ಸೋಮವಾರ, ಮೇ 16, 2022
28 °C
ದೇವಸ್ಥಾನಗಳಲ್ಲಿ ವಿಶೇಷ ಪೂಜೆ – ಚಿತ್ರದುರ್ಗದಲ್ಲಿ ಸಾಗಿದ ಮೆರವಣಿಗೆ

ಕೋಟೆನಾಡಲ್ಲಿ ಬಸವ ಜಯಂತಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಾದ್ಯಂತ ಮಂಗಳವಾರ ಜಗಜ್ಯೋತಿ ಬಸವೇಶ್ವರ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.

ವೀರಶೈವ ಲಿಂಗಾಯತ ಸಮಾಜ ಹಾಗೂ ರಾಷ್ಟ್ರೀಯ ಬಸವ ದಳದಿಂದ ನಗರದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಪ್ರತ್ಯೇಕವಾಗಿ ಸಾಗಿತು. ಜಿಲ್ಲೆಯ ಜನಪದ ಕಲಾವಿದರು ಮೆರವಣಿಗೆಗೆ ಸಾಥ್‌ ನೀಡಿದರು.

ನಗರದ ಗಾಂಧಿ ವೃತ್ತ, ಪ್ರವಾಸಿ ಮಂದಿರ, ಒನಕೆ ಓಬವ್ವ ವೃತ್ತ, ಮದಕರಿ ನಾಯಕನ ವೃತ್ತ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನಾಕರ್ಷಿಸಿತು. ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಎಚ್‌. ತಿ‍ಪ್ಪಾರೆಡ್ಡಿ, ‘ಭಾರತದ ಸಂವಿಧಾನದ ಆಶಯಗಳು ಹಾಗೂ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳಲ್ಲಿ ಸಾಮ್ಯತೆಯಿದೆ. ಕಲ್ಯಾಣದ ಕ್ರಾಂತಿಯಾಗಿ 900 ವರ್ಷಗಳಾದರೂ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮ ಸಮಾಜ, ಸಮಾನತೆ ಹಾಗೂ ಜ್ಯಾತ್ಯಾತೀತ ಮನೋಭಾವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ’ ಎಂದರು.

‘ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಬಸವಣ್ಣನ ಜಯಂತಿ ಆಚರಿಸಲಾಗುತ್ತದೆ. ಸಂಸತ್‌ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳು ಬಸವಣ್ಣನವರ ಆಶಯಗಳ ಈಡೇರಿಕೆಗೆ ಶ್ರಮಿಸಿವೆ’ ಎಂದು ತಿಳಿಸಿದರು.

ವೀರಶೈವ ಸಮಾಜದ ಕಾರ್ಯದರ್ಶಿ ವಿಶ್ವನಾಥ ಮಾತನಾಡಿ, ‘ಬಸವಣ್ಣ ಈ ನೆಲದಲ್ಲಿ ಜನಿಸಿದ ನೈಜ ಚಿಂತಕ ಹಾಗೂ ಸಮಾಜ ಸುಧಾರಕ. ಅಂಬೇಡ್ಕರ್ ಸೇರಿದಂತೆ ಹಲವು ಸಮಾಜ ಸುಧಾರಕರು ಅವರ ಹಾದಿಯಲ್ಲಿ ಸಾಗಿದ್ದಾರೆ. ಸಮಾನತೆ, ಸಹಬಾಳ್ವೆಯನ್ನು ನಾವುಗಳು ರೂಢಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್‌.ಚಂದ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ವೀರಶೈವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಬಿ. ರಾಜಶೇಖರ್‌, ನಿರ್ದೇಶಕಿ ಮೋಕ್ಷಾ ರುದ್ರಸ್ವಾಮಿ, ಮಹಡಿ ಶಿವಮೂರ್ತಿ, ಮಹೇಶ್‌, ಶ್ಯಾಮಲಾ ಶಿವಪ್ರಕಾಶ್‌, ನಿರ್ಮಲ ಬಸವರಾಜ, ರೀನಾ ವೀರಭದ್ರಪ್ಪ, ಆರತಿ ಮಹಡಿ‌ ಶಿವಮೂರ್ತಿ, ಕೆ.ಬಿ. ಷಣ್ಮುಖಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.