ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಸಾರಿಗೆ ಬಸ್‌ ಸಂಚಾರ

ಹಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರು, ಸೇವೆ ಒದಗಿಸಿದ 25 ಬಸ್‌
Last Updated 11 ಏಪ್ರಿಲ್ 2021, 12:19 IST
ಅಕ್ಷರ ಗಾತ್ರ

ಚಿತ್ರದುರ್ಗ: ನೌಕರರ ಮುಷ್ಕರದ ನಡುವೆಯೂ ಸಾರಿಗೆ ಬಸ್‌ ಸಂಚಾರ ದಿನ ಕಳೆದಂತೆ ಹೆಚ್ಚುತ್ತಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯ ಸಂಖ್ಯೆ ಏರಿಕೆ ಕಾಣುತ್ತಿದೆ. ಚಿತ್ರದುರ್ಗ ವಿಭಾಗದಲ್ಲಿ ಭಾನುವಾರ 25 ಕ್ಕೂ ಹೆಚ್ಚು ಬಸ್‌ಗಳು ಸಾರ್ವಜನಿಕರಿಗೆ ಸೇವೆ ಒದಗಿಸಿವೆ.

ಆರನೇ ವೇತನ ಆಯೋಗಕ್ಕೆ ಪಟ್ಟುಹಿಡಿರುವ ಸಾರಿಗೆ ನೌಕರರ ಮುಷ್ಕರ ಐದು ದಿನ ಪೂರೈಸಿದೆ. ವಿಭಾಗದ 1,250 ನೌಕರರಲ್ಲಿ 50ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸೋಮವಾರ ಇನ್ನಷ್ಟು ಸಿಬ್ಬಂದಿ ಕೆಲಸಕ್ಕೆ ಬರಲಿದ್ದು, ಸಾರಿಗೆ ಬಸ್‌ ಸಂಚಾರದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ.

ಬೆಂಗಳೂರಿಗೆ ಹೆಚ್ಚು ಬಸ್‌

ಭಾನುವಾರ ಬೆಳಿಗ್ಗೆ ಕೆಲ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಚಾಲಕರು ಮತ್ತು ನಿರ್ವಾಹಕರನ್ನು ಹಲವು ಮಾರ್ಗಗಳಿಗೆ ನಿಯೋಜಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರಲ್ಲಿ ಭರವಸೆ ಮೂಡಿತು. ರಸ್ತೆಯಲ್ಲಿಯೂ ಸಾರಿಗೆ ಬಸ್‌ ಸಂಚಾರ ಕಂಡುಬಂದಿತು.

ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಚಳ್ಳಕೆರೆ ಹಾಗೂ ಪಾವಗಡಕ್ಕೆ ಕೆಎಸ್ಆರ್‌ಟಿಸಿ ಬಸ್‌ ಸಂಚರಿಸಿದವು. ಸುಮಾರು ಹಲವು ಮಾರ್ಗಗಳಲ್ಲಿ ಬಸ್‌ಗಳು ಸೇವೆ ಒದಗಿಸಿದವು. ಯುಗಾದಿ ಹಬ್ಬದ ಅಂಗವಾಗಿ ಹೆಚ್ಚು ಬೇಡಿಕೆ ಇರುವ ಬೆಂಗಳೂರು ಹಾಗೂ ದಾವಣಗೆರೆಗೆ ಹೆಚ್ಚು ಬಸ್‌ಗಳನ್ನು ಮೀಸಲಿರಿಸಲಾಗಿತ್ತು. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕರ್ತವ್ಯಕ್ಕೆ ಗೈರಾಗಿರುವ ಸಿಬ್ಬಂದಿಯ ವೇತನ ಕಡಿತ ಮಾಡಲಾಗುತ್ತಿದೆ. ಕರ್ತವ್ಯಕ್ಕೆ ಹಾಜರಾದವರಿಗೆ ಮಾತ್ರ ವೇತನ ನೀಡಲು ಸರ್ಕಾರ ಸೂಚನೆ ನೀಡಿದೆ. ಕೆಲಸಕ್ಕೆ ತೊಂದರೆ ಆಗದಂತೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಿಗೆ ಪೊಲೀಸರು ಭದ್ರತೆ ನೀಡಿದ್ದಾರೆ. ಪ್ರತಿಭಟನೆ ನಡೆಸದಂತೆ ಹಾಗೂ ಕಾನೂನು ಕೈಗೆತ್ತಿಕೊಳ್ಳದಂತೆ ನೌಕರರ ಸಂಘಕ್ಕೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪಟ್ಟು ಸಡಿಲಿಸಲು ಸಾಧ್ಯವಿಲ್ಲ

ಆರನೇ ವೇತನ ಆಯೋಗದ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಪಟ್ಟು ಸಡಿಲಿಸದೇ ಇರಲು ತೀರ್ಮಾನಿಸಲಾಗಿದೆ.

‘ಸಾರಿಗೆ ನೌಕರರು ಒಗ್ಗಟ್ಟಾಗಿ ಇದ್ದೇವೆ. ಕಚೇರಿಯ ಕೆಲ ಸಿಬ್ಬಂದಿ, ಅಧಿಕಾರಿಗಳ ಕಾರು ಚಾಲಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿರಬಹುದು. ಕರ್ತವ್ಯದಿಂದ ಹೊರಗೆ ಉಳಿದು ಹೋರಾಟ ಮುಂದುವರಿಸುತ್ತಿದ್ದೇವೆ’ ಎಂದು ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಆರನೇ ವೇತನ ಆಯೋಗದ ಜಾರಿಗೆ ಸರ್ಕಾರ ಸಿದ್ಧವಿದೆ. ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೂ ಈ ಬಗ್ಗೆ ಒಲವಿದೆ. ಆದರೆ, ನಿಗಮದ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಸರ್ಕಾರದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮಾತ್ರ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಖಾಸಗಿ ಬಸ್‌: ಪ್ರಯಾಣಿಕರ ಹೆಚ್ಚಳ

ಸಾರಿಗೆ ನೌಕರರ ಮುಷ್ಕರದಿಂದ ಸಮಸ್ಯೆಗೆ ಸಿಲುಕಿದ ಸಾರ್ವಜನಿಕರು ಖಾಸಗಿ ಬಸ್‌ ಸೇವೆ ಪಡೆಯುತ್ತಿದ್ದಾರೆ. ಇದರಿಂದ ಖಾಸಗಿ ಬಸ್‌ ಸಂಚಾರ ಹೆಚ್ಚಳವಾಗಿದೆ.

ದಾವಣಗೆರೆ, ಹಿರಿಯೂರು, ಬೆಂಗಳೂರು ಮಾರ್ಗಕ್ಕೆ ಸಾರಿಗೆ ಬಸ್‌ ನಿಲ್ದಾಣದಿಂದಲೇ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತಿದ್ದ ಮಾರ್ಗದಲ್ಲಿ ಖಾಸಗಿ ಬಸ್‌ ಸೇವೆ ನೀಡುತ್ತಿವೆ. ಆದರೆ, ಸಮಯ ಹಾಗೂ ಕೋವಿಡ್ ಮಾರ್ಗಸೂಚಿಗಳು ಮಾತ್ರ ಪಾಲನೆಯಾಗುತ್ತಿಲ್ಲ.

ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ರಾತ್ರಿ ಕರ್ಫ್ಯೂ ಹೆರಿದೆ. ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಖಾಸಗಿ ಬಸ್‌ಗಳು ಮಾತ್ರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಅಂತರ ಕಾಣೆಯಾಗಿದ್ದು, ಮಾಸ್ಕ್‌ ಧರಿಸಿದವರೂ ಇಲ್ಲಿ ಅಪರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT