ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳ ಹಾಜರಾತಿಗೆ ಬಯೊಮೆಟ್ರಿಕ್ : ರಾಜ್ಯದಲ್ಲೇ ಎಸ್‍ಟಿಜೆ ಶಾಲೆ ಪ್ರಥಮ

ಹಿರೇಕೋಗಲೂರಿನ ಶಿಕ್ಷಕರು ತಂತ್ರಜ್ಞಾನದ ಜತೆ ಹೆಜ್ಜೆ ಬಯೊಮೆಟ್ರಿಕ್
Last Updated 5 ಜುಲೈ 2019, 20:15 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸಮೀಪದ ಹಿರೇಕೋಗಲೂರಿನ ಎಸ್‍ಟಿಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ಬಯೊಮೆಟ್ರಿಕ್ ಸಾಧನ ಅಳವಡಿಸುವ ಮೂಲಕ ಶಿಕ್ಷಕರು ತಂತ್ರಜ್ಞಾನದ ಜತೆ ಹೆಜ್ಜೆ ಇಟ್ಟಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿಯೇ ಹಾಜರಾತಿಗೆ ಬಯೊಮೆಟ್ರಿಕ್ ಬಳಕೆ ಮಾಡುತ್ತಿರುವ ಮೊದಲ ಶಾಲೆ ಇದಾಗಿದೆ. ಪಾರಂಪರಿಕ ಹಾಜರಾತಿ ಪದ್ಧತಿಯಲ್ಲಿ ಹೆಸರು ಕೂಗಿದಾಗ ‘ಯೆಸ್ ಸಾರ್’ ಎನ್ನುವ ದನಿಗೆ ತೆರೆಬಿದ್ದಿದೆ. ಹೆಬ್ಬೆಟ್ಟು ಎಂದು ಅನಕ್ಷರಸ್ಥರಿಗೆ ಅನ್ವರ್ಥವಾಗಿ ಕರೆಯುತ್ತಿದ್ದ ಪದವೇ ಈಗ ಆಧುನಿಕ ತಂತ್ರಜ್ಞಾನದ ಪ್ರತೀಕವಾಗಿದೆ. ಮುಖ್ಯಶಿಕ್ಷಕ ಎಂ.ಬಿ.ಪ್ರಭಾಕರ್ ಅವರ ಪ್ರಯತ್ನದ ಫಲ ಇದು.

ಶಾಲೆಗೆ ಬಂದ ಕೂಡಲೇ ವಿದ್ಯಾರ್ಥಿಗಳು ಬಯೊಮೆಟ್ರಿಕ್‌ನಲ್ಲಿ ತಮ್ಮ ಹಾಜರಾತಿ ದಾಖಲಿಸುತ್ತಾರೆ. ಮನೆಗೆ ಮರಳುವಾಗ ಮತ್ತೊಮ್ಮೆ ಹೆಬ್ಬೆಟ್ಟು ಅಚ್ಚೊತ್ತುವ ಮೂಲಕ ಹಾಜರಾತಿ ದೃಢಪಡಿಸುತ್ತಾರೆ. ಒಟ್ಟು ಮೂರು ಸಾಧನಗಳನ್ನು ಬೇರೆ ಬೇರೆ ಕೊಠಡಿಗಳಲ್ಲಿ ಅಳವಡಿಸಲಾಗಿದೆ. ಲೋಕಲ್ ಏರಿಯಾ ನೆಟ್‌ವರ್ಕ್‌ ತಂತ್ರಾಂಶದ ಮೂಲಕ ಕಂಪ್ಯೂಟರ್‌ಗೆ ಸಂಪರ್ಕಿಸಲಾಗಿದೆ. ವಿದ್ಯಾರ್ಥಿಗಳ ಹೆಸರಿನೊಂದಿಗೆ ಮುದ್ರಿತ ಬೆರಳು ಗುರುತುಗಳನ್ನು ಉಳಿಸಲಾಗಿದೆ. ಹಾಜರಾತಿ ದಾಖಲಾಗುತ್ತದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎಂ.ಬಿ.ಪ್ರಭಾಕರ್.

ಇದರಿಂದ ಸಮಯದ ಉಳಿತಾಯದ ಜತೆಯಲ್ಲಿ ಶೇ 99ರಷ್ಟು ಮಕ್ಕಳ ಹಾಜರಾತಿ ಇದೆ. ಒಟ್ಟು 265 ವಿದ್ಯಾರ್ಥಿಗಳು ಬಯೊಮೆಟ್ರಿಕ್ ಸಾಧನ ಬಳಸುತ್ತಾರೆ. ಕಂಪ್ಯೂಟರ್ ಹೊರತುಪಡಿಸಿ ಬಯೊಮೆಟ್ರಿಕ್ ಸಾಧನಗಳಿಗೆ ₹ 35,000 ಖರ್ಚಾಗಿದೆ. ಪೋಷಕರು, ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಕರ ಆರ್ಥಿಕ ನೆರವಿನಿಂದ ಹೊಸ ಪ್ರಯೋಗ ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಕರಾದ ಜಗದೀಶ್ ಹಾಗೂ ಎಚ್.ಕೃಷ್ಣ.

**

ಕೆಲವು ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ, ಸಿಬ್ಬಂದಿಗೆ ಬಯೊಮೆಟ್ರಿಕ್‌ ಸಿಸ್ಟಂ ಜಾರಿಗೆ ತಂದಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಈ ಪದ್ಧತಿ ಎಲ್ಲೂ ಇರುವ ಬಗ್ಗೆ ಮಾಹಿತಿ ಇಲ್ಲ. ಹಿರೇಕೋಗಲೂರು ಶಾಲೆ ಈ ಸಾಧನೆ ಮಾಡಿದೆ.
- ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT