ಮಂಗಳವಾರ, ಆಗಸ್ಟ್ 3, 2021
21 °C
ಸೋಂಕಿತರು ಹೆಚ್ಚಾದಂತೆ ಮೊಬೈಲ್‌ ಆ್ಯಪ್‌ ಬಳಕೆದಾರರ ಏರಿಕೆ

ಚಿತ್ರದುರ್ಗ: ಆರೋಗ್ಯ ಸೇತು ನಿಗಾದಲ್ಲಿ ಲಕ್ಷ ಜನ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕೊರೊನಾ ಸೋಂಕಿತರ ಚಲನವಲನಗಳ ಬಗ್ಗೆ ಎಚ್ಚರಿಕೆ ನೀಡುವ ‘ಆರೋಗ್ಯ ಸೇತು’ ಆ್ಯಪ್‌ನ್ನು ಜಿಲ್ಲೆಯಲ್ಲಿ 1.03 ಲಕ್ಷ ಜನರು ಬಳಸುತ್ತಿದ್ದಾರೆ. ಕೋವಿಡ್‌ ಪ್ರಕರಣ ಏರಿಕೆಯಾದಂತೆ ಆ್ಯಪ್‌ ಡೌನ್‌ಲೋಡ್‌ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಜಿಪಿಎಸ್‌ ತಂತ್ರಜ್ಞಾನದ ಸಹಾಯದಿಂದ ಕೇಂದ್ರ ಸರ್ಕಾರ ಈ ಆ್ಯಪ್‌ ರೂಪಿಸಿದೆ. ಆ್ಯಪ್‌ ಹೊಂದುವುದು ಕಡ್ಡಾಯವಲ್ಲ. ಆದರೆ, ಸ್ಮಾರ್ಟ್‌ಫೋನ್‌ ಹೊಂದಿದ ಪ್ರತಿಯೊಬ್ಬ ವ್ಯಕ್ತಿ ‘ಆರೋಗ್ಯ ಸೇತು’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಸೋಂಕಿನಿಂದ ರಕ್ಷಣೆ ಪಡೆಯಬಹುದು.

ಕೋವಿಡ್‌ ಸೋಂಕಿತರ ಸಂಪರ್ಕಕ್ಕೆ ಬಾರದಂತೆ ತಡೆಯಲು ‘ಆರೋಗ್ಯ ಸೇತು’ ಆ್ಯಪ್‌ ಉಪಯುಕ್ತ. ಸೋಂಕಿತರು ಸಮೀಪಕ್ಕೆ ಬಂದಾಗ ಆ್ಯಪ್‌ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಇಂತಹ ಸಂದರ್ಭದಲ್ಲಿ ಅಪಾಯದಿಂದ ಪಾರಾಗಬಹುದು. ಈ ಮೊಬೈಲ್‌ ಅಪ್ಲಿಕೇಶನ್‌ ಬಳಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಕರೆನೀಡಿದ್ದರು.

‘ಕನ್ನಡ, ತಮಿಳು, ತೆಲಗು, ಇಂಗ್ಲಿಷ್‌ ಹಾಗೂ ಹಿಂದಿ ಸೇರಿ 11 ಭಾಷೆಯಲ್ಲಿ ಆ್ಯಪ್‌ ಲಭ್ಯವಿದೆ. ಪ್ರಾದೇಶಿಕ ಭಾಷೆಗಳ ಆಯ್ಕೆ ನೀಡಿದ ಬಳಿಕ ಹಲವರು ಈ ಆ್ಯಪ್‌ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಆ್ಯಪ್‌ ಬಳಕೆ, ನಿರ್ವಹಣೆ ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಆ್ಯಪ್‌ ನೆರವಿನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಗೂಗಲ್ ಪ್ಲೇಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಜಿಪಿಎಸ್‌ ಮತ್ತು ಬ್ಲೂಟೂಥ್‌ ಚಾಲನೆಯಲ್ಲಿ ಇಡುವುದು ಕಡ್ಡಾಯ. ಇದರಿಂದ ಸೋಂಕಿತರು ಹಾಗೂ ಬಳಕೆದಾರರ ಸ್ಥಳದ ಬಗ್ಗೆ ಆ್ಯಪ್‌ ಸುಲಭವಾಗಿ ಗ್ರಹಿಸುತ್ತದೆ. ಹೆಸರು, ಲಿಂಗ, ವಯಸ್ಸು, ವೃತ್ತಿ, ಪ್ರಯಾಣ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದಾಗ ಬಳಕೆದಾರರ ಸುಕ್ಷತೆಯ ಬಗ್ಗೆ ಆ್ಯಪ್‌ ತಿಳಿವಳಿಕೆ ನೀಡುತ್ತದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಅಭಿವೃದ್ಧಿಪಡಿಸಿದ ಈ ಆ್ಯಪ್‌ ನಿರಂತರವಾಗಿ ಮೇಲ್ದರ್ಜೆಗೆ ಏರುತ್ತಿದೆ. ಆಗಾಗ ಆ್ಯಪ್‌ ಅಪ್ಡೇಟ್‌ ಮಾಡಿಕೊಂಡರೆ ಅನುಕೂಲ. ಸಹಾಯವಾಣಿ, ಬಳಕೆದಾರರ ಆರೋಗ್ಯದ ಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತದೆ. 500 ಮೀಟರ್‌, ಒಂದು ಕಿ.ಮೀ, ಎರಡು ಕಿ.ಮೀ, ಐದು ಕಿ.ಮೀ ಹಾಗೂ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ಇರುವ ಸೋಂಕಿತರ ಬಗ್ಗೆ ವಿವರ ಒದಗಿಸುತ್ತದೆ.

‘ಆ್ಯಪ್‌ ತೆರೆದ ಬಳಿಕ ಸ್ವಯಂಚಾಲಿತವಾಗಿ ಬ್ಲೂಟೂಥ್‌ ಹಾಗೂ ಜಿಪಿಎಸ್‌ ಆನ್‌ ಆಗುತ್ತದೆ. ಬಳಕೆದಾರರ ಸ್ಥಳದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುತ್ತದೆ. ಸೋಂಕಿತರು ಕೂಡ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆ್ಯಕ್ಟಿವ್‌ ಮೂಡ್‌ನಲ್ಲಿ ಇಟ್ಟಿದ್ದರೆ ಮಾತ್ರ ಇದು ನೆರವಾಗುತ್ತದೆ. ಇಲ್ಲವಾದರೆ, ಅಪಾಯ ಅರಿಯಲು ಸಾಧ್ಯವಿಲ್ಲ’ ಎಂದು ತಂತ್ರಜ್ಞರೊಬ್ಬರು ವಿವರಿಸಿದರು.

ಆ್ಯಪ್‌ ಸುರಕ್ಷತೆಯ ಬಗ್ಗೆ ಅನೇಕರಲ್ಲಿ ಅನುಮಾನಗಳಿವೆ. ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಭೀತಿ ಎದುರಾಗಿದೆ. ಹೀಗಾಗಿ, ಹಲವರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಆರೋಗ್ಯ ಇಲಾಖೆ ಈ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ ಜಿಲ್ಲೆಯಲ್ಲಿ ಬಳಕೆದಾರರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು