ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ದಾರಿಯಾವುದಯ್ಯ ಅಂಗನವಾಡಿ ಕೇಂದ್ರಗಳಿಗೆ?

Published 23 ಅಕ್ಟೋಬರ್ 2023, 5:10 IST
Last Updated 23 ಅಕ್ಟೋಬರ್ 2023, 5:10 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರವೂ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಇರುವ ಕೆಲವು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಸುಗಮವಾಗಿ ತೆರಳಲು ಸಮರ್ಪಕ ದಾರಿ ಇಲ್ಲ. ಗಾಳಿ, ಬೆಳಕು, ಸ್ವಚ್ಛತೆ ದೂರದ ಮಾತು. ನಗರದ ಕಾಮನಬಾವಿ ಬಡಾವಣೆಯ ಅಂಗನವಾಡಿ ‘ಎ’ ಕೇಂದ್ರವನ್ನು ತಲುಪಲು ‘ದಾರಿಯಾವುದಯ್ಯ’ ಎಂದು ಕೇಳುವ ಸ್ಥಿತಿ ಇದೆ.

ಚಿಕ್ಕ ಮಕ್ಕಳ ಲಾಲನೆ- ಪಾಲನೆ, ಪೋಷಣೆ ಜೊತೆಗೆ ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಕಾಳಜಿ ವಹಿಸುವ ದೃಷ್ಟಿಯಿಂದ ಅಂಗನವಾಡಿಗಳನ್ನು ತೆರೆಯಲಾಗಿದೆ. ಆದರೆ, ಕಲುಷಿತ ವಾತಾವರಣ, ಇದ್ದೂ ಇಲ್ಲದಂತಿರುವ ಕಿಟಕಿಗಳು, ಶುದ್ಧ ಗಾಳಿ ಬೆಳಕು ಇಲ್ಲದ ಉಸಿರುಗಟ್ಟಿಸುವ ಪರಿಸರದಲ್ಲಿ ಮಕ್ಕಳು ಕುಳಿತುಕೊಳ್ಳುತ್ತಿದ್ದಾರೆ. ಇದು ಕೇವಲ ಒಂದು ಅಂಗನವಾಡಿಯ ಸ್ಥಿತಿಯಲ್ಲ. ಜಿಲ್ಲೆಯ ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ.

ಜಿಲ್ಲೆಯ ನಗರ, ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳು ಮೂಲ ಸೌಲಭ್ಯದ ಕೊರತೆಯಿಂದ ನಲುಗುತ್ತಿವೆ. ಹಲವು ಅಂಗನವಾಡಿ ಕೇಂದ್ರಗಳು ಗ್ರಾಮ ಪಂಚಾಯಿತಿಯ ಸಮುದಾಯ ಭವನ, ಸರ್ಕಾರಿ ಶಾಲೆಗಳ ಅಡುಗೆ ಕೊಠಡಿ ಹಾಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ 800 ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರ ಆರಂಭಿಸಬೇಕು ಎಂಬ ನಿಯಮವಿದೆ. ಜಿಲ್ಲೆಯಲ್ಲಿ 2,428 ಅಂಗನವಾಡಿ ಕೇಂದ್ರಗಳಿವೆ. 3 ವರ್ಷದಿಂದ 6 ವರ್ಷದವರೆಗಿನ 40,588 ಮಕ್ಕಳು ದಾಖಲಾಗಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಟ್ಟಡಕ್ಕೆ ಕಾಂಪೌಂಡ್‍ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್‍ ಸಂಪರ್ಕ, ಸುಸಜ್ಜಿತವಾದ ಅಡುಗೆ ಕೋಣೆ, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಈ ಕೇಂದ್ರಗಳಿಗೆ ನಿವೇಶನ ಲಭ್ಯತೆಯ ಸಮಸ್ಯೆ ಇರುವುದು ಇಲಾಖೆಗೆ ತಲೆನೋವಾಗಿದೆ. ಎಲ್ಲ ಸಮಸ್ಯೆಗೂ ಸ್ವಂತ ಕಟ್ಟಡವಿಲ್ಲದಿರುವುದೇ  ಕಾರಣ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್.

ಚಿತ್ರದುರ್ಗದ ಮಾರುತಿ ನಗರದ ಅಂಗನವಾಡಿ ಕೇಂದ್ರವು ಸಂಪೂರ್ಣ ಶಿಥಿಲಾವಸ್ಥೆಯ ಚಿಕ್ಕ ಕೊಠಡಿಯಲ್ಲಿ ಕಳೆದ 30 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ಮಳೆಗಾಲದಲ್ಲಿ ಅಂಗನವಾಡಿ ಕಟ್ಟಡ ಸೋರುತ್ತದೆ. ಬೇಸಿಗೆಯಲ್ಲಿ ಒಂದು ಕ್ಷಣ ಒಳಗೆ ಕುಳಿತುಕೊಳ್ಳಲು ಆಗದ ಸ್ಥಿತಿಯಲ್ಲಿದೆ.

ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಆಹಾರ ಧಾನ್ಯ, ಪುಸ್ತಕ, ದಾಖಲೆಗಳನ್ನು ಸಂರಕ್ಷಿಸುವುದೇ ಸವಾಲಾಗಿದೆ. ಒಂದು ಮೂಲೆಯಲ್ಲಿ ಮಕ್ಕಳಿಗೆ ಆಹಾರ ತಯಾರಿಸಲಾಗುತ್ತದೆ. ಮತ್ತೊಂದು ಮೂಲೆಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಇರುತ್ತದೆ. ಇನ್ನುಳಿದ ಸ್ಥಳದಲ್ಲಿ ಮಕ್ಕಳನ್ನು ಕೂರಿಸಲಾಗುತ್ತಿದೆ. ಮಕ್ಕಳಿಗೆ ಸೂಕ್ತವಾದ ಶೌಚಾಲಯದ ವ್ಯವಸ್ಥೆ ಇಲ್ಲ. ಇದ್ದರೂ, ನೀರಿನ ಸಮಸ್ಯೆ ಎದುರಾಗುತ್ತದೆ. ಇದರಿಂದ ಮಕ್ಕಳ ಶುಚಿತ್ವ ಮತ್ತು ಪಾಲನೆಗೆ ಅಂಗನವಾಡಿ ಸಿಬ್ಬಂದಿ ಪರದಾಡುತ್ತಿದ್ದಾರೆ.

ನಿಯಮಾನುಸಾರ ಅಂಗನವಾಡಿ ಕಟ್ಟಡ ಕನಿಷ್ಠ 30X40 ಅಡಿ ವಿಸ್ತೀರ್ಣದಲ್ಲಿರಬೇಕು. ಆದರೆ, ಈಗಿರುವ ಕೇಂದ್ರಗಳು ಕಲಿಕಾ ವಾತಾವರಣಕ್ಕೆ ಪೂರಕವಾಗಿಲ್ಲ.

ಅಂಕಿ–ಅಂಶ

2428 – ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು

301 – ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳು

340 – ಶಾಲೆ ಇತರೆ ಕಟ್ಟಡಗಳಲ್ಲಿ 231 –ಶಿಥಿಲಗೊಂಡ ಕಟ್ಟಡಗಳು

ಸಮಸ್ಯೆ ತಂದಿಟ್ಟ ‘ಬುಲೆಟ್‌ ಸೈಜ್‌’ ಮೊಟ್ಟೆ

ಮೊಳಕಾಲ್ಮುರು: ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಕೋಳಿ ಮೊಟ್ಟೆ ಸರಬರಾಜಿಗೆ ಸರ್ಕಾರ ಜಾರಿಗೆ ತಂದಿರುವ ಟೆಂಡರ್‌ ಪದ್ಧತಿಯನ್ನು ಮೊದಲು ಸ್ಥಗಿತಗೊಳಿಸಿ ಮೊದಲಿನಂತೆ ಕಾರ್ಯಕರ್ತೆಯರೇ ಖರೀದಿಸುವ ಪ್ರಕ್ರಿಯೆ ಜಾರಿಗೊಳಿಸಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಟೆಂಡರ್‌ ಪದ್ಧತಿ ಜಾರಿಯಾದ ಮೇಲೆ ಕಳಪೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಪಾಲಕರಿಂದ ಕೇಳಿ ಬರುತ್ತಿದೆ. ಕೆಟ್ಟ ಮೊಟ್ಟೆಗಳ ಬದಲಿಗೆ ನಾವೇ ಕೈಯಿಂದ ಹಣ ಪಾವತಿಸಿ ಮೊಟ್ಟೆ ವಿತರಣೆ ಮಾಡುವ ಅನಿವಾರ್ಯತೆ  ಉಂಟಾಗಿದೆ ಎಂದು ಕಾರ್ಯಕರ್ತೆಯರು ಹೇಳುತ್ತಾರೆ. ಟೆಂಡರ್‌ ಪಡೆದವರು ಕೋಳಿ ಫಾರಂಗಳಲ್ಲಿ ಸಿಗುವ ‘ಬುಲೆಟ್‌ ಸೈಜ್‌’ ಮೊಟ್ಟೆಗಳನ್ನು ಖರೀದಿಸಿ ಕೇಂದ್ರಗಳಿಗೆ ನೀಡುತ್ತಾರೆ. ಈ ಮೊಟ್ಟೆಗಳು ಕಡಿಮೆ ದರದಲ್ಲಿ ದೊರೆಯುತ್ತವೆ. ಕೋಳಿ ಮೊಟ್ಟೆ ಇಡಲು ಪ್ರಾರಂಭಿಸಿದ 16-24 ವಾರದವರೆಗೆ ಇಂತಹ ಗಾತ್ರದ ಮೊಟ್ಟೆಗಳು ಬರುತ್ತವೆ. ಇವು ಬೇಗನೆ ಕೆಟ್ಟು ಹೋಗುತ್ತವೆ. 4-5 ದಿನಗಳಲ್ಲಿ ಬಳಸಬೇಕು. ಇಲ್ಲವಾದಲ್ಲಿ ಒಳಗಿನ ಹಳದಿಯು ನೀರಾಗಿರುತ್ತದೆ. ಈ ಮೊಟ್ಟೆಯನ್ನು ಬೇಯಿಸಿ ನೀಡಿದಲ್ಲಿ ವಾಸನೆ ಬರುತ್ತದೆ. ಈ ಕಾರಣಕ್ಕೆ ಮಕ್ಕಳು ಬಾಣಂತಿಯರು ತಿನ್ನುವುದಿಲ್ಲ ಎನ್ನುತ್ತಾರೆ ಸಿಪಿಐ ತಾಲ್ಲೂಕು ಕಾರ್ಯದರ್ಶಿ ಜಾಫರ್‌ ಷರೀಫ್‌. ಟೆಂಡರ್ ತೆಗೆದುಕೊಂಡವರು ಎಲ್ಲಿಂದಲೋ ಮೊಟ್ಟೆ ಖರೀದಿಸಿ ತಂದು ಕೊಡುತ್ತಾರೆ. ಯಾವಾಗಿನ ಮೊಟ್ಟೆ ಎಂದು ಗೊತ್ತಾಗುವುದಿಲ್ಲ. ಟೆಂಡರ್‌ ಪ್ರಕ್ರಿಯೆ ಆರಂಭದ ನಂತರವೇ ಕಳಪೆ ಮೊಟ್ಟೆ ಆರೋಪ ಬರುತ್ತಿದೆ. ಇದಕ್ಕೂ ಮೊದಲು ಕಾರ್ಯಕರ್ತೆಯರು ಅಗತ್ಯದಷ್ಟು ಮೊಟ್ಟೆಯನ್ನು ಸ್ಥಳೀಯವಾಗಿ ಬೇಕಾದಾಗ ಖರೀದಿಸಿ ತಂದುಬೇಯಿಸಿ ಕೊಡುತ್ತಿದ್ದರು. ಸರ್ಕಾರ ಟೆಂಡರ್ ಪ್ರಕ್ರಿಯೆಯನ್ನು ಮೊದಲು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಮೊಳಕಾಲ್ಮುರು ಪಟ್ಟಣ ವ್ಯಾಪ್ತಿಯ ಕೇಂದ್ರವೊಂದಲ್ಲಿ 4-5 ತಿಂಗಳ ಹಿಂದೆ ಕಳಪೆ ಮೊಟ್ಟೆ ನೀಡಲಾಗಿದೆ ಎಂಬ ದೂರು ಬಂದಿತ್ತು. ಈ ಬಗ್ಗೆ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಕೆಡಿಪಿ ಸಭೆಯಲ್ಲಿ ಟೆಂಡರ್‌ ಪಡೆದವರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದರು. ಇದರಂತೆ 2 ನೋಟಿಸ್ ನೀಡಿದ ನಂತರ ಕಳಪೆ ಮೊಟ್ಟೆ ಚಿಕ್ಕ ಗಾತ್ರದ ಮೊಟ್ಟೆ ಆರೋಪ ಬಂದಿಲ್ಲ. ಮೊಳಕಾಲ್ಮುರು ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳಿಗೆ ಆಂಧ್ರಪ್ರದೇಶ ಮೂಲದ ಲಕ್ಷ್ಮೀ ಪೌಲ್ಟ್ರಿಯವರು ಮೊಟ್ಟೆ ಸರಬರಾಜು ಟೆಂಡರ್ ಪಡೆದುಕೊಂಡಿದ್ದಾರೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ನವೀನ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಮೊಟ್ಟೆ ಗಾತ್ರ ಉತ್ತಮವಾಗಿದ್ದಾಗ ದೂರು ಬರುವುದಿಲ್ಲ ಚಿಕ್ಕ ಮೊಟ್ಟೆ ಕೊಟ್ಟಾಗ ಸಮಸ್ಯೆಯಾಗುತ್ತಿದೆ. ಬೇಯಿಸಿದಾಗ ವಾಸನೆ ಬರುತ್ತದೆ. 15 ದಿನ ಮತ್ತು ತಿಂಗಳಿಗೊಮ್ಮೆ ಮೊಟ್ಟೆ ಸರಬರಾಜು ಮಾಡುತ್ತಾರೆ. ಮೊಟ್ಟೆಗಳು ಹಾಳಾದಲ್ಲಿ ಕಾರ್ಯಕರ್ತೆಯರು ಕೈಯಿಂದ ಹಣ ಹಾಕಿ ಮೊಟ್ಟೆ ತರಬೇಕಿದೆ ಎಂದು ಕಾರ್ಯಕರ್ತೆಯರೊಬ್ಬರು ಅಳಲು ತೋಡಿಕೊಂಡರು.

ಮಕ್ಕಳಿಗಿಲ್ಲ ಹೊರಾಂಗಣ ಆಟ

ಹೊಸದುರ್ಗ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಬಾಡಿಗೆ ಕಟ್ಟಡ ಅಥವಾ ಶಾಲಾ ಕೊಠಡಿಗಳಲ್ಲಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಅಲ್ಲಿ ಮಕ್ಕಳಿಗೆ ಆಟ ಹಾಗೂ ಕಲಿಕಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 20 ಪಟ್ಟಣದಲ್ಲಿ 22 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ಕೆಲ ಕಟ್ಟಡಗಳಿಗೆ ಬಾಡಿಗೆ ಹಣ ಸಂದಾಯವಾಗಿಲ್ಲ ಇನ್ನೂ ಕೆಲವೆಡೆ ಕೊಠಡಿಗಳು ಕಿರಿದಾಗಿದ್ದು ಇಕ್ಕಟ್ಟಿನ ವಾತಾವರಣ ಇದೆ. ಕೆಲ ತಿಂಗಳ ಹಿಂದೆ ಬಾಡಿಗೆ ಸಂದಾಯವಾಗದ ಕಾರಣ ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದ ಘಟನೆಯೂ ನಡೆದಿತ್ತು. ಬಾಡಿಗೆ ಕಟ್ಟಡಗಳಲ್ಲಿ ನಡೆಸುವ ಅಂಗನವಾಡಿಗಳಲ್ಲಿ ಮಕ್ಕಳು ನಿರ್ಭಯವಾಗಿ ಕಲಿಯವುದು ಅಸಾಧ್ಯವಾಗಿದೆ. ಪಟ್ಟಣದಲ್ಲಂತೂ ಮಕ್ಕಳು ಹೊರಗೆ ಆಟ ಆಡುವುದೇ ಕಡಿಮೆ. ಜೋರಾಗಿ ಗಲಾಟೆ ಮಾಡಿದರೆ ಅಕ್ಕ ಪಕ್ಕದ ಮನೆಯವರಿಗೆ ಕಿರಿಕಿರಿ. ಹೊರಾಂಗಣ ಆಟಗಳೇ ಇಲ್ಲದಂತಾಗಿದೆ. ಅಂಗನವಾಡಿಗಳನ್ನು ಬಾಡಿಗೆ ಕಟ್ಟಟದಲ್ಲಿ ನಡೆಸುವಾಗ ಅಲ್ಲಿನ ಮೂಲಸೌಕರ್ಯ ಅಡುಗೆ ಕೊಠಡಿ ಶೌಚಾಲಯದಂತಹ ಅಂಶಗಳನ್ನು ನಿಯಮದಂತೆ ಗಮನಿಸಿ ಅನುಮತಿ ನೀಡಬೇಕು. ಆದರೆ ಈ ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ‘ಪಟ್ಟಣದ ಅಂಗನವಾಡಿಗಳಿಲ್ಲಿ ಮಾಸಿಕ ₹ 4000 ಬಾಡಿಗೆ ನೀಡಲಾಗುತ್ತದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಆಗಸ್ಟ್‌ವರೆಗೂ ಬಾಡಿಗೆ ಪಾವತಿಸಲಾಗಿದೆ. ಪಟ್ಟಣದಲ್ಲಿ ಮೇ ತಿಂಗಳಿಂದ ಬಾಡಿಗೆ ಪಾವತಿಸಬೇಕು. ಈ ತಿಂಗಳು ಅಥವಾ ಮುಂದಿನ ತಿಂಗಳೊಳಗೆ ಬಾಡಿಗೆ ಪಾವತಿಸಲಾಗುತ್ತದೆ. ಪಟ್ಟಣದಲ್ಲಿ 16 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕಟ್ಟಲಾಗುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಸ್ಥಳಾಂತರಿಸಲಾಗುತ್ತದೆ’ ಎನ್ನುತ್ತಾರೆ ಸಿಡಿಪಿಒ ಎ.ಅಭಿಲಾಷ.

