ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತದೆಡೆಗೆ ನಡೆದ ಅವಧೂತ

ಬೆಲಗೂರು ಮಾರುತಿ ಪೀಠದ ಅವಧೂತ ಬಿಂದು ಮಾಧವಶರ್ಮ ಸ್ವಾಮೀಜಿ
Last Updated 28 ನವೆಂಬರ್ 2020, 6:19 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬೆಲಗೂರಿನ ಮಾರುತಿ ಪೀಠದ ರೂವಾರಿ, ತ್ರಿವಿಧ ದಾಸೋಹಿ ಅವಧೂತ ಬಿಂದು ಮಾಧವ ಶರ್ಮ ಸ್ವಾಮೀಜಿ ಅವರಿಗೆ ಸುಮಾರು ಒಂದೂವರೆ ವರ್ಷದಿಂದ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಭಕ್ತರ ಧಾರ್ಮಿಕ ಕಾರ್ಯಕ್ಕೆ ತೆರಳುವುದು ಹಾಗೂ ಪ್ರವಾಸವನ್ನು ಸಂಪೂರ್ಣ ನಿಲ್ಲಿಸಿದ್ದರು. ಅವರು ಅಗಲಿದ ಸುದ್ದಿ ತಿಳಿಯುತ್ತಿದ್ದಂತೆ ಬೆಲಗೂರು ಗ್ರಾಮ ಮೌನಕ್ಕೆ ಶರಣಾಯಿತು.

ವೀರಪ್ರತಾಪ ಆಂಜನೇಯಸ್ವಾಮಿ, ಲಕ್ಷ್ಮೀನಾರಾಯಣಸ್ವಾಮಿ ಆರಾಧಕರಾಗಿದ್ದ ಬಿಂದು ಮಾಧವ ಶರ್ಮ ಸ್ವಾಮೀಜಿ ಅವರ ದೃಷ್ಟಿ ಬಿದ್ದರೆ ಕಷ್ಟ ಪರಿಹಾರ ಆಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಸುಮಾರು ಐದು ದಶಕಗಳಿಂದಲೂ ಇಲ್ಲಿನ ಮಾರುತಿಯ ಮಹಿಮೆ ಬಗ್ಗೆ ಭಕ್ತರಿಗೆ ಮನವರಿಕೆ ಮಾಡಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದರು.

ಶಂಕರಾಚಾರ್ಯರ ತತ್ವ ಹಾಗೂ ಹಿಂದೂ ಧರ್ಮ ಪ್ರಚಾರ, ಮತಾಂತರ ತಡೆ, ಗೋಹತ್ಯೆ ನಿಷೇಧ ಸೇರಿ ಇನ್ನಿತರ ಸಮಾಜದ ಅಭಿವೃದ್ಧಿ ಪರ ಊರೂರು ಸುತ್ತಿ ಜಾಗೃತಿ ಮೂಡಿಸಿದ್ದರು. ಮಾರುತಿ ಪೀಠ ಹಾಗೂ ಸಮಾಜದ ಏಳಿಗೆಗಾಗಿ ಜೋಳಿಗೆ ಹಿಡಿದ ಅವರು ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು.

ಅವರ ಸೇವಾ ಕಾರ್ಯ ಹಾಗೂ ಪವಾಡದ ಬಗ್ಗೆ ನಂಬಿಕೆ ಹೆಚ್ಚಾಗಿದ್ದರಿಂದ ಸ್ವಾಮೀಜಿ ಅವರನ್ನು ಮಾನವ ರೂಪದ ಭಗವಂತ ಎಂದು ಕರೆಯುತ್ತಿದ್ದರು. ಆದರೆ, ಸ್ವಾಮೀಜಿ ‘ನಾನು ದೇವರಲ್ಲ. ಮನುಕುಲದ ಸೇವೆ ಮಾಡಲು ಆಂಜನೇಯ ಕಳಿಸಿರುವ ಮಾನವ’ ಎಂದು ಹೇಳುತ್ತಿದ್ದರು.

ಅವರು ನುಡಿದಂತೆ ಇಷ್ಟಾರ್ಥಗಳು ಸಿದ್ದಿಸುತ್ತಿದ್ದರಿಂದ ಸಾಕಷ್ಟು ನೆರವು ಭಕ್ತರಿಂದ ಹರಿದು ಬರತೊಡಗಿತ್ತು. ಜಗತ್ತಿಗೆ ಮಾದರಿಯಾದ ಕೋಟಿರುದ್ರ ಜಪಯಜ್ಞ ಕಾರ್ಯಕ್ರಮ ನಡೆಸಿದ್ದರಿಂದ ಬೆಲಗೂರು ಗ್ರಾಮದ ಮೂಲಸ್ವರೂಪ ಬದಲಾಯಿತು. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಶನಿವಾರ, ಶ್ರಾವಣಮಾಸ, ಹನುಮಜಯಂತಿ ಸೇರಿ ಇನ್ನಿತರ ಧಾರ್ಮಿಕ ಪೂಜಾ ಕಾರ್ಯಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಿದ್ದರು.

ಅವಧೂತ ಬಿಂದು ಮಾಧವ ಶರ್ಮ ಸ್ವಾಮೀಜಿ ಅವರ ಶ್ರಮದ ಫಲವಾಗಿ ಕೋಟ್ಯಂತರ ವೆಚ್ಚದಲ್ಲಿ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ, ಮಾನಸ ಮಂದಿರ, ಅನ್ನಪೂರ್ಣೋಶ್ವರಿ ದಾಸೋಹ ಮಂದಿರ, ಭಾರತಿ ತೀರ್ಥ ಸಭಾ ಭವನ, ಮಹಾಲಕ್ಷ್ಮೀ ದೇಗುಲ, ನಾಡಿಗೆ ಮಾದರಿಯಾದ ಭಾರತ ರಥ ನಿರ್ಮಾಣ ಸೇರಿ ಹತ್ತು ಹಲವು ಭವ್ಯವಾದ ಕಟ್ಟಡಗಳು ನಿರ್ಮಾಣಗೊಂಡಿವೆ. ಗ್ರಾಮದೇವತೆ ಹೊನ್ನಾಂಬಿಕೆ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗಣಪತಿ ತೋಟದಲ್ಲಿ ಭವ್ಯವಾದ ಆಂಜನೇಯ ರಥ ನಿರ್ಮಾಣ ಮಾಡಬೇಕು ಎಂಬ ಯೋಜನೆಯನ್ನು ರೂಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT