ಭಾನುವಾರ, ಡಿಸೆಂಬರ್ 6, 2020
19 °C
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಮತ

ರೈತ ವಿರೋಧಿ ಮಸೂದೆ ರೂಪಿಸಿಲ್ಲ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಇವು ಖಂಡಿತವಾಗಿ ರೈತ ವಿರೋಧಿ ಅಲ್ಲ. ಕಾಂಗ್ರೆಸ್ ಪಕ್ಷ ರೈತರನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ಅಮೋಘಾ ಹೋಟೆಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಪಿಎಂಸಿಯಲ್ಲಿ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಸೆಸ್‌ ಅನ್ನು ಶೇ 1ರಿಂದ 35 ಪೈಸೆಗೆ ಇಳಿಸಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಂಗ್ರೆಸ್‌ ದಲ್ಲಾಳಿಗಳ ಪರ ವಕಾಲತ್ತು ವಹಿಸುತ್ತಿದೆ’ ಎಂದು ದೂರಿದರು.

‘ಸ್ವಾತಂತ್ರ್ಯ ಹೋರಾಟವನ್ನು ನೆಪವಾಗಿ ಇಟ್ಟುಕೊಂಡು 70 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರೈತರನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ ಈ ಹುನ್ನಾರವನ್ನು ಬಿಜೆಪಿ ಕಾರ್ಯಕರ್ತರು ಬಯಲಿಗೆ ಎಳೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಮನೆ–ಮನೆಗೆ ತಲುಪಿಸಬೇಕು’ ಎಂದರು.

‘ಭೂಮಿಗೆ ಸಂಬಂಧಿಸಿದ ಹಲವು ಪ್ರಕರಣಗಳು ಇನ್ನೂ ಇತ್ಯರ್ಥವಾಗಬೇಕಿದೆ. ಭೂಸುಧಾರಣಾ ಕಾಯ್ದೆಯ ಅಗತ್ಯದ ಬಗ್ಗೆ ಕಂದಾಯ ಸಚಿವರು ವಿಧಾನಮಂಡಲದ ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ರೈತರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದು ಹೇಳಿದರು.

ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಮಾತನಾಡಿದರು. ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‍ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಂಪತ್‍ ಕುಮಾರ್, ಸುರೇಶ್‍ ಸಿದ್ದಾಪುರ, ವೆಂಕಟಸ್ವಾಮಿ, ಅಜ್ಜಪ್ಪ, ಶಿವಣ್ಣಾಚಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು