ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಬಿಆರ್‌ಸಿ ಕಚೇರಿ ಚೆಂದಗೊಳಿಸಿದ ‘ವರ್ಲಿ’

ಶಿಕ್ಷಕರಾದ ಚಂದ್ರಶೇಖರಾಚಾರ್, ಶ್ರೀಶೈಲ, ಲೋಕೇಶಪ್ಪ ಕೈಯಲ್ಲಿ ಅರಳಿದ ಚಿತ್ರಗಳು
Last Updated 7 ಅಕ್ಟೋಬರ್ 2020, 1:55 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಗೋಡೆಗಳ ಮೇಲೆ ವರ್ಲಿ ಕಲೆ ಅರಳಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ. ಕಚೇರಿ ಸಮೀಪಿಸುತ್ತಿದ್ದಂತೆ ಚಿತ್ತಾಕರ್ಷಕ ಚಿತ್ರಗಳು ಮನ ತಣಿಸುತ್ತವೆ.

ಕಚೇರಿಯ ಹೊರ ಗೋಡೆಗಳ ಮೇಲೆ ಬರೆದಿರುವ ಎತ್ತಿನ ಬಂಡಿ, ಕುಣಿಯುತ್ತಿರುವ ಚಿಣ್ಣರು, ವಿಧವಿಧದ ಹೂ ಬಳ್ಳಿಗಳ ಚಿತ್ರಗಳು ನೋಡುಗರ ಮನತಣಿಸುತ್ತಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ, ಬೈಸಿಕಲ್, ಪಠ್ಯಪುಸ್ತಕ ವಿತರಣೆ, ಚಿಣ್ಣರ ದರ್ಶನ ಪ್ರವಾಸ, ಬಾ ಬಾಲೆ ಶಾಲೆಗೆ, ವಿದ್ಯಾಗಮ ಮತ್ತಿತರ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಇಲ್ಲಿ ಬಿಡಿಸಲಾಗಿದೆ.

‘ಮಹಾರಾಷ್ಟ್ರದ ಬುಡಕಟ್ಟು ಜನ ಮನೆಗಳ ಗೋಡೆಗಳ ಮೇಲೆ ಈ ವರ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದರು. ಇದು ವಿಶೇಷ ಕಲೆ ಆಗಿರುವುದರಿಂದ ಈಚೆಗೆ ಹೆಚ್ಚು ಪ್ರಖ್ಯಾತವಾಗಿದೆ. ಕಾಂಪೌಂಡ್, ಕಚೇರಿಗಳ ಗೋಡೆಗಳ ಮೇಲೆ ಬರೆಯಲಾಗುತ್ತಿದೆ. ಟೆರಕೋಟ್ (ಮರೂನ್) ಹಾಗೂ ಬಿಳಿ ಬಣ್ಣಗಳನ್ನು ಮಾತ್ರ ಬಳಸಿ ಈ ಚಿತ್ರಗಳನ್ನು ಬಿಡಿಸುತ್ತೇವೆ. ಜಾನಪದ ಸೊಗಡಿನ ಚಿತ್ರಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ತೆಳುವಾದ ಕಡ್ಡಿಚಿತ್ರಗಳು ರಂಗೋಲಿ ಪ್ರಕಾರದ ಚೌಕ, ವೃತ್ತಾಕಾರದ ಚಿತ್ರಗಳು ನೋಡಲು ಅಂದವಾಗಿರುತ್ತವೆ’ ಎನ್ನುತ್ತಾರೆ ಚಿತ್ರಗಳನ್ನು ಬಿಡಿಸಿದ ವಿಶ್ವನಾಥನ ಹಳ್ಳಿಯ ದುರ್ಗಾಂಬಿಕಾ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸಿ.ಎಂ.ಚಂದ್ರಶೇಖರಾಚಾರ್.

‘ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಅವರ ಸಲಹೆ ಮೇರೆಗೆ ಬಿಇಒ ಕಚೇರಿಯ ಗೋಡೆಗೂ ಚಿತ್ರಗಳನ್ನು ಬರೆದಿದ್ದೇವೆ. ಎಂ.ಎಂ.ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀಶೈಲ, ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯ ಶಿಕ್ಷಕ ಎಸ್.ಲೋಕೇಶಪ್ಪ ಮತ್ತು ನಾನು ಸುಮಾರು 15 ದಿನಗಳಲ್ಲಿ ಈ ಚಿತ್ರಗಳನ್ನು ಬರೆದಿದ್ದೇವೆ’ ಎನ್ನುತ್ತಾರೆ
ಅವರು.

‘ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಗಾಗ ಶಿಕ್ಷಕರಿಗೆ ತರಬೇತಿಗಳು ನಡೆಯುತ್ತವೆ. ಕಚೇರಿಯ ಗೋಡೆಗಳ ಮೇಲೆ ಬರೆದಿರುವ ಚಿತ್ರಗಳನ್ನು ನೋಡಿದರೆ ಮನಸ್ಸು ಉಲ್ಲಾಸಿತವಾಗುತ್ತದೆ. ನಮ್ಮ ಚಿತ್ರಕಲಾ ಶಿಕ್ಷಕರು ಹೆಚ್ಚು ಆಸಕ್ತಿಯಿಂದ ಚಿತ್ರಗಳನ್ನು ಬರೆದಿದ್ದಾರೆ. ಕಚೇರಿಗೆ ಬರುವ ಎಲ್ಲ ಶಿಕ್ಷಕರು ಚಿತ್ರಕಲೆಯನ್ನು ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ನಮ್ಮ ಕಚೇರಿಯ ಬಿಆರ್‌ಪಿ, ಸಿಆರ್‌ಪಿಗಳ ಕೊಡುಗೆಯೂ ಇದೆ’ ಎನ್ನುತ್ತಾರೆ ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ತಿಪ್ಪೇಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT