ಚಿತ್ರದುರ್ಗ: ಲಿಂಗಾಯತ ಧರ್ಮದ ನಡಿಗೆ ಆರಂಭ ಡೊಂಕು

ಸಾಣೇಹಳ್ಳಿ (ಹೊಸದುರ್ಗ): ‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ನಡಿಗೆಯ ಆರಂಭ ಡೊಂಕು ಆಯಿತೇನೊ ಅನ್ನಿಸುತ್ತಿದೆ. ಈ ವಿಷಯದಲ್ಲಿ ನಾವು ಸುಮ್ಮನಾಗಿ ಬಿಟ್ಟೆವು. ಧರ್ಮಕ್ಕೆ ಸರಿಯಾದ ನಿಷ್ಠೆ ತೋರುತ್ತಿದ್ದೇವೆಯೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕು. ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮದ 2ನೇ ದಿನವಾದ ಬುಧವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
‘25 ವರ್ಷಗಳಿಂದ ನಾಟಕೋತ್ಸವದ ಮೂಲಕ ಬತ್ತಿಹೋಗುತ್ತಿರುವ ನೀತಿ, ಕರ್ತವ್ಯ, ಧಾರ್ಮಿಕ ಪ್ರಜ್ಞೆಗೆ ಪುನಶ್ಚೇತನ ಮಾಡುವ ಕೆಲಸವನ್ನು ಸಾಣೇಹಳ್ಳಿಶ್ರೀ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಅಭಿನಂದನಾರ್ಹ. ಗೌರವಕ್ಕೆ ಪಾತ್ರರಾಗಬೇಕಾದರೆ ಸಣ್ಣಪುಟ್ಟದನ್ನು ತ್ಯಾಗ ಮಾಡಬೇಕಿದೆ. ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
‘ರಾಜಕೀಯ ನಾಯಕತ್ವ ದೇಶದ ನಾಯಕತ್ವವೇ ಆಗಿದೆ. ನಾಯಕತ್ವವನ್ನು ಟೊಳ್ಳು ಮಾಡುವುದನ್ನು ನಾವು ಒಪ್ಪಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಡೊಂಕು ಇರುವಂತೆ ಧಾರ್ಮಿಕ ಕ್ಷೇತ್ರವನ್ನು ಬಿಟ್ಟಿಲ್ಲ. ನಾವು ಸ್ವಾಮಿಗಳ ಬಗ್ಗೆ ಮಾತನಾಡಲು ಆಗಲ್ಲ. ಏಕೆಂದರೆ ನಮ್ಮ ಬಾಯಿ ಹೊಲೆದು ಬಿಟ್ಟಿದ್ದಾರೆ. ರಾಜಕಾರಣದಲ್ಲೂ ಅನೇಕ ಸಾಧನೆಗಳಾಗಿದೆ. ರಾಜಕಾರಣ ಹಾಗೂ ಧರ್ಮ ಒಟ್ಟಿಗೆ ಹೋಗಬೇಕಾಗುತ್ತದೆ. ಮದ್ಯ ನಿಷೇಧಕ್ಕೆ ನಿರಂತರ ಹೋರಾಟ ಮುಖ್ಯ. ನಾನು, ನನ್ನ ಮಕ್ಕಳು ಕುಡಿಯುವುದನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ‘ಪ್ರಪಂಚವೇ ಮೆಚ್ಚುವಂತಹ ಸಂಸ್ಕೃತಿ ಭಾರತೀಯರದ್ದು. ವಿದೇಶಿಯರಲ್ಲಿ ಹಣದ ರಾಶಿ ಇದ್ದರೂ ನೆಮ್ಮದಿ ಇಲ್ಲ. ಸಂಜೆ ಮದುವೆ ಆಗಿ ಬೆಳಿಗ್ಗೆ ವಿಚ್ಛೇದನ ಪಡೆಯುವುದು ಅಲ್ಲಿನ ಸಂಸ್ಕೃತಿ. ಕೆಲವು ರಾಜಕಾರಣಿಗಳು ಭ್ರಷ್ಟಾಚಾರ ಮಾಡಿದರೆ ಎಲ್ಲಾ ರಾಜಕಾರಣಿಗಳು ಭ್ರಷ್ಟರೆಂದು ಭಾವಿಸಬಾರದು’ ಎಂದು ಹೇಳಿದರು.
‘ಯುವಪೀಳಿಗೆ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಿದ ಸಿಐಡಿಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ‘ನಾವು ನಡೆದು ಬಂದ ಹಾದಿಯ ಬಗ್ಗೆ ಅರಿವು ಇರಬೇಕು. ಹಿಂಜರಿಕೆಯೇ ಸಾಧನೆಯ ಹಿನ್ನೆಡೆ ಜೀವಾಳ. ಪ್ರತಿಯೊಬ್ಬರಿಗೂ ಸ್ವಧರ್ಮ ಇದಲ್ಲಿ ಬದುಕಿನಲ್ಲಿ ಸಾಧನೆ ಹಾಗೂ ಉನ್ನತಿ ಸಾಧ್ಯ. ಇಂದು ಜ್ಞಾನ ಜಗತ್ತನ್ನು ಆಳುತ್ತಿದೆ. ಉತ್ತಮ ಸಮಾಜ ಕಟ್ಟುವ ವ್ಯವಧಾನ ಇದ್ದಲ್ಲಿ ಕಲಿಯಲು ಸಾಕಷ್ಟಿದೆ’ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ‘ಕದಡಿದ ಮನಸ್ಸನ್ನು ತಿಳಿಗೊಳಿಸುವ ಹಾಗೂ ಸುಸ್ಥಿರ ಸಮಾಜ ನಿರ್ಮಾಣದ ಕಾರ್ಯವನ್ನು ಪಂಡಿತಾರಾಧ್ಯ ಶ್ರೀಗಳು ನಿರಂತರವಾಗಿ ಶ್ರಮಿಸುತ್ತಿರುವುದು ಮೆಚ್ಚುಗೆಯ ಸಂಗತಿ’ ಎಂದು ತಿಳಿಸಿದರು.
ಶಾಸಕ ಡಿ.ಎಸ್.ಸುರೇಶ್, ‘ಸರ್ಕಾರ ಮದ್ಯಪಾನ ನಿಷೇಧಿಸದಿದ್ದರೂ ನಾವೆಲ್ಲರೂ ಮದ್ಯ ಸೇವನೆಯಿಂದ ದೂರವಿದ್ದಲ್ಲಿ ನಾಡು ಮದ್ಯ ಮುಕ್ತವಾಗಲು ಸಾಧ್ಯ’ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ‘ಪಾರದರ್ಶಕವಾಗಿ ಚುನಾವಣೆ ಮಾಡಲು ಸಿರಿಗೆರೆ ಮಠ ದೊಡ್ಡ ಹೆಜ್ಜೆ ಇಟ್ಟಿದೆ. ಮದ್ಯ ನಿಷೇಧದ ಪ್ರಯತ್ನದಿಂದ ಎಂದೂ ಹಿಂದೆ ಸರಿಯಬಾರದು’ ಎಂದು ತಿಳಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಮತ್ತೆ ಕಲ್ಯಾಣ ಕಾಣುವುದೇ ಇಲ್ಲಿನ ಚಿಂತನ ಉದ್ದೇಶ. ಕೇವಲ 18 ರಿಂದ 35 ರೊಳಗಿನವರನ್ನು ವಯಸ್ಸಿನ ಆಧಾರದ ಮೇಲೆ ಯುವ ಪೀಳಿಗೆ ಎನ್ನುವುದು ತಪ್ಪು. ಯಾರಲ್ಲಿ ಉತ್ಸಾಹ, ಚೈತನ್ಯಶೀಲ ಮನಸ್ಸು ಇದ್ದವರೆಲ್ಲರೂ ಯುವಪೀಳಿಗೆಯ ವರ್ಗಕ್ಕೆ ಸೇರುತಾರೆ’ ಎಂದರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ನೇತೃತ್ವ ವಹಿಸಿದ್ದ ನಾಗನೂರು- ಬೆಳಗಾವಿ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು.
ಎಸ್.ಜಿ.ಸಿದ್ದರಾಮಯ್ಯ ಅವರ ‘ಕ್ರಾಂತಿಯ ಹೆಜ್ಜೆಗಳು’ ಕೃತಿ ಲೋಕಾರ್ಪಣೆಗೊಂಡಿತು. ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯ ರೂಪಕ ನೀಡಿದರು. ಕೆ.ವಿ.ಶಂಕರೇಗೌಡ ರಚನೆ, ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಪಾದುಕ ಕಿರೀಟ ನಾಟಕವನ್ನು ಮಂಡ್ಯದ ಜನದನಿ ತಂಡದವರು ಅಭಿನಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.