ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ ವಿರಕ್ತಮಠ: ಶರಣರಿಂದ ದೀಕ್ಷೆ

ವಿರಕ್ತಮಠಕ್ಕೆ ಚರಪಟ್ಟಾಧಿಕಾರಿಯಾಗಿ ಡಾ.ಬಸವ ಜಯಚಂದ್ರ ಸ್ವಾಮೀಜಿ ನೇಮಕ
Last Updated 11 ಸೆಪ್ಟೆಂಬರ್ 2020, 15:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾಮಠದ ಶಾಖಾಮಠವಾದ ಚನ್ನಗಿರಿಯ ಹಾಲಸ್ವಾಮಿ ವಿರಕ್ತಮಠದಲ್ಲಿ ಶುಕ್ರವಾರ ಶಿವಮೂರ್ತಿ ಮುರುಘಾ ಶರಣರು ನೂತನ ಸ್ವಾಮೀಜಿಗೆ ಬಸವತತ್ವೋಪದೇಶ ಮತ್ತು ಸಮಾಜಸೇವಾ ದೀಕ್ಷೆ ನೀಡಿದರು.

ಚಂದ್ರಮೋಹನ ದೇವರು ಅವರನ್ನು ವಿರಕ್ತಮಠಕ್ಕೆ ಡಾ.ಬಸವ ಜಯಚಂದ್ರ ಸ್ವಾಮೀಜಿ ಎಂಬ ನಾಮಾಂಕಿತದೊಂದಿಗೆ ಚರಪಟ್ಟಾಧಿಕಾರಿಯಾಗಿ ನೇಮಿಸಲಾಯಿತು.

ಶಿವಮೂರ್ತಿ ಶರಣರು, ‘ಜಂಗಮರು ಯಾವಾಗಲೂ ಚಲನಶೀಲರಾಗಿದ್ದರೆ ಕ್ರಿಯಾಶೀಲತೆ ಹೆಚ್ಚುತ್ತದೆ. ಜಂಗಮತ್ವಕ್ಕೆ ಬದುಕು ಸಮರ್ಪಿಸುವವರೇ ನಿಜವಾದ ಸಾಧಕರಾಗಲು ಸಾಧ್ಯ’ ಎಂದು ಹೇಳಿದರು.

‘ಭಾರತೀಯ ಪರಂಪರೆಯಲ್ಲಿ ಮಠಗಳು ಅವಿಚ್ಛಿನ್ನವಾದ ಪರಂಪರೆ ಹೊಂದಿವೆ. ಇದು ಜೀವನವನ್ನು ಹದಗೊಳಿಸುವಂಥದ್ದು. ಜನಮುಖಿ ಕಾರ್ಯಗಳೆ ಒಂದು ಮಠ ಮತ್ತು ಪೀಠದ ನಿಜವಾದ ಅಸ್ತಿತ್ವ. ಅದುವೇ ಇತಿಹಾಸ. ಆದ್ದರಿಂದ ಜಯದೇವ ಶ್ರೀಗಳ ಆಶಯದಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ’ ಎಂದು ಸಲಹೆ ನೀಡಿದರು.

‘ಗುರುಸಾಕ್ಷಿ, ಧರ್ಮಸಾಕ್ಷಿ, ದೈವಸಾಕ್ಷಿ ಸ್ವಾಮೀಜಿಯಾಗಬೇಕು. ಅಂತರ್ಮುಖಿ ಸಾಧನೆ ಮಾಡಬೇಕು. ಇದರಲ್ಲಿ ಪರಮಾನಂದ ಸಿಗುತ್ತದೆ. ಬಸವಣ್ಣ ಎಂದರೆ ಸಮೂಹ, ಸಮಾಜ. ಎಲ್ಲ ದೇಶಗಳಿಗೂ ಲೋಕಸಭೆ ಎಂದರೆ ಬಸವಣ್ಣ ಸ್ಥಾಪಿಸಿದ ಸಮಸಮಾಜದ ಅನುಭವ ಮಂಟಪ. ಈ ಆದರ್ಶದೊಂದಿಗೆ ಎಲ್ಲರೂ ಸಾಗಬೇಕು’ ಎಂದರು.

ಬೆಂಗಳೂರು ಕೊಳದಮಠದ ಶಾಂತವೀರ ಸ್ವಾಮೀಜಿ, ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT