ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಸಾಗರಕ್ಕೆ ಭದ್ರಾ ನೀರು ಸ್ಥಗಿತ

ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಬೇಸರ, ಹತಾಶೆ
Last Updated 5 ಜನವರಿ 2021, 7:31 IST
ಅಕ್ಷರ ಗಾತ್ರ

ಹಿರಿಯೂರು: ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಹರಿಸುತ್ತಿದ್ದ ನೀರನ್ನು ಜ.2ರಿಂದ ಸ್ಥಗಿತಗೊಳಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಸೂಚನೆಯ ಮೇರೆಗೆ ವಿಶ್ವೇಶ್ವರಯ್ಯ ಜಲ ನಿಗಮ ನೀರು ಹರಿಸುವುದನ್ನು ನಿಲ್ಲಿಸಿದೆ.

2021ರ ಮಾರ್ಚ್ ಅಂತ್ಯದವರೆಗೆ ಭದ್ರಾ ಮೇಲ್ದಂಡೆ ನೀರು ವಾಣಿವಿಲಾಸ ಜಲಾಶಯಕ್ಕೆ ಹರಿದು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಲ್ಲಿ ಬೇಸರ, ಹತಾಶೆ ಮೂಡಿದೆ.

ಭದ್ರಾ ಮೇಲ್ದಂಡೆಯ ಮುಖ್ಯ ಕಾಲುವೆ ಮೂಲಕ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರು. ಜ.2ರಂದು ನೀರು ನಿಲುಗಡೆ ಮಾಡಿದ್ದರೂ ವಿ.ವಿ.ಸಾಗರಕ್ಕೆ ನೀರು ಹರಿದುಬರುತ್ತಿದೆ. ಇನ್ನೂ ಎರಡು ದಿನಗಳ ಬಳಿಕ ನೀರು ಸಂಪೂರ್ಣ ಸ್ಥಗಿತಗೊಳ್ಳಲಿದೆ.

ನೀರು ನಿಲುಗಡೆಗೆ ಸಂಬಂಧಿಸಿದಂತೆ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ‍ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾಗಿತ್ತು. ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆಬೇಸಿಗೆ ಬೆಳೆಗೆ ನೀರು ಉಳಿಸಿಕೊಳ್ಳುವ ಅಗತ್ಯ ಇರುವುದರಿಂದ ವಿ.ವಿ.ಸಾಗರಕ್ಕೆ ಹರಿಸುವ ನೀರು ಸ್ಥಗಿತಗೊಳಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೆ. 6ರಿಂದ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ನಿತ್ಯ ಸರಾಸರಿ 500 ಕ್ಯುಸೆಕ್‌ ನೀರು ವಿ.ವಿ.ಸಾಗರದ ಒಡಲು ಸೇರುತ್ತಿತ್ತು.ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸೋಮವಾರ 105.95 ಅಡಿ ನೀರಿನ ಸಂಗ್ರಹವಾಗಿದೆ. 30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 12.29 ಟಿಎಂಸಿ ಅಡಿ ನೀರು ಇದೆ. ಪ್ರಸ್ತುತ ವರ್ಷ ಮಳೆಯದ್ದೂ ಸೇರಿ 6.50 ಟಿಎಂಸಿ ಅಡಿ ನೀರು ಹರಿದು ಬಂದಿದೆ.

ವಿ.ವಿ.ಸಾಗರಕ್ಕೆ ಭದ್ರಾ ಜಲಾಶಯದ ನೀರು ಹರಿಸುವುದಕ್ಕೆ 2019ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಮೂರು ತಿಂಗಳು ನೀರು ಹರಿದ ಪರಿಣಾಮಜಲಾಶಯದಲ್ಲಿ 102.60 ಅಡಿ ನೀರಿತ್ತು (10.47 ಟಿಎಂಸಿ ಅಡಿ). ಏಪ್ರಿಲ್ 23ರಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ ಮತ್ತು ಮೊಳಕಾಲ್ಮುರು ಕ್ಷೇತ್ರಗಳಿಗೆ ನೀರು ಹರಿಸಲಾಗಿತ್ತು. ಜಲಾಶಯದ ಎಡ ಮತ್ತು ಬಲದಂಡೆ ನಾಲೆಯ ಮೂಲಕ ಸಮುದ್ರದಹಳ್ಳಿ, ಕುಂದಲಗುರ ಬ್ಯಾರೇಜ್‌ಗಳು, ಮಸ್ಕಲ್, ಅಂಬಲಗೆರೆ, ಬಿದರಕೆರೆ ಕೆರೆಗಳಿಗೆ ನೀರು ಹರಿಸಲಾಯಿತು. ಇದರಿಂದ ಜಲಾಶಯದ ನೀರಿನ ಮಟ್ಟ 86 ಅಡಿಗೆ ಕುಸಿದಿತ್ತು.

‘ಭದ್ರೆಯಿಂದ 6.5 ಟಿಎಂಸಿ ಅಡಿ ನೀರು ಮಾತ್ರ ಹರಿದು ಬಂದಿದೆ. ಮಾರ್ಚ್ ಅಂತ್ಯದವರೆಗೆ ನಮ್ಮ ಪಾಲಿನ ಬಾಕಿ ಇರುವ ನೀರು ಪಡೆದಿದ್ದರೆ ಜಲಾಶಯದ ನೀರಿನ ಮಟ್ಟ 110 ಅಡಿಗೆ ತಲುಪುತ್ತಿತ್ತು. ಜಿಲ್ಲೆಯಲ್ಲಿ ನೀರಿಗಾಗಿ ನಡೆಯುತ್ತಿದ್ದ ವಾದ–ವಿವಾದಗಳು ತಣ್ಣಗಾಗುತ್ತಿದ್ದವು’ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT