ಭಾನುವಾರ, ನವೆಂಬರ್ 29, 2020
19 °C
ನಾಯಕನಹಟ್ಟಿ: ಕಣ್ಮುಚ್ಚಿ ಕುಳಿತ ಸ್ಥಳೀಯ ಆಡಳಿತ; ಸಾರ್ವಜನಿಕರ ಅಸಮಾಧಾನ

ಒಡೆದ ಪೈಪ್‌; ನೀರು ಚರಂಡಿ ಪಾಲು

ವಿ.ಧನಂಜಯ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಕುಡಿಯುವ ಹನಿ ನೀರಿಗೂ ಪರಾಡುವ ಸ್ಥಿತಿ ಇರುವ ನಾಯಕನಹಟ್ಟಿ ಪಟ್ಟಣದಲ್ಲಿ ಮೂರ‍್ನಾಲ್ಕು ದಿನಗಳಿಂದ ಮುಖ್ಯ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದ್ದರೂ ಕಂಡೂ ಕಾಣದಂತೆ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 16 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ನಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಕೊಳವೆಬಾವಿಗಳು ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಮತ್ತು ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ದೊಡ್ಡಕೆರೆಯಲ್ಲಿವೆ.

5 ವರ್ಷಗಳಿಂದ ಸಕಾಲಕ್ಕೆ ಮಳೆ ಇಲ್ಲದೆ ಪಟ್ಟಣಕ್ಕೆ ಜೀವಜಲ ಪೂರೈಕೆಯ ಕೇಂದ್ರವಾದ ಚಿಕ್ಕಕೆರೆ ಮತ್ತು ದೊಡ್ಡಕೆರೆಗಳು ನೀರಿಲ್ಲದೆ ಬತ್ತಿ ಹೋಗಿದ್ದವು. ಆದರೆ, ಮೂರು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆಬಾವಿಗಳಲ್ಲಿ ಜಲ ಮರುಪೂರಣವಾಗಿದೆ.

ಆದರೂ ಪಟ್ಟಣದ 6, 7, 8, 9 ಮತ್ತು 14ನೇ ವಾರ್ಡ್‌ಗಳಿಗೆ ನಾಲ್ಕು ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ನಾಗರಿಕರು ಜೀವಜಲಕ್ಕಾಗಿ ಹಾತೊರೆಯುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರಿದ್ದರೂ ಕ್ರಮಬದ್ಧವಾಗಿ ಮತ್ತು ನಿರಂತರವಾಗಿ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ.

ನೀರು ಪೂರೈಕೆ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳಿವೆ. ಕಳೆದ ಮೂರು ದಿನಗಳಿಂದ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಹಾದುಹೋಗಿರುವ 4 ಇಂಚಿನ ಮುಖ್ಯ ಪೈಪ್‌ಲೈನ್ ಒಡೆದು ಹೋಗಿದೆ. ಪರಿಣಾಮ ರಸ್ತೆಯ ಮೇಲೆ ಕುಡಿಯುವ ನೀರು ಹರಿದು ಚರಂಡಿ ಸೇರುತ್ತಿದೆ. ಜತೆಗೆ 7ನೇ ವಾರ್ಡ್‌ನಲ್ಲಿರುವ ಸೇತುವೆಯ ಕೆಳಗಡೆ ಇದೇ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಚರಂಡಿಗೆ ಹರಿಯುತ್ತಿದೆ.

‘ಇದರಿಂದ ಹಲವು ವಾರ್ಡ್‌ಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ. ಪಟ್ಟಣ ಪಂಚಾಯಿತಿಯು ಪೈಪ್‌ಲೈನ್ ದುರಸ್ತಿಗೆಂದು ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟರೂ ಸಕಾಲಕ್ಕೆ ಪೈಪ್‌ಲೈನ್ ದುರಸ್ತಿಗೊಳಿಸುತ್ತಿಲ್ಲ. ಜತೆಗೆ ಕಳಪೆ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಿರುವುದರಿಂದ ಪದೇಪದೇ ಪೈಪ್‌ಲೈನ್ ಒಡೆದುಕೊಳ್ಳುತ್ತಿವೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

**

ಕಳಪೆ ಗುಣಮಟ್ಟದ ಪೈಪ್‌ಲೈನ್ ಅಳವಡಿಸಿರು ವುದರಿಂದ ಪದೇಪದೇ ಪೈಪ್‌ ಒಡೆದು ಹೋಗುತ್ತಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು

ಬೋರ್‌ವೆಲ್‌ ಮಂಜುನಾಥ, ಸ್ಥಳಿಯ ನಿವಾಸಿ

***

ಪ್ರಸ್ತುತ ನೀರು ಸರಬರಾಜು ನಿಲ್ಲಿಸಲಾಗಿದ್ದು, ತಕ್ಷಣವೇ ಪೈಪ್‌ಲೈನ್ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದು

ಎಚ್.ಡಿ.ಲಿಂಗರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.