ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದಾಗಿ ರಕ್ತದಾನ ಪ್ರಮಾಣ ಕ್ಷೀಣ

ಆರೋಗ್ಯ ಇಲಾಖೆಯಿಂದ ವಾರಕ್ಕೆ ಎರಡು ಮಿನಿ ಶಿಬಿರ l ಸಾಮೂಹಿಕ ರಕ್ತದಾನಕ್ಕಿಲ್ಲ ಅವಕಾಶ
Last Updated 18 ಜುಲೈ 2021, 5:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ವೇಗವಾಗಿ ಹರಡಿದ್ದರಿಂದಾಗಿ ಜಿಲ್ಲೆಯಲ್ಲಿ 2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಕ್ತದಾನ ಪ್ರಮಾಣ ಕ್ಷೀಣಿಸಿತ್ತು. ಜೂನ್‌ ನಂತರ ಚೇತರಿಕೆ ಕಂಡಿದೆ. ಆದರೂ ಕೆಲವೆಡೆ ಪರದಾಡುವ ಸ್ಥಿತಿ ಇದೆ.

ಕೋವಿಡ್‌ಗೂ ಮುನ್ನ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ 8ರಿಂದ 10 ದಿನಗಳಿಗೊಮ್ಮೆ ಸಾಮೂಹಿಕ ಬೃಹತ್ ರಕ್ತದಾನ ಶಿಬಿರ ನಡೆಯುತ್ತಿತ್ತು. ಆ ವೇಳೆ ಕನಿಷ್ಠ 200ರಿಂದ 300 ಜನರು ರಕ್ತದಾನ ಮಾಡುತ್ತಿದ್ದರು. ಈಗ ಪರಿಸ್ಥಿತಿ ತದ್ವಿರುದ್ಧವಾಗಿದೆ. ಸಾಮೂಹಿಕ ರಕ್ತದಾನಕ್ಕೆ ನಿರ್ಬಂಧವಿದೆ. ಇದರಿಂದಾಗಿ ದಾನಿಗಳ ಸಂಖ್ಯೆಯೂ ಕಡಿಮೆಯಾಗಿದೆ.

ಕೊರೊನಾ ಸೋಂಕು ತಗುಲಿ ಗುಣಮುಖರಾದವರು ಹಾಗೂ ಕೋವಿಡ್‌ಗೆ ಲಸಿಕೆ ಪಡೆದವರು ರಕ್ತದಾನ ಮಾಡಬೇಕೆ, ಬೇಡವೇ ಎಂಬ ಗೊಂದಲದಲ್ಲಿ ಇದ್ದಾರೆ. ಇದರಿಂದಾಗಿಯೂ ಜಿಲ್ಲೆಯಲ್ಲಿ ರಕ್ತದಾನ ಪ್ರಮಾಣ ಕಡಿಮೆ ಆಗಿದೆ. ಮಾಹಿತಿ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಕೆಲವರು ರಕ್ತ ಪಡೆಯಲಿಕ್ಕಾಗಿ ಅಲೆದಾಡುತ್ತಿದ್ದಾರೆ.

ಇದನ್ನು ಮನಗಂಡ ಆರೋಗ್ಯ ಇಲಾಖೆ ಮೊದಲಿನಂತೆ ಸಹಜ ಸ್ಥಿತಿಯತ್ತ ಕೊಂಡೊಯ್ಯಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಅನೇಕ ತಿಂಗಳಿನಿಂದಲೂ ನಗರ ಹಾಗೂ ಪಟ್ಟಣ ಪ್ರದೇಶದ ವಿವಿಧ ಬಡಾವಣೆಗಳಲ್ಲಿ ಮಿನಿ ಶಿಬಿರಗಳನ್ನು ವಾರಕ್ಕೆ ಒಮ್ಮೆ ಆಯೋಜಿಸುವ ಮೂಲಕ ರಕ್ತ ಸಂಗ್ರಹಕ್ಕೆ ಮುಂದಾಗಿದೆ.

ಮೊದಲು ನಡೆಸಿದ್ದ ಮಿನಿ ಶಿಬಿರಗಳಲ್ಲಿ ಒಮ್ಮೆಗೆ 6 ಜನ ಮಾತ್ರ ರಕ್ತ ನೀಡಬಹುದಿತ್ತು. ಆದರೆ, ಈಗ 10 ಜನ ರಕ್ತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಮಾರ್ಗಸೂಚಿಯ ಅನ್ವಯ ಪ್ರತಿ ರಕ್ತದಾನಿಯೂ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ಶಿಬಿರಗಳಲ್ಲಿ ಮಂಚ ಸಿದ್ಧಪಡಿಸಲಾಗಿದೆ. ಶಿಬಿರದಲ್ಲಿ 15ಕ್ಕಿಂತ ಹೆಚ್ಚು ಜನರಿಂದ ಆರೋಗ್ಯ ಇಲಾಖೆ ರಕ್ತ ಸಂಗ್ರಹ ಮಾಡುತ್ತಿಲ್ಲ. ದಾನಿಗಳ ಸಂಖ್ಯೆ ಹೆಚ್ಚಾದಲ್ಲಿ ಮಾತ್ರ 20ಕ್ಕೆ ನಿಗದಿಪಡಿಸಲಾಗಿದೆ.

‘ಗರ್ಭಿಣಿಯರಿಗೆ, ಅನೀಮಿಯಾ, ಹಿಮೋಫಿಲಿಯಾ ಸೇರಿ ತುರ್ತು ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ವಾರಕ್ಕೊಮ್ಮೆ ನಿರಂತರವಾಗಿ ಮಿನಿ ಶಿಬಿರ ಆಯೋಜಿಸುತ್ತ ಬರಲಾಗುತ್ತಿದೆ. ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿಯ ಮಾರ್ಗಸೂಚಿಯ ಅನ್ವಯ ಶಿಬಿರ ನಡೆಯುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ
ಡಾ.ಆರ್.ರಂಗನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ನಿಂದ ಗುಣಮುಖರಾದ, ಲಸಿಕೆ ಪಡೆದ 28 ದಿನ ಇಲ್ಲವೇ ತಿಂಗಳ ನಂತರ ಯಾವುದೇ ಅನಾರೋಗ್ಯ, ಗಂಭೀರ ಆರೋಗ್ಯ ಸಮಸ್ಯೆ ಇಲ್ಲದವರು ರಕ್ತದಾನ ಮಾಡಬಹುದು. ಜ್ವರ, ಕೆಮ್ಮು, ಶೀತ ಇತರ ಕೋವಿಡ್‌ ರೋಗ ಲಕ್ಷಣ ಇಲ್ಲದ ದಾನಿಗಳು ಅರ್ಹರಾಗಿದ್ದಾರೆ. ಸಂಗ್ರಹಿಸಿದ ರಕ್ತವನ್ನು ರೋಗಿಗಳಿಗೆ ನೀಡುವಾಗಲೂ ಪರೀಕ್ಷಿಸಲಾಗುತ್ತಿದೆ’ ಎಂದು ಹೇಳಿದರು.

ತುರ್ತು ರಕ್ತ ಅಗತ್ಯ ಇರುವ ರೋಗಿ ಹೊರತುಪಡಿಸಿ ಹೆಚ್ಚಿನ ಸಂಖ್ಯೆಯ ದಾನಿಗಳು ಆಸ್ಪತ್ರೆಯ ಕಡೆ ಮುಖ ಕೂಡ ಮಾಡಿಲ್ಲ. ಆದರೆ, ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಕೆಲ ಆಸಕ್ತರು ಆಸ್ಪತ್ರೆಗೆ ತೆರಳಿ ಅಂತರ ಕಾಯ್ದುಕೊಳ್ಳುವ ಮೂಲಕ ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ. ಮೂರು ದಿನಗಳಿಗೊಮ್ಮೆ ಕನಿಷ್ಠ 5ರಿಂದ 10 ಜನ ದಾನ ಮಾಡುತ್ತಿದ್ದಾರೆ. ಹೊಳಲ್ಕೆರೆ, ಚಳ್ಳಕೆರೆ ಹಾಗೂ ಹೊಸದುರ್ಗದಲ್ಲಿ ಮಿನಿ ಶಿಬಿರಗಳು ನಡೆದಿವೆ. ಅನೇಕ ಸಮುದಾಯಗಳು ರಕ್ತದಾನಕ್ಕೆ ಪ್ರೋತ್ಸಾಹ ನೀಡುತ್ತಿವೆ. ಇದು ಜಿಲ್ಲಾ ಆರೋಗ್ಯ ಇಲಾಖೆಗೆ ಸಮಾಧಾನ ತಂದಿದೆ.

ಡಯಾಲಿಸಿಸ್‌ಗೂ ತೊಂದರೆ ಆಗಿಲ್ಲ

‘ಕಿಡ್ನಿ ಸಮಸ್ಯೆಯಿಂದಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿರುವ ರೋಗಿಗಳಿಗೂ ತೊಂದರೆ ಉಂಟಾಗದಂತೆ ಎಚ್ಚರ ವಹಿಸಲಾಗಿದೆ. ಅದಕ್ಕಾಗಿ ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲೂ ಕೊರತೆ ಉಂಟಾಗಿಲ್ಲ’ ಎಂದು ಡಾ.ರಂಗನಾಥ್ ತಿಳಿಸಿದ್ದಾರೆ.

‘ದೇಶ ರಕ್ಷಣೆಗೆ ಸೈನಿಕರು ಎಷ್ಟು ಮುಖ್ಯವೋ ಸಮಾಜದೊಳಗೆ ರಕ್ತದಾನವೂ ಅಷ್ಟೇ ಮುಖ್ಯ. ಒಬ್ಬರ ರಕ್ತದಾನದಿಂದ ನಾಲ್ವರು ರೋಗಿಗಳ ಜೀವ ಉಳಿಯಲಿದೆ. ಅದಕ್ಕಾಗಿ ಇದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಇಂತಹ ಮಹತ್ತರ ಕಾರ್ಯಕ್ಕೆ ದಾನಿಗಳು ಮುಂದೆ ಬರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಮೂರನೇ ಅಲೆ: ಕೇಂದ್ರಗಳ ಮನವಿ

ಜಿಲ್ಲೆಯ ಚಿತ್ರದುರ್ಗದಲ್ಲಿ ಮೂರು ಹಾಗೂ ಚಳ್ಳಕೆರೆಯಲ್ಲಿ ಒಂದು ರಕ್ತನಿಧಿ ಕೇಂದ್ರವಿದೆ. ಆರೂ ತಾಲ್ಲೂಕುಗಳಲ್ಲೂ ಶೇಖರಿಸಿ ಇಟ್ಟುಕೊಳ್ಳಲು ತಾಲ್ಲೂಕು ಆಸ್ಪತ್ರೆಗಳಲ್ಲಿ ಘಟಕಗಳಿವೆ. ಕೋವಿಡ್ ಮೂರನೇ ಅಲೆಗೂ ಮುನ್ನವೇ ಸಾಧ್ಯವಾದಷ್ಟು ರಕ್ತ ಸಂಗ್ರಹ ಮಾಡಿಕೊಳ್ಳಲು ಕೆಲ ಕೇಂದ್ರಗಳು ಈಗಿನಿಂದಲೇ ದಾನಿಗಳ ಸಂಪರ್ಕದಲ್ಲಿವೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಯಾರಾದರೂ ರಕ್ತಕ್ಕಾಗಿ ಕೇಂದ್ರಗಳ ಬಳಿ ಬಂದಾಗ ಎಷ್ಟು ಬಾಟಲಿ ಬೇಕು ಎಂದು ಕೇಂದ್ರದವರು ಕೇಳುತ್ತಿದ್ದರು. ಆದರೀಗ ಯಾವುದಾದರೂ ಗುಂಪಿನ ರಕ್ತ ನೀಡಿದರೆ, ಕೆಲ ಕೇಂದ್ರಗಳು ಅದೇ ಗುಂಪಿನ ರಕ್ತದಾನ ಮಾಡುವವರನ್ನು ಕರೆ ತನ್ನಿ. ಇದರಿಂದ ಬೇರೆಯವರಿಗೆ ಅನುಕೂಲವಾಗಲಿದೆ ಎಂಬುದಾಗಿ ರಕ್ತ ಪಡೆಯಲು ಬಂದವರಲ್ಲಿ ಮನವಿ ಮಾಡಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT