ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜೂನ್‌ನಲ್ಲಿ ಜನನಕ್ಕಿಂತ ಸಾವು ಅಧಿಕ

ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಮರಣ ಮೃದಂಗ
Last Updated 19 ಆಗಸ್ಟ್ 2021, 14:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಕೋವಿಡ್‌ ಮರಣ ಮೃದಂಗ ಬಾರಿಸಿದೆ ಎಂಬುದು ಜನನ ಮತ್ತು ಮರಣ ದಾಖಲೆಯಿಂದ ಬಹಿರಂಗವಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ಜನನದಷ್ಟೇ ಮರಣ ಹಾಗೂ ಜೂನ್‌ ತಿಂಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಹೆಚ್ಚಾಗಿದೆ.

ಕೋವಿಡ್‌ ಮರಣವನ್ನು ಸರ್ಕಾರ ಮರೆಮಾಚುತ್ತಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಆರೋಗ್ಯ ಇಲಾಖೆ ನೀಡಿದ ಸಾವಿನ ಸಂಖ್ಯೆಗೂ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದ ಶವಗಳ ಸಂಖ್ಯೆಗೂ ತಾಳೆ ಆಗಿಲ್ಲ. ಕೋವಿಡ್‌ ಪಟ್ಟಿಗೆ ಸೇರದ ಹಲವು ಸಾವುಗಳು ಸಂಭವಿಸಿರುವುದು ನಗರಸಭೆ ನೀಡಿದ ಅಂಕಿ–ಅಂಶಗಳಿಂದ ದೃಢಪಟ್ಟಿದೆ.

2020ರ ಮಾರ್ಚ್‌ನಿಂದ ಈವರೆಗೆ ಕೋವಿಡ್‌ಗೆ ಜಿಲ್ಲೆಯಲ್ಲಿ 203 ಜನ ಬಲಿಯಾದ್ದಾರೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಕೊರೊನಾ ಸೋಂಕು ತಗುಲುವ ಪ್ರಮಾಣ ಜಿಲ್ಲೆಯಲ್ಲಿ ಈಗಲೂ ಶೇ 0.36ರಷ್ಟಿದೆ. ಮರಣ ಪ್ರಮಾಣ ಶೇ 0.5ನ್ನೂ ದಾಟಿಲ್ಲ. ರಾಜ್ಯದಲ್ಲಿಯೇ ಅತಿ ಕಡಿಮೆ ಕೋವಿಡ್‌ ಮರಣ ಜಿಲ್ಲೆಯಲ್ಲಿ ಸಂಭವಿಸಿದೆ ಎನ್ನಲಾಗುತ್ತಿದೆ. ಕೋವಿಡ್‌ಗೂ ಹೊರತಾಗಿ ಯಾವ ಕಾಯಿಲೆಗೆ ಇಷ್ಟು ಜನ ಪ್ರಾಣತೆತ್ತರು ಎಂಬುದು ಇನ್ನೂ ನಿಗೂಡವಾಗಿ ಉಳಿದಿದೆ.

ಜನನ ಮತ್ತು ಮರಣ ಹೊಂದಿದವರ ವಿವರವನ್ನು ದಾಖಲು ಮಾಡಬೇಕು ಎಂಬುದು ಸರ್ಕಾರದ ನಿಯಮ. ಗ್ರಾಮೀಣ ಪ್ರದೇಶದಲ್ಲಿ 1,160 ನೋಂದಣಿ ಘಟಕ ಹಾಗೂ ನಗರ ಪ್ರದೇಶದಲ್ಲಿ 12 ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಮಗು ಜನಿಸಿದ ಅಥವಾ ವ್ಯಕ್ತಿಯೊಬ್ಬರು ಮರಣ ಹೊಂದಿದ 21 ದಿನಗಳ ಒಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ಇಲ್ಲವಾದರೆ ತಹಶೀಲ್ದಾರ್‌ ಅಥವಾ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ.

2020ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 3,748 ಜನನ ಮತ್ತು 11,680 ಮರಣ ನೋಂದಣಿಯಾಗಿವೆ. ನಗರ ಪ್ರದೇಶದಲ್ಲಿ 17,879 ಜನನ, 3,943 ಮರಣ ನೋಂದಣಿಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಜನನ ಪ್ರಮಾಣ ಶೇ 14 ಹಾಗೂ ಮರಣ ಪ್ರಮಾಣ ಶೇ 9ರಷ್ಟು ದಾಖಲಾಗಿದೆ. ಕೊರೊನಾ ಸೋಂಕು ಹೆಚ್ಚಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ಸಾವಿನ ಪ್ರಮಾಣ ಆತಂಕಕ್ಕೀಡು ಮಾಡುವಂತಿದೆ.

ಸಾಂಸ್ಥಿಕ ಹೆರಿಗೆ ಹೆಚ್ಚಾಗುತ್ತಿರುವುದರಿಂದ ಜನನ ಸರಿಯಾಗಿ ದಾಖಲಾಗುತ್ತಿದೆ. ತಾಯಿ ಹೆಸರಿನಲ್ಲಿ ಶಿಶು ನೋಂದಣಿ ಮಾಡಲಾಗುತ್ತದೆ. ನಾಮಕರಣದ ಬಳಿಕ ಶಿಶುವಿನ ಹೆಸರಿನಲ್ಲಿಯೇ ಜನನ ಪ್ರಮಾಣ ಪತ್ರವನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಮರಣದ ದಾಖಲಾತಿ ಮಾತ್ರ ಸರಿಯಾಗಿ ನಡೆಯುತ್ತಿಲ್ಲ. ಆಸ್ಪತ್ರೆಯಲ್ಲಿ ಮೃತಪಟ್ಟ ಹಾಗೂ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದವರ ಮರಣ ಮಾತ್ರ ದಾಖಲಾಗುತ್ತಿದೆ.

ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ನೂರಕ್ಕಿಂತ ಕಡಿಮೆ ಜನರು ಚಿತ್ರದುರ್ಗ ನಗರದಲ್ಲಿ ಮೃತಪಟ್ಟಿದ್ದಾರೆ. ಸೋಂಕು ಉತ್ತುಂಗದಲ್ಲಿದ್ದ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಮರಣ ಹೊಂದಿದವರ ಸಂಖ್ಯೆ ಹೆಚ್ಚು. ಜೂನ್‌ ತಿಂಗಳಲ್ಲಿ ಸೋಂಕು ಕಡಿಮೆಯಾದರೂ ನೋಂದಣಿ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹೆಚ್ಚು ಸಂಖ್ಯೆಯ ಜನರು ಮೃತಪಟ್ಟಿರುವಂತೆ ಕಾಣುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

***

ಆಸ್ಪತ್ರೆಯಲ್ಲಿ ಸಂಭವಿಸುವ ಮರಣ ದಾಖಲಾಗುತ್ತದೆ. ಮನೆಯಲ್ಲಿ ಮೃತಪಟ್ಟಿದ್ದರೆ ಏಳು ದಿನ ಕಾಲಾವಕಾಶವಿದೆ. ಮೇ ಮತ್ತು ಜೂನ್‌ ತಿಂಗಳಲ್ಲಿ ಕೋವಿಡ್‌ ಹೆಚ್ಚಾಗಿತ್ತು. ಹೀಗಾಗಿ ಮರಣ ಪ್ರಮಾಣ ಏರಿಕೆಯಾಗಿದೆ.

- ಜೆ.ಟಿ.ಹನುಮಂತರಾಜು,ಪೌರಾಯುಕ್ತ, ಚಿತ್ರದುರ್ಗ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT