ಶನಿವಾರ, ಅಕ್ಟೋಬರ್ 16, 2021
29 °C

ಅತ್ಯಾಧುನಿಕ ಕಲಿಕಾ ಸೌಲಭ್ಯದ ಬಂಜಗೆರೆ ಶಾಲೆ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಬಂಜಗೆರೆ (ಚಳ್ಳಕೆರೆ): ಬಂಜಗೆರೆ ಎಂದರೆ ಕುಡಿಯುವ ಹನಿ ನೀರಿಗೂ ಬರ ಇತ್ತು. ಹೀಗಾಗಿ ಈ ಕುಗ್ರಾಮಕ್ಕೆ ಹೆಣ್ಣು ಕೊಡಲು ಸುತ್ತ ಮುತ್ತಲ ಗ್ರಾಮದ ಜನ ಹಿಂದು–ಮುಂದು ನೋಡುತ್ತಿದ್ದರು!

ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಗಡಿ ಗ್ರಾಮ ಬಂಜಗೆರೆಯಲ್ಲಿ ಸಮಾನ ಮನಸ್ಸಿನ ಶಿಕ್ಷಕರು ಜೊತೆಗೂಡಿ ಸ್ಥಳೀಯ ಸೋಲಾರ್ ಕಂಪನಿಯ ದೇಣಿಗೆ ಮತ್ತು ಶಿಕ್ಷಣ ಇಲಾಖೆ ಒದಗಿಸಿದ ಸೌಲಭ್ಯಗಳಿಂದ ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಇಲ್ಲಿ ಗೊಲ್ಲ, ಮ್ಯಾಸಬೇಡ ಹಾಗೂ ಪರಿಶಿಷ್ಟ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಗ್ರಾಮದ ಜನಸಂಖ್ಯೆಗನುಗುಣವಾಗಿ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 148 ಮಕ್ಕಳಿದ್ದಾರೆ. ಎಜಿಟಿ ಶಿಕ್ಷಕರು ಸೇರಿದಂತೆ ಕನ್ನಡ, ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯ ಬೋಧಿಸಲು ಹಾಗೂ ಮಕ್ಕಳ ಕ್ರೀಡಾ ಚಟುವಟಿಕೆಗೆ ಅನುಭವಿ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ.

ಅತ್ಯಾಧುನಿಕ ಕಲಿಕಾ ಪರಿಸರವನ್ನು ಸೃಷ್ಟಿಸಲಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಆಧಾರಿತ ಬೋಧನಾ ವ್ಯವಸ್ಥೆ ಇದೆ. ಹಾಗಾಗಿ ಈ ಶಾಲೆಯಲ್ಲಿ ಪ್ರತಿ ವರ್ಷ ಶೇಕಡ ನೂರರಷ್ಟು ದಾಖಲಾತಿ, ಹಾಜರಾತಿ ಮತ್ತು ಫಲಿಂತಾಶ ಇದೆ. ಶೌಚಾಲಯ, ಹೈಟೆಕ್ ಅಡುಗೆ ಕೋಣೆ, ಹೆಚ್ಚುವರಿ ಬೋಧನಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಗೆ 15 ಕಂಪ್ಯೂಟರ್‌ಗಳನ್ನು ಒದಗಿಸಿದೆ.

ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಗ್ರಾಮೀಣ ಮಕ್ಕಳ ಗುಣಮಟ್ಟದ ಶಿಕ್ಷಣದ ವ್ಯವಸ್ಥೆಗೆ ಸೋಲಾರ್ ಕಂಪನಿ, ಪಾಠೋಪಕರಣ, ಪೀಠೋಪಕರಣ, ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ, ಎಲ್‍ಸಿಡಿ ಆಡಿಯೊ–ವಿಡಿಯೊ ಬೋರ್ಡ್ ಪ್ರಾಜೆಕ್ಟ್ ಅಳವಡಿಕೆಗೆ ₹ 4 ಲಕ್ಷಕ್ಕೂ ಹೆಚ್ಚು ಆರ್ಥಿಕ ಸಹಕಾರ ನೀಡಿದೆ.

ನರೇಗಾ ಯೋಜನೆಯಡಿ ಶಾಲಾಭಿವೃದ್ಧಿ ಸಮಿತಿ ಸಹಕಾರದಲ್ಲಿ ಸುಸಜ್ಜಿತ ಶಾಲಾ ಕಾಂಪೌಂಡ್ ನಿರ್ಮಿಸಲಾಗಿದೆ. ಇಲ್ಲಿಯ ಎಲ್ಲ ಶಿಕ್ಷಕರು, ಪರಸ್ಪರ ಪ್ರೀತಿ, ಹೊಂದಾಣಿಕೆ ಹಾಗೂ ಸಾಮರಸ್ಯದಿಂದ ಸೃಜನಶೀಲ ಹಾಗೂ ಚಟುವಟಿಕೆ ಆಧಾರಿತ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದರಿಂದ ನಗರದ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ.

ಸುಂದರ ಹಸಿರು ಪರಿಸರ ಇರುವುದರಿಂದ ಇಲ್ಲಿಯ ಯಾವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಹಾಗೂ ಕಾನ್ವೆಂಟ್‍ಗೆ ಸೇರಿಸಿಲ್ಲ. ಇಲ್ಲಿಯ ಶಿಕ್ಷಕರು ತಾವೇ ಕಂಡುಕೊಂಡ ಸರಳ ಬೋಧನಾ ವಿಧಾನ, ಪ್ರಯೋಗಾಲಯ, ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಕಲಿಕೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕೈತೋಟ: 9 ನುಗ್ಗೆ, 9 ಕರಿಬೇವು, ಫಲಕ್ಕೆ ಬಂದ 21 ತೆಂಗು, 5 ಹುಣಿಸೆ, 2 ಮಾವು ಮತ್ತು 5 ತೇಗ, 40 ಅಶೋಕಮರಗಳ ಜೊತೆಗೆ ಅಲ್ಲಲ್ಲಿ ಹಲವು ಬಗೆಯ ವಿವಿಧ ಜಾತಿಯ ಹೂ, ಬಳ್ಳಿಗಳನ್ನು ಬೆಳೆಸಲಾಗಿದೆ. ಆವರಣದ ಹಸಿರು ಗಿಡ–ಮರಗಳ ಮಧ್ಯ 4–5 ಅಡಿ ಎತ್ತರದಲ್ಲಿ ಕೊಡ ಹಿಡಿದು ನಿಂತ ಕಾವೇರಿ ಪ್ರತಿಮೆ, ನೀರು ಚಿಮ್ಮುವ ಕಾರಂಜಿಗಳೂ ಇವೆ.

ಶಾಲಾ ಆವರಣದಲ್ಲಿ ಬೆಳೆಸಿದ ನುಗ್ಗೆ, ಕರಿಬೇವು, ಇನ್ನಿತರ ಸೊಪ್ಪು, ತರಕಾರಿಯ ಜತೆಗೆ ಫಲಕ್ಕೆ ಬಂದ 21 ತೆಂಗಿನ ಮರದ ಕಾಯಿಗಳನ್ನು ಶಾಲೆಯಲ್ಲಿಯೇ ಸಂಗ್ರಹಿಸಲಾಗಿದೆ. ಪ್ರತಿದಿನ ಮಕ್ಕಳ ಬಿಸಿಯೂಟಕ್ಕೆ 4–5 ತೆಂಗಿನ ಕಾಯಿಗಳನ್ನು ಬಳಕೆ ಮಾಡುತ್ತೇವೆ. ಗ್ರಾಮದ ಜನರು ಹಾಗೂ ಶಿಕ್ಷಕರ ಸ್ವ ಆಸಕ್ತಿ, ಪರಿಶ್ರಮದಿಂದ ರೂಪುಗೊಂಡ ಕೈತೋಟ–ಸುಂದರ ಉದ್ಯಾನ ನಿರ್ಮಾಣದಿಂದ ಈ ಶಾಲೆ ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ.

ಗ್ರಾಮದ ಜನರು ಖುರ್ಚಿ, ಟೇಬಲ್, ಅಲ್ಮೇರಾ, ಒಂದು ಕಂಪ್ಯೂಟರ್, ಕಲರ್ ಪ್ರಿಂಟರ್, ವೀಲ್‍ಚೇರ್, ಟೇಬಲ್ ಮುಂತಾದವನ್ನು ದೇಣಿಗೆ ನೀಡಿದ್ದಾರೆ.

ಪರಿಸರ ಮಿತ್ರ, ಹಸಿರು ಶಾಲೆ, ಉತ್ತಮ ಎನ್‍ಪಿಜಿಎಲ್ ಶಾಲೆ, ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಎಸ್‍ಡಿಎಂಸಿ ಪ್ರಶಸ್ತಿ ಸೇರಿದಂತೆ 7 ಪ್ರಶಸ್ತಿಗಳು ಈ ಶಾಲೆಯ ಮುಡಿಗೇರಿವೆ.

***

ಎಲ್ಲ ಶಿಕ್ಷಕರು ಜತೆಗೂಡಿ ಪ್ರತಿದಿನ ಹಾಜರಾತಿ ಪರಿಶೀಲಿಸುತ್ತೇವೆ. ಗೈರು ಹಾಜರಾದ ಮಕ್ಕಳ ಮನೆಗೆ ತಪ್ಪದೇ ಭೇಟಿ ನೀಡಿ ಪೋಷಕರೊಂದಿಗೆ ವಿಚಾರಣೆ ನಡೆಸುತ್ತೇವೆ. ಪ್ರತಿವಾರ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸುತ್ತೇವೆ.
–ಆರ್. ಭೀಮಾರೆಡ್ಡಿ, ಬಡ್ತಿ ಮುಖ್ಯಶಿಕ್ಷಕ

***

ನಮ್ಮೂರು, ನಮ್ಮ ಶಾಲೆ, ನಮ್ಮ ಮಕ್ಕಳು ಎಂಬ ಅಭಿಮಾನ ನಮಗಿದೆ. ಹೀಗಾಗಿ ಶಾಲೆ ಹಾಗೂ ಮಕ್ಕಳ ಕಲಿಕೆಗೆ ಏನೇ ಕೊರತೆ ಇದ್ದರೂ ಅದನ್ನು ಗುರುತಿಸಿ, ಅಗತ್ಯ ವಸ್ತುಗಳನ್ನು ಒದಗಿಸುವ ಸಂಕಲ್ಪ ಮಾಡಿದ್ದೇವೆ.
-ಪಿ.ಎಚ್.ಶಾಂತಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

***

ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರದ ಅನುದಾನ ಮತ್ತು ಸ್ಥಳೀಯ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಶಾಲೆಗೆ ಹೈಟೆಕ್ ಸ್ಪರ್ಶ ನೀಡಿರುವ ಇಲ್ಲಿಯ ಶಿಕ್ಷಕರ ಕರ್ತವ್ಯ ನಿರ್ವಹಣೆ, ಪರಿಶ್ರಮ, ನಿಷ್ಠೆ, ಅವರ ವೃತ್ತಿ ಬದ್ಧತೆ ಇನ್ನಿತರ ಶಾಲೆಗೂ ಮಾದರಿಯಾಗಲಿ.
–ಕೆ.ಎಸ್.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.