ಬೋಗ್ಯದ ಮನೆಗಳಲ್ಲಿ ಕೇಂದ್ರಗಳು

ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಡ ಹುಡುಕುವ ಕಾರ್ಯದಲ್ಲಿ ಕಾರ್ಯಕರ್ತೆಯರು ಸಹಾಯಕಿಯರು ಸುಸ್ತಾಗಿದ್ದಾರೆ. ವರ್ಷದೊಳಗೆ ಬಾಡಿಗೆ ಕಟ್ಟಡ ಖಾಲಿ ಮಾಡುವುದು ಇವರಿಗೆ ಮಾಮೂಲಿಯಾಗಿದೆ. ಈ ಕಾರಣಕ್ಕೆ ಕೆಲವರು ಕಟ್ಟಡಗಳನ್ನು ಮೂರು ವರ್ಷಕ್ಕೆ ಬೋಗ್ಯಕ್ಕೆ ಹಾಕಿಸಿಕೊಂಡು ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಬಾಡಿಗೆ ಕಟ್ಟಡಕ್ಕೆ ಮುಂಗಡ ಹಣ ಪಾವತಿಸದಿರುವುದು ಹಾಗೂ ಕಡಿಮೆ ಬಾಡಿಗೆ ನಿಗದಿಪಡಿಸಿರುವುದೇ ಇದಕ್ಕೆ ಮೂಲ ಕಾರಣ. ನಗರದಲ್ಲಿ ₹ 4000 ಹಾಗೂ ಗ್ರಾಮೀಣ ಭಾಗದಲ್ಲಿ ₹ 2000 ಬಾಡಿಗೆ ನಿಗದಿಗೊಳಿಸಲಾಗಿದೆ. ಈ ಮೊತ್ತಕ್ಕೆ ಕಟ್ಟಡ ಸಿಗುವುದೇ ಕಷ್ಟವಾಗಿದೆ. ಸಿಕ್ಕರೂ ವಾಸಕ್ಕೆ ಯೋಗ್ಯವಲ್ಲದ ಕಟ್ಟಡಗಳಾಗಿರುತ್ತವೆ. ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಇಂತಹ ಕಟ್ಟಡಗಳನ್ನೇ ಅಚ್ಚುಕಟ್ಟು ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ಕಾರ್ಯಕರ್ತೆಯರು ಸಹಾಯಕಿಯರು.

ಯಾರು ಏನಂದರು?

ಗ್ರಾಮೀಣ ಭಾಗಕ್ಕಿಂತಲೂ ನಗರ ಪ್ರದೇಶದ ಅನೇಕ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಈ ಸಮಸ್ಯೆ ಬಗೆಹರಿಸಲು ನಿವೇಶನಗಳನ್ನು ಹುಡುಕಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಹಂತ ಹಂತವಾಗಿ ಕಟ್ಟಡಗಳು ನಿರ್ಮಾಣವಾಗಲಿವೆ – ಭಾರತಿ ಬಣಕಾರ್ ಉಪ ನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಅಂಗನವಾಡಿಗಳಿಗೆ ನಿಯಾನುಸಾರ ಸರ್ಕಾರ ಸ್ವಂತ ಕಟ್ಟಡ ನಿರ್ಮಿಸಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಬಾಡಿಗೆ ವಿಚಾರದಲ್ಲಿ ಆಗುವ ಸಮಸ್ಯೆಗಳಿಂದ ಕಾರ್ಯಕರ್ತೆಯರು ಸಹಾಯಕಿಯರು ನೊಂದಿದ್ದಾರೆ. ಜತೆಗೆ ಶಿಥಿಲ ಕಟ್ಟಡದಲ್ಲಿ ಮಕ್ಕಳನ್ನು ಕಾಪಾಡುವುದು ಸವಾಲಾಗಿದೆ. – ಎಸ್‌.ಭಾಗ್ಯಮ್ಮ ಅಧ್ಯಕ್ಷೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಫೆಡರೇಷನ್‌ ಜಿಲ್ಲಾ ಘಟಕ

ಅಂಗನವಾಡಿ ಕೇಂದ್ರಗಳು ಕಿರಿದಾಗಿದ್ದು ಶಿಥಿಲಾವಸ್ಥೆ ತಲುಪಿರುವುದರಿಂದ ಮಕ್ಕಳನ್ನು ಕಳುಹಿಸಲು ಭಯವಾಗುತ್ತದೆ. ಮಳೆ ಬಂದರೆ ಸೋರುತ್ತಿವೆ. ಗಾಳಿ ಬೆಳಕೂ ಇಲ್ಲ. ಸ್ವಂತ ಕಟ್ಟಡ ನಿರ್ಮಿಸಿದರೆ ಅನುಕೂಲ – ಜರೀನಾಬಾನು ನಿವಾಸಿ ಮಾರುತಿ ನಗರ

-ನಗರದಲ್ಲಿ ಸ್ವಂತ ಕಟ್ಟಡವಿಲ್ಲದ್ದರಿಂದ ಬಾಡಿಗೆ ಕೊಟ್ಟು ಕೇಂದ್ರ ನಡೆಸುತ್ತಿದ್ದೇವೆ. ಮಳೆ ಬಂದರೆ ಸೋರುತ್ತವೆ. ವಿದ್ಯುತ್‌ ಕಡಿತಗೊಳಿಸಿದ್ದರಿಂದ ಬೆಳಕೂ ಇಲ್ಲ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಭಯದಲ್ಲಿ ಇದ್ದೇವೆ – ಪಿ.ಶಶಿಕಲಾ ಅಂಗನವಾಡಿ ಕಾರ್ಯಕರ್ತೆ ಮಾರುತಿ ನಗರ

ಸಂಪೂರ್ಣ ಶಿಥಿಲಗೊಂಡ ಬಾಡಿಗೆ ಕಟ್ಟಡದಲ್ಲಿರುವ ಮಾರುತಿ ನಗರದ ಅಂಗನವಾಡಿ ಕೇಂದ್ರ
ಸಂಪೂರ್ಣ ಶಿಥಿಲಗೊಂಡ ಬಾಡಿಗೆ ಕಟ್ಟಡದಲ್ಲಿರುವ ಮಾರುತಿ ನಗರದ ಅಂಗನವಾಡಿ ಕೇಂದ್ರ
ನೆಲದ ಮೇಲೆ ಇಟ್ಟಿರುವ ಆಹಾರ ಸಾಮಗ್ರಿ
ನೆಲದ ಮೇಲೆ ಇಟ್ಟಿರುವ ಆಹಾರ ಸಾಮಗ್ರಿ
ಒಂದೇ ಕೊಠಡಿಯಲ್ಲಿ ಅಡುಗೆ ಪಾತ್ರೆ ಮಕ್ಕಳ ಕಲಿಕೆ
ಒಂದೇ ಕೊಠಡಿಯಲ್ಲಿ ಅಡುಗೆ ಪಾತ್ರೆ ಮಕ್ಕಳ ಕಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT