ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ ಚುನಾವಣೆ: ಚಿತ್ರದುರ್ಗದಲ್ಲಿ ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿ

ಕೈಚೆಲ್ಲಿದ ಜೆಡಿಎಸ್‌, ಕಣದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ
Last Updated 25 ನವೆಂಬರ್ 2021, 2:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಿತ್ರದುರ್ಗ–ದಾವಣಗೆರೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಕಣ ನಾಮಪತ್ರ ಸಲ್ಲಿಕೆಯ ಬಳಿಕ ರಂಗೇರುತ್ತಿದೆ. ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ ನಡುವೆ ನೇರ ಹಣಾಹಣಿ ನಡೆಯುವುದು ಸ್ಪಷ್ಟವಾಗಿದೆ.

ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂದೇಶ ರವಾನಿಸಿದ್ದ ಜೆಡಿಎಸ್‌ ಅಂತಿಮ ಹಂತದಲ್ಲಿ ಕೈಚೆಲ್ಲಿದೆ. ಅಖಾಡದಲ್ಲಿ ಒಬ್ಬರೇ ಪಕ್ಷೇತರ ಅಭ್ಯರ್ಥಿ ಕಾಣುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಮತದಾರರು ಯಾರ ಕೈಹಿಡಿಯಬಹುದು ಎಂಬ ಕುತೂಹಲ ಕೆರಳಿದೆ.

ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು, ದಾವಣಗೆರೆ, ಹರಿಹರ ತಾಲ್ಲೂಕು ವಿಧಾನಪರಿಷತ್‌ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ಇದರ ಮತದಾರರು. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿರುವುದರಿಂದ ಮತಚಲಾವಣೆ ಹಕ್ಕು ರದ್ದಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5,070 ಮತದಾರರು ಇದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯೇ ಹೆಚ್ಚಾಗಿದ್ದು, ಇವರನ್ನು ಒಲಿಸಿಕೊಳ್ಳಲು ಎರಡೂ ಪಕ್ಷಗಳು ಮುಂದಾಗಿವೆ.

ಅನುಕಂಪ–ಪಕ್ಷದ ಬಲ: ವಿಧಾನಪರಿಷತ್‌ ಕ್ಷೇತ್ರ ವ್ಯಾಪ್ತಿಯಲ್ಲಿ 11 ಶಾಸಕರಿದ್ದಾರೆ. ಇದರಲ್ಲಿ ಬಿಜೆಪಿಯ ಎಂಟು ಹಾಗೂ ಕಾಂಗ್ರೆಸ್‌ ಪಕ್ಷವನ್ನು ಮೂವರು ಪ್ರತಿನಿಧಿಸುತ್ತಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಹಲವೆಡೆ ಅಧಿಕಾರ ಹಿಡಿದಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಹೆಚ್ಚು ಸದಸ್ಯರನ್ನು ಹೊಂದಿರುವುದಾಗಿ ಬಿಜೆಪಿ ಹೇಳಿಕೊಳ್ಳುತ್ತಿದೆ. ಚಿತ್ರದುರ್ಗ ಸಂಸದರೂ ಆಗಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಬಿಜೆಪಿಯರೇ ಆಗಿರುವುದರಿಂದ ಅಭ್ಯರ್ಥಿ ಹೆಚ್ಚು ವಿಶ್ವಾಸದಿಂದ ಇದ್ದಾರೆ.

ಕೆ.ಎಸ್‌.ನವೀನ್‌ ಅವರು 2013ರಲ್ಲಿ ನಡೆದ ಉಪಚುನಾವಣೆ ಹಾಗೂ 2016ರಲ್ಲಿ ನಡೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜಿ.ರಘು ಆಚಾರ್‌ ಎದುರು ಎರಡು ಬಾರಿ ಪರಾಭವಗೊಂಡಿದ್ದಾರೆ. ಅವರಿಗೆ ಪಕ್ಷ ಮೂರನೇ ಬಾರಿ ಅವಕಾಶ ಕಲ್ಪಿಸಿದೆ. ಎರಡು ಚುನಾವಣೆಯಲ್ಲಿ ಕಂಡಿರುವ ಸೋಲು ಅನುಕಂಪದ ಅಲೆಯಾಗಿ ರೂಪುಗೊಳ್ಳಬಹುದು ಎಂಬುದು ಅಭ್ಯರ್ಥಿಯ ನಿರೀಕ್ಷೆ. ಮತದಾರರ ಮನಕ್ಕೆ ಈ ಸಂದೇಶ ತಲುಪಿಸಲು ಬಿಜೆಪಿ ಮುಖಂಡರು ಇದನ್ನೇ ಉಚ್ಚರಿಸುತ್ತಿದ್ದಾರೆ.

ಆಡಳಿತ ವಿರೋಧಿ ಅಲೆ: ಚಿತ್ರದುರ್ಗ ಜಿಲ್ಲೆಯ ಒಬ್ಬರು ಹಾಗೂ ದಾವಣಗೆರೆ ಜಿಲ್ಲೆಯ ಇಬ್ಬರು ಕಾಂಗ್ರೆಸ್‌ ಶಾಸಕರೇ ಅಭ್ಯರ್ಥಿಗೆ ಬಲ. ಕೆಲ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ಹೆಚ್ಚು ಎಂಬ ವಾದವನ್ನು ನಾಯಕರು ಮುಂದಿಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡವರು, ಮಾಜಿ ಸಚಿವರು ಹಾಗೂ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲವಾಗಿ ನಿಂತಿದ್ದಾರೆ.

ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಜಿ.ರಘು ಆಚಾರ್‌ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ತುಮಕೂರಿನವರಾದ ಬಿ.ಸೋಮಶೇಖರ ಅವರಿಗೆ ಅವಕಾಶ ಒದಗಿಬಂದಿದೆ. ಹಲವುದಿನಗಳಿಂದ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅವರು ಹಲವೆಡೆ ಸಂಚರಿಸಿ ಮತದಾರರನ್ನು ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕ್ಷೇತ್ರದ ಹೊರಗಿನವರು ಎಂಬ ಬಿಜೆಪಿ ಅಸ್ತ್ರವನ್ನು ಎದುರಿಸಲು ಸಜ್ಜಾಗಿದ್ದಾರೆ.

ಕಣದಲ್ಲಿಲ್ಲ ಜೆಡಿಎಸ್ ಅಭ್ಯರ್ಥಿ

ವಿಧಾನಪರಿಷತ್‌ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದ ಜೆಡಿಎಸ್‌ ಪ್ರಸಕ್ತ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹಿರಿಯೂರು, ಚಿತ್ರದುರ್ಗ, ಹರಿಹರ ಸೇರಿ ಹಲವು ತಾಲ್ಲೂಕುಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ ಪ್ರಬಲ ಸ್ಪರ್ಧಿಯಾಗಿದೆ. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿಯೂ ಗಣನೀಯ ಪ್ರಮಾಣದ ಸದಸ್ಯರನ್ನು ಹೊಂದಿದೆ. ಅಭ್ಯರ್ಥಿ ಆಯ್ಕೆಗೆ ಸಭೆ ನಡೆಸಿದ ಪಕ್ಷದ ವರಿಷ್ಠರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿರುವುದು ಮತದಾರರಲ್ಲಿ ಕುತೂಹಲ ಮೂಡಿಸಿದೆ. ಇದರಿಂದ ಯಾವ ಪಕ್ಷದ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮಂಜುಳಾ ನಾಮಪತ್ರ ತಿರಸ್ಕೃತ

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಚಳ್ಳಕೆರೆಯಎಸ್‌.ಮಂಜುಳಾ ಎಂಬುವರ ನಾಮಪತ್ರ ತಿರಸ್ಕೃತಗೊಂಡಿದೆ. ಮೂವರು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಘೋಷಣೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಸಲು ನ.16ರಿಂದ 23ರವರೆಗೆ ಅವಕಾಶವಿತ್ತು. ನ.20ರಂದು ಹನುಮಂತಪ್ಪ ಹಾಗೂ ಬಿ.ಸೋಮಶೇಖರ್‌, ಕೆ.ಎಸ್‌.ನವೀನ್‌ ಹಾಗೂ ಎಸ್‌.ಮಂಜುಳಾ ಅವರು ಕೊನೆಯ ದಿನವಾದ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ಬುಧವಾರ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT