ಗುರುವಾರ , ಮೇ 6, 2021
22 °C
ಸಂವಿಧಾನಶಿಲ್ಪಿ ಸ್ಮರಿಸಿದ ಕೋಟೆನಾಡಿನ ಜನರು, ಜಿಲ್ಲೆಯ ಹಲವೆಡೆ ಕಾರ್ಯಕ್ರಮ

ಅಂಬೇಡ್ಕರ್‌ ದಾರಿಯಲ್ಲಿ ಸಾಗುವ ಶಪಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 130ನೇ ಜನ್ಮ ದಿನಾಚರಣೆಯನ್ನು ಜಿಲ್ಲೆಯ ಹಲವೆಡೆ ಅಭಿಮಾನದಿಂದ ಆಚರಿಸಲಾಯಿತು. ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ನಡೆದ ಸ್ಮರಣೆ ಹಬ್ಬದ ವಾತಾವರಣ ಇನ್ನಷ್ಟು ಕಳೆಗಟ್ಟುವಂತೆ ಮಾಡಿತು.

ನಗರದ ಅಂಬೇಡ್ಕರ್‌ ಪ್ರತಿಮೆ ತರಹೇವಾರಿ ಪುಷ್ಪದ ಹಾರಗಳಿಂದ ಕಂಗೊಳಿಸಿತು. ನೀಲಿ ಬಣ್ಣದ ಬಂಟಿಂಗ್ಸ್‌ಗಳು ಎಲ್ಲೆಡೆ ರಾರಾಜಿಸಿದವು. ಹಲವು ಸಂಘ, ಸಂಸ್ಥೆಗಳು ಅಂಬೇಡ್ಕರ್‌ ಜಯಂತಿಯನ್ನು ಆಚರಿಸಿ ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಮಾಡಿದವು. ಸಾಮಾಜಿಕ ಜಾಲತಾಣದಲ್ಲಿಯೂ ಅಂಬೇಡ್ಕರ್ ಸ್ಮರಣೆ ಜೋರಾಗಿ ನಡೆಯಿತು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಜಿಲ್ಲಾಡಳಿತದ ಪರವಾಗಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಸಾಥ್‌ ನೀಡಿದರು. ಅಂಬೇಡ್ಕರ್‌ ವೃತ್ತದಲ್ಲಿ ಇಡೀ ದಿನ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜಕಲ್ಯಾಣ ಇಲಾಖೆ ಸರಳವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ‘ಮುಂದುವರಿದ ರಾಷ್ಟ್ರಗಳು ಅಂಬೇಡ್ಕರ್‌ ಅವರ ಜ್ಞಾನದ ದಾರಿಯನ್ನು ತುಳಿಯುತ್ತಿವೆ. ಶೋಷಿತ ಸಮುದಾಯದಲ್ಲಿ ಬೆಳೆದ ಅಂಬೇಡ್ಕರ್ ಸಾಧನೆ ವಿಶ್ವಕ್ಕೆ ಮಾದರಿಯಾಗಿದೆ. ಅವರು ರೂಪಿಸಿದ ಸಂವಿಧಾನ ಬದುಕುವ ದಾರಿ ತೋರಿದೆ’ ಎಂದು ಕೊಂಡಾಡಿದರು.

‘ಅಂಬೇಡ್ಕರ್‌ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಪರಿಶ್ರಮದ ಫಲವಾಗಿ ಅಸ್ಪೃಶ್ಯತೆಯನ್ನು ನಿಷೇಧ ಮಾಡಲಾಗಿದೆ. ಇದನ್ನು ಪಾಲನೆ ಮಾಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಪದ್ಧತಿ ಕಂಡುಬಂದರೆ ಮಾಹಿತಿ ನೀಡಿ’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ‘ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಸಂವಿಧಾನವನ್ನು ಅಂಬೇಡ್ಕರ್‌ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗುವ ಅಗತ್ಯವಿದೆ. ಅವರ ತತ್ವ, ಸಿದ್ಧಾಂತಗಳನ್ನು ಪಾಲನೆ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಅವರು ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಎಲ್ಲರಿಗೂ ಸಮಾನವಾದ ಮತದಾನದ ಹಕ್ಕು ಪ್ರತಿಪಾದಿಸಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಶ್ರಮಿಸಿದ್ದಾರೆ. ಹಲವು ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಬಳ್ಳಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ವೇದಾಂತ ಎಂ.ಯಾಲಂಜಿ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌.ನರಸಿಂಹರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿ.ಪ್ರಸನ್ನ ಇದ್ದರು. ಗಂಗಾಧರ್ ಮತ್ತು ಹೇಮಂತ್ ಅವರು ಅಂಬೇಡ್ಕರ್ ಕುರಿತು ಹಾಡು ಹೇಳಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿಯನ್ನು ಆಚರಿಸಲಾಯಿತು. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್‌ ಮುಖಂಡರು ಅವರ ಕೊಡುಗೆಗಳನ್ನು ಕೊಂಡಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರಾದ ನಜ್ಮಾ ತಾಜ್, ಬ್ಲಾಕ್ ಅಧ್ಯಕ್ಷ ಅಲ್ಲಾ ಭಕ್ಷ, ಆರ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್ ಇದ್ದರು.

‘ಅಂಬೇಡ್ಕರ್‌ ಬಹುಮುಖಿ ಪ್ರತಿಭೆ’

ಅಂಬೇಡ್ಕರ ಅವರನ್ನು ಸಂವಿಧಾನ ತಜ್ಞ, ಕಾನೂನು ತಜ್ಞ ಎಂದಷ್ಟೇ ಬಿಂಬಿಸುತ್ತಿರುವುದು ವಿಷಾದನೀಯ. ಅವರು ಬಹುಮುಖಿ ಪ್ರತಿಭೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭೋವಿಗುರುಪೀಠದಲ್ಲಿ ಏರ್ಪಡಿಸಿದ್ದ ಜಯಂತಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ನದಿಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ನೀರಾವರಿ ಯೋಜನೆಗಳ ಬಗ್ಗೆ ತಿಳಿವಳಿಕೆ ಇಟ್ಟುಕೊಂಡಿದ್ದರು. ಜಲಮೂಲ ಸಂರಕ್ಷಣೆಯ ಕುರಿತು ಕಾಳಜಿ ಹೊಂದಿದ್ದರು. ದೇಶದ ಪ್ರಪ್ರಥಮ ನೀರಾವರಿ ನೀತಿಯನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಇದ್ದರು.

‘ಸಮಸ್ತ ಶೋಷಿತರ ಧ್ವನಿ’

ಡಾ.ಬಿ.ಆರ್‌.ಅಂಬೇಡ್ಕರ್ ಅವರು ದೇಶದ ಸಮಸ್ತ ಶೋಷಿತ ಸಮುದಾಯದ ಧ್ವನಿಯಾಗಿದ್ದರು. ಅವರನ್ನು ಪಡೆದಿದ್ದು ದೇಶದ ಸೌಭಾಗ್ಯ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್‌ ಜಯಂತಿಯಲ್ಲಿ ಅವರು ಮಾತನಾಡಿದರು. ‘ಅಂಬೇಡ್ಕರ್‌ ಜನಿಸದೇ ಇದ್ದಿದ್ದರೆ ದೇಶದ ಬಹುಪಾಲು ಜನರ ಸ್ಥಿತಿ ಊಹಿಸಲು ಅಸಾಧ್ಯವಾಗಿತ್ತು. ನಾನು ಶಾಸಕ, ಸಚಿವ, ಸಂಸದನಾಗಿದ್ದಕ್ಕೆ ಅಂಬೇಡ್ಕರ್‌ ಕಾರಣ’ ಎಂದು ಹೇಳಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಜಿ.ಎಚ್.ಮೋಹನ್ ಕುಮಾರ್, ಕುಂದಲವಾಡ ಲಿಂಗರಾಜ್ ಇದ್ದರು.

‘ಕಟ್ಟಕಡೆಯ ವ್ಯಕ್ತಿಗೂ ನ್ಯಾಯ’

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಆಶಯವಾಗಿತ್ತು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಅಭಿಪ್ರಾಯಪಟ್ಟರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಹಾನ್‌ ಹೋರಾಟಗಾರ ಅಂಬೇಡ್ಕರ್‌. ಅಸ್ಪೃಶ್ಯತೆಯನ್ನು ತೊಲಗಿಸಲು ಹೋರಾಟ ಮಾಡಿದರು. ದಲಿತರ ಧ್ವನಿಯಾಗಿದ್ದರು’ ಎಂದು ಕೊಂಡಾಡಿದರು.

‘ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌. ಆದರೂ, ಅವರ ಹೆಸರು ಹೇಳಿ ರಾಜಕೀಯ ಮಾಡುತ್ತಿದೆ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಅಂಬೇಡ್ಕರ್ ನೆನಪಾಗುತ್ತದೆ’ ಎಂದು ಆರೋಪಿಸಿದರು.

***

ಪರಿಶ್ರಮದಿಂದ ಅವಮಾನ ಮೆಟ್ಟಿನಿಂತವರು ಅಂಬೇಡ್ಕರ್‌. ಸಂವಿಧಾನವೇ ಭಾರತೀಯರ ಧರ್ಮಗ್ರಂಥ. ದಲಿತ ಎಂಬ ಕಾರಣಕ್ಕೆ ಅವರ ಬಗೆಗೆ ಉದಾಸೀನ ತೋರುವುದು ಸರಿಯಲ್ಲ.

–ಶಾಂತವೀರ ಸ್ವಾಮೀಜಿ

ಕುಂಚಿಟಿಗ ಗುರುಪೀಠ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು