ಬುಧವಾರ, ಜನವರಿ 20, 2021
16 °C

ಬಡವರ ಪಾಲಿನ ಕಿಂದರಿಜೋಗಿ ‘ಬಿಂದು’

ಲೋಕೇಶ್‌ ಅಗಸನಕಟ್ಟೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸದ್ಗುರು, ಬಡವರ ಬಂಧು, ಅವಧೂತ, ದೇವಮಾನವ ಹಾಗೂ ಆಂಜನೇಯನ ಪ್ರತಿರೂಪ ಎಂಬೆಲ್ಲ ವಿಶೇಷಣಗಳಿಂದ ಕರೆಸಿಕೊಳ್ಳುತ್ತಿದ್ದ ಬಿಂದು ಮಾಧವ ಶರ್ಮ ಸ್ವಾಮೀಜಿ ಹಲವು ದಶಕಗಳಿಂದ ಚಿತ್ರದುರ್ಗದ ಮನೆ ಮಾತಾಗಿದ್ದರು. ಕುಗ್ರಾಮವಾಗಿದ್ದ ಬೆಲಗೂರಿಗೆ ಜಾತ್ಯತೀತ ಹಾಗೂ ಬಡವರ ಪರವಾದ ಪ್ರೀತಿ, ಅನುಕಂಪ ಮತ್ತು ಕರುಣೆಯನ್ನು ಧಾರೆ ಎರೆದವರು. ಅವರ ಅಗಲಿಕೆ ಲಕ್ಷಾಂತರ ಭಕ್ತರನ್ನು ಅನಾಥರನ್ನಾಗಿಸಿದೆ.

ಅವಧೂತರ ಪೂರ್ವಿಕರು ಹಿಮಾಲಯದ ಗಂಗಾ ನದಿಯ ತಪ್ಪಲಿನಿಂದ ದಕ್ಷಿಣಕ್ಕೆ ವಲಸೆ ಬಂದು ಕಾಶಿ ಮತ್ತು ಪುಣೆಯಲ್ಲಿ ನೆಲೆಸಿದ್ದರು. ಅರ್ಚನೆ ಹಾಗೂ ಆರಾಧನಾ ವೃತ್ತಿಯನ್ನು ನಂಬಿಕೊಂಡಿದ್ದರು. ಅವಧೂತರ ಅಜ್ಜ ಬೆಲಗೂರಿಗೆ ಬಂದು ಲಕ್ಷ್ಮೀನಾರಾಯಣ ದೇವರ ಅರ್ಚಕರಾಗಿದ್ದರು.

ವಿಜಯನಗರ ಕಾಲದಲ್ಲಿ ಸ್ಥಾಪಿತವಾಗಿ ಪಾಳುಬಿದ್ದಿದ್ದ ಆಂಜನೇಯಗುಡಿಯ ಜೀರ್ಣೋದ್ಧಾರ ಮಾಡುವ ಮೂಲಕ ಅಧ್ಯಾತ್ಮದ ಬದುಕನ್ನು ಆರಂಭಿಸಿದ ಬಿಂದು ಮಾಧವರು ಕಾಲಾನಂತರ ಆಂಜನೇಯಸ್ವಾಮಿಯನ್ನು ಆವಾಹನೆ ಮಾಡಿಕೊಂಡರೆಂಬುದು ಪ್ರತೀತಿ. ಅದರ ಫಲವಾಗಿಯೋ ಏನೋ ಹಲವು ಪವಾಡ ಸದೃಶ್ಯ ಘಟನೆಗಳಿಗೂ ಅವರು ಕಾರಣೀಭೂತರಾದರು. ಜನರು ಅವರನ್ನು ಆಂಜನೇಯನ ಪ್ರತಿರೂಪವೆಂದೇ ಭಾವಿಸಿದ್ದರು.

ಬಾಲ್ಯದಲ್ಲಿ ಅನುಭವಿಸಿದ ಬಡತನ, ಹಸಿವು ಅವಮಾನಗಳ ಕಾರಣದಿಂದ ಬಡವರೆಂದರೆ ಅವರಿಗೆ ಅಕ್ಕರೆ. ಬಡವರ ಸಂಕಷ್ಟಕ್ಕೆ ಸದಾ ಸಹಾಯಹಸ್ತ ಚಾಚುತ್ತಿದ್ದರು. ಅವರನ್ನು ಬಡವರ ಬಂಧು ಎಂದೇ ಕರೆಯುತ್ತಿದ್ದರು. ಉಳ್ಳವರು ನೀಡಿದ ದೇಣಿಗೆಯಲ್ಲ ಬಡವರ ಪಾಲಿಗೆ. ಆದುದರಿಂದ ಅವರ ಸುತ್ತಾ ಬಡವರು, ನಿರ್ಗತಿಕರು ಹಾಗೂ ಸಮಾಜದ ಜನರೇ ತುಂಬಿರುತ್ತಿದ್ದರು.

ಹುಟ್ಟಿದ್ದು ವೈದಿಕರಾಗಿಯಾದರೂ ಸದಾ ಅದನ್ನು ಮೀರುವುದರಲ್ಲಿ ಅವರು ಹಿಂದೆ ಬೀಳುತ್ತಿರಲಿಲ್ಲ. ಯಾವಾಗಲೂ ‘ಈ ಜಾತಿಗೆ ಮೆಟ್ಟಾಕ’ ಎಂದೇ ನುಡಿಯುತ್ತಿದ್ದ ಅವರು ಅದನ್ನು ನಡೆಯಲ್ಲೂ ತಂದರು. ವೈದಿಕರಲ್ಲಿರುವ ಹಲವು ಮತ–ಸಂಪ್ರದಾಯದವರನ್ನು ಒಳಗೊಳ್ಳದೇ ಅವರ ರೀತಿ, ರಿವಾಜುಗಳನ್ನು, ಮಡಿ–ಮೈಲಿಗೆ ಹಾಗೂ ಆಹಾರ ಪದ್ಧತಿಯನ್ನು ಬದಲಿಸುಷ್ಟು ಪ್ರಭಾವಶಾಲಿಯಾಗಿದ್ದರು. ಹಾಗೆ ನೋಡಿದರೆ ಬಡವರ ಪಾಲಿನ ಕಿಂದರಿಜೋಗಿ ಕಣ್ಮರೆಯಾಗಿ ಹೋಗಿದ್ದು ತುಂಬಲಾರದ ನಷ್ಟವೇ ಸರಿ.

ಇತ್ತೀಚೆಗೆ ಅವರು ನಿರ್ಮಿಸಿದ ‘ಭರತ ರಥ’ ಭಾರತದಲ್ಲೇ ಅಪರೂಪದ ರಥ. ಹಿಂದಿನ ಹಾಗೆ ಮಿಥುನ ಶಿಲ್ಪಗಳ ಬದಲು ವಿಜ್ಞಾನಿಗಳು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು ಹಾಗೂ ಸಿನಿಮಾ ನಟರನ್ನು ಒಳಗೊಂಡ ಅಪರೂಪದ ರಥ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅದರಲ್ಲಿ ಶಂಕರಾಚಾರ್ಯರೂ ಇದ್ದಾರೆ. ಅಂಬೇಡ್ಕರ್‌ ಅವರೂ ಇದ್ದಾರೆ. ಇಂತಹ ಜಾತ್ಯತೀತ ಮಾನವೀಯ ಮನಸ್ಸು ಅವರದಾಗಿತ್ತು.

ಬಡವರಿಗಾಗಿ ಅವರು ನೀಡದ ವಸ್ತು–ಒಡವೆಗಳಿಲ್ಲ. ಭಜನೆ ಮಾಡುವವರಿಂದ ಹಿಡಿದು ತೋಟದಲ್ಲಿ ಕೆಲಸ ಮಾಡುವವನಿಗೂ, ಶ್ರೀಮಂತಿಕೆಯ ಅಧಿಕಾರಸ್ಥರಿಗೂ ಒಂದೇ ಸ್ಥಾನ. ಸಮಾನತೆ ಎಂಬ ಪಾಠವನ್ನು ಅವರು ಪ್ರಯೋಗಕ್ಕೆ ಇಳಿಸಿದ್ದರು.

ಶೃಂಗೇರಿ ಸ್ವಾಮೀಜಿ ಶಿಷ್ಯರಾಗಿದ್ದ ಇವರು ರಾಜ್ಯದ ಎಲ್ಲ ಜಾತಿಯ ಮಠಾಧೀಶರೊಂದಿಗೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದರು. ಕೋಟಿ ರುದ್ರಯಾಗದ ಮೂಲಕ ಅವರು ಹೊಸ ದಾಖಲೆಯೊಂದನ್ನು ಬರೆದರೆಂಬುದು ಹೇಗೆ ನಿಜವೋ ಆ ಯಾಗದಲ್ಲಿ ದಲಿತ ಸ್ವಾಮೀಜಿಯೊಬ್ಬರನ್ನು ಕರೆತಂದು ಕೂರಿಸಿ ಸನ್ಮಾನ ಮಾಡಿದ್ದು ದೊಡ್ಡ ದಾಖಲೆಯೇ ಸರಿ.

ಅಪಾರ ವಿದ್ವತ್ತು, ಅಷ್ಟಸಿದ್ಧಿಗಳನ್ನು ಸಾಧಿಸಿಕೊಂಡಿದ್ದ ಅವರದ್ದು ಅಪರೋಕ್ಷ ಜ್ಞಾನವಾಗಿತ್ತು. ಅವರು ನುಡಿದದ್ದೆಲ್ಲ ಸತ್ಯವೂ, ನಿಜವೂ ಆಗುತ್ತಿತ್ತು. ವೇದ–ವೇದಾಂತ ಅವರಿಗೆ ಕರತಲಾಮಲಕವಾಗಿತ್ತು. ಶಾಲೆ–ಕಾಲೇಜುಗಳನ್ನು ತೆರೆಯದೆ ಅವರೇ ಒಂದು ಜೀವನ ಶಾಲೆಯಾಗಿದ್ದರು. ನೊಂದು ಬಂದವರಿಗೆ ಅವರು ನೀಡುತ್ತಿದ್ದ ಸಾಂತ್ವನ ಹಾಗೂ ಭರವಸೆಯ ಮಾತುಗಳೇ ಜೀವನಾರ್ಥವಾಗಿರುತ್ತಿದ್ದವು. ನೂರೊಂದು ಮರಗಳಿಗೆ ಆಶ್ರಯ ನೀಡಿದ್ದ ಆಲದ ಮರವೊಂದು ಉರುಳಿ ಬಿದ್ದಿದೆ. ಮರಬಿಟ್ಟು ಹಾರಿದ ಹಕ್ಕಿಗಳಿಗೆ ಇನ್ನಾರು ಆಶ್ರಯ ನೀಡುವರು ಎಂಬ ಪ್ರಶ್ನೆಯನ್ನು ಅವರು ಉಳಿಸಿ ಹೋಗಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು