ರವೇಶದ ನಂತರ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ ಹಾಗೂ ತಿಪ್ಪಿನಘಟ್ಟಮ್ಮ ದೇವಿಗೆ ಕೆಳಗೋಟೆ, ಬಾರ್‌ಲೈನ್ ರಸ್ತೆ ಸೇರಿ ವಿವಿಧೆಡೆ ಭಕ್ತರಿಂದ ಮಹಾಮಂಗಳಾರತಿ ಪೂಜೆ ಸ್ವೀಕಾರ ನೆರವೇರಿದವು.

ಭೇಟಿ ಉತ್ಸವದ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬರಗೇರಮ್ಮ ದೇವತೆಗೆ ಚಿಕ್ಕಪೇಟೆ, ಐಯ್ಯಣ್ಣನಪೇಟೆ, ದೊಡ್ಡಪೇಟೆ, ಉತ್ಸವಾಂಬ ದೇಗುಲದ ಅಕ್ಕಪಕ್ಕ, ಕರುವಿನಕಟ್ಟೆ ವೃತ್ತ, ಬುರುಜನಹಟ್ಟಿ ರಸ್ತೆಯಲ್ಲಿನ ಭಕ್ತರ ಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ತಿಪ್ಪಿನಘಟ್ಟಮ್ಮ ದೇವತೆಗೆ ಸಹ ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಭಕ್ತರ ಮನೆಗಳಲ್ಲಿ ಪೂಜೆ ನೆರವೇರಲಿದೆ. ಕ್ಯಾತಲಿಂಗೇಶ್ವರ ಸ್ವಾಮಿ ದೇಗುಲಕ್ಕೆ ಆಗಮಿಸಿ ಅಲಂಕಾರಗೊಂಡು ಮಹಾಮಂಗಳಾರತಿ ನಂತರ ಐತಿಹಾಸಿಕ ಭೇಟಿಗೆ ಆಗಮಿಸಲಿದೆ.

ಬರಗೇರಮ್ಮ
ಬರಗೇರಮ್ಮ
ತಿಪ್ಪಿನಘಟ್ಟಮ್ಮ
ತಿಪ್ಪಿನಘಟ್ಟಮ್ಮ

ಅಕ್ಕ–ತಂಗಿ ಭೇಟಿ ಹಿನ್ನೆಲೆ

ಅಕ್ಕ ತಂಗಿಯರಾದ ಬರಗೇರಮ್ಮ ತಿಪ್ಪಿನಘಟ್ಟಮ್ಮ ದೇವತೆಯ ಭೇಟಿ ಉತ್ಸವದ ಹಿಂದೆ ಐತಿಹಾಸಿಕ ಕಥೆಯಿದೆ. ನವದುರ್ಗೆಯರಾದ ಏಕನಾಥೇಶ್ವರಿ ಉಚ್ಚಂಗಿ ಯಲ್ಲಮ್ಮ ಬರಗೇರಮ್ಮ ತಿಪ್ಪಿನಘಟ್ಟಮ್ಮ ಕಣಿವೆಮಾರಮ್ಮ ಚೌಡಮ್ಮ ಗೌರಸಂದ್ರ ಮಾರಮ್ಮ ಕುಕ್ಕವಾಡೇಶ್ವರಿ ಕಾಳಿ ದೇವತೆ ದುರ್ಗದ ರಕ್ಷಕ ದೇವತೆಗಳು ಎನ್ನುವ ಪ್ರತೀತಿ ಇದೆ.

ನವದುರ್ಗೆಯರಲ್ಲಿ ತಿಪ್ಪಿನಘಟ್ಟಮ್ಮ ದೇವತೆಗೆ ಏಳು ಜನ ಮಕ್ಕಳು. ಈಕೆಯ ಪ್ರೀತಿ ಪಾತ್ರಳಾದ ಅಕ್ಕ ಬರಗೇರಮ್ಮ ದೇವಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಂಗಿಯ ಮಕ್ಕಳ ಮೇಲೆ ಅಪಾರ ಮಮತೆ ಪ್ರೀತಿ ವಾತ್ಸಲ್ಯವಿತ್ತು. ವಾರಕ್ಕೊಮ್ಮೆ ತಂಗಿ ಮನೆಗೆ ಬಂದು ಮಕ್ಕಳನ್ನು ಕಂಡು ಅವರ ಜತೆ ಆಟವಾಡುತ್ತಾ ಕಾಲ ಕಳೆದು ಹಿಂತಿರುಗುತ್ತಿದ್ದಳು. ಈ ಇಬ್ಬರ ಮಮತೆ ಪ್ರೀತಿಯನ್ನು ಕಂಡು ಅಸೂಯೆ ಪಟ್ಟ ನವ ದುರ್ಗೆಯರಲ್ಲೊಬ್ಬಳು ತಿಪ್ಪಿನಘಟ್ಟಮ್ಮನಿಗೆ ‘ಬರಗೇರಮ್ಮ ಬಂಜೆ ಆಕೆ ಬಂದು ನಿನ್ನ ಮಕ್ಕಳನ್ನು ಮುಟ್ಟಿದರೆ ಒಳ್ಳೆಯದಾಗುವುದಿಲ್ಲ’ ಎಂದು ಚಾಡಿ ಹೇಳುತ್ತಾಳೆ. ಇದರಿಂದ ಹೆದರಿದ ತಿಪ್ಪಿನಘಟ್ಟಮ್ಮ ತನ್ನ ಅಕ್ಕ ಮನೆಗೆ ಬಂದಾಗ ಆಕೆಯ ದೃಷ್ಟಿಗೆ ಬೀಳಬಾರದೆಂದು ತನ್ನ ಮಕ್ಕಳನ್ನು ಬಚ್ಚಿಡುತ್ತಾಳೆ. ಇದರಿಂದ ಕೋಪಗೊಂಡ ಅಕ್ಕ ಬರಗೇರಮ್ಮ ಸಿಟ್ಟಿನಲ್ಲಿ ‘ನಿನ್ನ ಮಕ್ಕಳು ಕಲ್ಲಾಗಲಿ’. ಇನ್ನೆಂದು ನಿನ್ನ ಮುಖ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಿಂತಿರುಗುತ್ತಾಳೆ. ಆಗ ಏಕನಾಥೇಶ್ವರಿ ಊರಿನ ಒಳಿತಿಗಾಗಿ ವರ್ಷಕ್ಕೊಮ್ಮೆ ತನ್ನ ಸಮ್ಮುಖದಲ್ಲಿ ನೀವಿಬ್ಬರು ಭೇಟಿಯಾಗಬೇಕೆಂದು ಆದೇಶಿಸುತ್ತಾಳೆ.

ಹಿರಿಯಕ್ಕನ ಆದೇಶದಂತೆ ಪ್ರತಿ ವರ್ಷ ಅಕ್ಕ ತಂಗಿಯರು ರಾಜಬೀದಿಯಲ್ಲಿ ಭೇಟಿಯಾಗುತ್ತಾರೆ. ಭೇಟಿಯಾಗುವ ಕ್ಷಣವನ್ನು ಬೆಟ್ಟದ ತುದಿಯಲ್ಲಿ ನಿಂತು ಏಕನಾಥೇಶ್ವರಿ ದೇವಿ ವೀಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ.

ಸಾವು ತಂದ ಸೌಭಾಗ್ಯ ನಾಟಕ

ಭೇಟಿ ಉತ್ಸವದ ಪ್ರಯುಕ್ತ ನವತರುಣ ಕಲಾ ಸಂಘ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ 7 ರಂದು ಎಚ್‌.ಕೆ .ಮಲ್ಲಿಕಾರ್ಜುನ ತುರ್ಚಘಟ್ಟ ವಿರಚಿತ ಸಾವು ತಂದ ಸೌಭಾಗ್ಯ ಅರ್ಥಾತ್‌ ಅರಿಶಿನ ತಂದ ಆಮಂತ್ರಣ ಸಾಮಾಜಿಕ ಹಾಸ್ಯಭರಿತ ನಾಟಕ ಪ್ರದರ್ಶಿಸಲಿದೆ. ನಗರದ ಕರುವಿನಕಟ್ಟೆ ವೃತ್ತದಲ್ಲಿ ರಾತ್ರಿ 9.30ಕ್ಕೆ ನಾಟಕ ಪ್ರಾರಂಭವಾಗಲಿದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT