ಬುಧವಾರ, ಮಾರ್ಚ್ 29, 2023
32 °C

ಸಂಸ್ಕಾರ ಸಮಾಜದ ಆಸ್ತಿ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ಸನ್ನಡತೆಯ ಸಂಸ್ಕಾರ ಹೊಂದಿದವನು ಸಮಾಜದ ಆಸ್ತಿ ಆಗುತ್ತಾನೆ. ಸಂಸ್ಕಾರ ಕೇವಲ ಪೂಜೆ, ಪ್ರಾರ್ಥನೆಗಳಷ್ಟೇ ಅಲ್ಲ, ನಡವಳಿಕೆಗಳೂ ಸಂಸ್ಕಾರದ ಫಲಗಳೇ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 6ನೇ ದಿನವಾದ ಭಾನುವಾರ ಬೆಳಿಗ್ಗೆ ನಡೆದ ಚಿಂತನಾ ಸಭೆಯಲ್ಲಿ ಹವ್ಯಾಸಗಳ ಕುರಿತು ಮಾತನಾಡಿದರು.

‘ದೈನಂದಿನ ಚಟುವಟಿಕೆಯ ಮಧ್ಯೆ ಮಾನವನ ಬದುಕು ಶಿಸ್ತುಬದ್ಧವಾಗಿದೆ. ಇದಕ್ಕೆ ಕಾರಣ ಆತನಿಗೆ ಸಿಕ್ಕ ಸಂಸ್ಕಾರ. ಸಂಸ್ಕಾರವೇ ಸಾಧನೆಗೆ ಪ್ರೇರಣೆ. ಆದರೆ ಎಂಥ ಸಂಸ್ಕಾರ ಬೇಕು ಎನ್ನುವುದು ಮುಖ್ಯವಾದುದು. ಪರ ಅಥವಾ ವಿರೋಧ, ಸನ್ನಡತೆ ಅಥವಾ ದುರ್ನಡತೆಗಳೆರಡೂ ಇರುತ್ತವೆ. ಸಂಸ್ಕಾರವಂಥ ವ್ಯಕ್ತಿಗಳ ಸಂಪರ್ಕದಿಂದಾಗಿ ಅನೇಕರು ದಾರ್ಶನಿಕರಾಗಿ, ಶರಣರಾಗಿ ಬದಲಾಗಿದ್ದಾರೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ವರ್ತಮಾನ ಸರಿಯಿದ್ದರೆ ಭೂತ, ಭವಿಷ್ಯಗಳೂ ಸರಿಯಾಗಿರುವವು. ವ್ಯಕ್ತಿ ತನ್ನ ಸಂಸ್ಕಾರ, ಹವ್ಯಾಸಗಳಿಂದ ಬಸವಣ್ಣನವರಂತೆ ಭೂತ, ವರ್ತಮಾನ, ಭವಿಷ್ಯದಲ್ಲೂ ಸ್ಮರಣೀಯರಾಗಲು ಸಾಧ್ಯ. ಬೇಗ ಮಲಗಿ ಬೇಗ ಏಳುವ, ಸದಾ ಒಂದಿಲ್ಲೊಂದು ಕಾಯಕ ಮಾಡುವ, ಮತ್ತೊಬ್ಬರನ್ನು ಗೌರವಿಸುವ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇಂಥ ಹವ್ಯಾಸಗಳೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಂಥವು’ ಎಂದು ಸಲಹೆ ನೀಡಿದರು.

ಸಂಗೀತ ಶಿಕ್ಷಕರಾದ ಸಿದ್ಧರಾಮ ಕೇಸಾಪುರ, ಕೆ.ಜ್ಯೋತಿ, ಎಚ್.ಎಸ್.ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿನಿ ತೋರಣ ನಿರೂಪಿಸಿದರು. ವಿದ್ಯಾರ್ಥಿಗಳು, ಗ್ರಾಮಸ್ಥರು, ನೌಕರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು